ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೂನ್ 1ರವರೆಗೆ ಮಧ್ಯಂತರ ಜಾಮೀನು ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ಅವರಿದ್ದ ಪೀಠ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿರುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿತು.
“ಚುನಾವಣಾ ಪ್ರಚಾರಕ್ಕಾಗಿ ಮಾತ್ರ ಜೂನ್ 1ರವರೆಗೆ ಜಾಮೀನು ನೀಡಲಾಗಿದೆ. ಜೂನ್ 2ರಂದು ನೀವು ನ್ಯಾಯಾಲಯಕ್ಕೆ ಶರಣಾಗಬೇಕು” ಎಂದು ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ
“ಲೋಕಸಭೆ ಚುನಾವಣೆ ನಡೆಯುತ್ತಿರುವ ಕಾರಣದಿಂದ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸಬೇಕಾತ್ತದೆ. ಮಧ್ಯಂತರ ಜಾಮೀನು ಪಡೆದುಕೊಂಡರೆ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಬಾರದು” ಎಂದು ಪೀಠವು ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ
“ಒಂದು ವೇಳೆ ಚುನಾವಣೆಯ ಕಾರಣದಿಂದ ನಿಮಗೆ ಮಧ್ಯಂತರ ಜಾಮೀನು ನೀಡಿದರೆ ನೀವು ಎಲ್ಲೇ ಇದ್ದರೂ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಬಾರದು. ಇದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ನಾವು ನಿಮ್ಮ ಸರ್ಕಾರದ ಕಾರ್ಯಕಲಾಪಗಳಲ್ಲಿ ಮಧ್ಯಸ್ಥಿಕೆ ವಹಿಸುವುದಿಲ್ಲ” ಎಂದು ಪೀಠ ತಿಳಿಸಿತ್ತು.
ದೆಹಲಿ ಅಬಕಾರಿ ನೀತಿ ಹಗರಣ ನೀತಿ ಸಂಬಂಧ ಅರವಿಂದ್ ಕೇಜ್ರಿವಾಲ್ ಅವರು ಮಾ.21ರಂದು ಬಂಧಿತರಾಗಿ ಏ.1 ರಿಂದ ತಿಹಾರಿ ಸೆರೆಮನೆಯಲ್ಲಿದ್ದಾರೆ.
