ತುಮಕೂರು ಜಿಲ್ಲೆಗೆ ಮಂಜೂರಾಗಿರುವ 24.08 ಟಿಎಂಸಿ ನೀರಿನಲ್ಲಿಯೇ ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ರಾಮನಗರ ಜಿಲ್ಲೆ ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಶ್ರೀರಂಗ ಏತ ನೀರಾವರಿ ಯೋಜನೆಯನ್ನು ಮೇ 15ರೊಳಗೆ ಸಂಪೂರ್ಣವಾಗಿ ಸ್ಥಗಿತಗೊಳಿಸದಿದ್ದರೆ, ಮೇ 16ರಿಂದ ತುಮಕೂರು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ರೈತ ಸಂಘಟನೆಗಳು, ಮಠಾಧೀಶರುಗಳು ಪಕ್ಷಾತೀತವಾಗಿ ಎಕ್ಸ್‌ಪ್ರೆಸ್ ಕೆನಾಲ್ ಸ್ಥಗಿತಗೊಳಿಸುವಂತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.
ತುಮಕೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “ಹೇಮಾವತಿ ಜಲಾಶಯದಿಂದ ಕುಣಿಗಲ್ ತಾಲೂಕಿಗೆ 3 ಟಿಎಂಸಿ ನೀರು ಹಂಚಿಕೆಯಾಗಿದ್ದು, ನಾಲೆಯ 0-241 ಕಿಮೀವರೆಗೆ ನೀರು ತೆಗೆದುಕೊಂಡು ಹೋಗಲು ಸುಮಾರು 751 ಕೋಟಿ ರೂ.ಗಳನ್ನು ಖರ್ಚು ಮಾಡಿ 72-241ರವರೆಗೆ ನಾಲೆಯ ಅಧುನೀಕರಣ ಕಾಮಗಾರಿಯೂ ಚಾಲ್ತಿಯಲ್ಲಿದೆ. ಆದರೂ ನೆರೆಯ ಮಾಗಡಿ ತಾಲೂಕಿಗೆ ನೀರು ತೆಗೆದುಕೊಂಡು ಹೋಗಲು, ಕೆಡಿಪಿ ಸಭೆಯ ನಿರ್ಣಯವನ್ನು ಲೆಕ್ಕಿಸದೆ ಸರ್ಕಾರಿ ಭೂಮಿ ಇರುವ ಕಡೆ ಕಾಮಗಾರಿಯನ್ನು ಹೇಮಾವತಿ ನಾಲಾ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆ. ಇದರಿಂದ ಜಿಲ್ಲೆಗೆ, ಜನರಿಗೆ ಬಹಳ ಅನ್ಯಾಯವಾಗಲಿದೆ” ಎಂದರು.
“ಎಕ್ಸ್‌ಪ್ರೆಸ್ ಕೆನಾಲ್ ಆರಂಭವಾದರೆ 72 ಕಿಮೀಗಿಂತ ಹಿಂದೆ ಇರುವ ಗುಬ್ಬಿ, ಮಧುಗಿರಿ, ಕೊರಟಗೆರೆ, ತುಮಕೂರು ನಗರ, ಗ್ರಾಮಾಂತರ ತಾಲೂಕುಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಕಾಮಗಾರಿ ನಿಲ್ಲಿಸುವಂತೆ ಜಿಲ್ಲೆಯ ಇಬ್ಬರು ಮಂತ್ರಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಮಾಡಲಾಗಿದೆ. ಸರ್ಕಾರ ಮೇ 15ರೊಳಗೆ ಕಾಮಗಾರಿ ನಿಲ್ಲಿಸದಿದ್ದರೆ ಮೇ 16ರಂದು ಆರಂಭವಾಗಿರುವ ಕಾಮಗಾರಿಯನ್ನು ಮುಚ್ಚುವ ಹೋರಾಟವನ್ನು ಜಿಲ್ಲೆಯ ಜನರೊಂದಿಗೆ ಹಮ್ಮಿಕೊಳ್ಳಲಾಗುವುದು” ಎಂದು ತಿಳಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, “ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿಯೇ ತರಾತುರಿಯಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗಲು ಹಾಲಿ ಇರುವ ನಾಲೆಯ ಮಾರ್ಗವನ್ನು ಬದಲಾಯಿಸಲು ಹೊರಟಿದ್ದಾರೆ. ಜಿಲ್ಲಾ ಕೆಡಿಪಿ ಸಭೆಯ ನಿರ್ಣಯಕ್ಕೂ ಬೆಲೆ ಇಲ್ಲದಂತೆ ಖಾಸಗಿ ಜಮೀನುಗಳನ್ನು ಹೊರತುಪಡಿಸಿ, ಸರ್ಕಾರಿ ಭೂಮಿಯಲ್ಲಿ ಕಾಮಗಾರಿ ನಡೆಸುತಿದ್ದಾರೆ. ನ್ಯಾಯೋಚಿತವಾಗಿ ಕಾಮಗಾರಿಯನ್ನು ನಿಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸಹಕಾರಿ ಸಚಿವರೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೂ ಮನವಿ ಸಲ್ಲಿಸಿದ್ದೇವೆ. ಸರ್ಕಾರಕ್ಕೆ ಮೇ 15ರವರೆಗೆ ಗಡುವು ನೀಡಿದ್ದು, ಮೇ 16ರಿಂದ ಜಿಲ್ಲೆಯ ರೈತರು, ಜನಪ್ರತಿನಿಧಿಗಳು, ಮಠಾಧೀಶರೊಂದಿಗೆ ಈಗಾಗಲೇ ನಡೆದಿರುವ ಕಾಮಗಾರಿಯನ್ನು ಮುಚ್ಚುವ ಕೆಲಸ ಮಾಡಲಿದ್ದೇವೆ. ಇದಕ್ಕಾಗಿ ಯಾವ ರೀತಿಯ ಹೋರಾಟಕ್ಕೂ ಸಿದ್ದ. ಜಿಲ್ಲೆಯ ಜನರಿಗೋಸ್ಕರ ಜೈಲಿಗೆ ಹೋಗಲೂ ಕೂಡಾ ತಯಾರಿದ್ದೇವೆ” ಎಂದರು.
ಶಾಸಕ ಬಿ ಸುರೇಶ್ ಗೌಡ ಮಾತನಾಡಿ, “ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇದೊಂದು ನಿರ್ಣಾಯಕ ಹೋರಾಟವಾಗಿದೆ. ಜಿಲ್ಲೆಯ ಉಸ್ತುವಾರಿ ಸಚಿವರು, ಸಹಕಾರಿ ಸಚಿವರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ಹೋರಾಟಗಾರರು ಈ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ಹೋರಾಟದಲ್ಲಿ ಭಾಗಿಯಾಗಬೇಕಿದೆ” ಎಂದರು.
ಮಾಜಿ ಶಾಸಕ ಹೆಚ್ ನಿಂಗಪ್ಪ ಮಾತನಾಡಿ, “ಜಿಲ್ಲೆಗೆ ಹಂಚಿಕೆಯಾಗಿರುವ 25.08 ಟಿಎಂಸಿ ನೀರೇ ಸಾಕಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾಲೆಯನ್ನೇ ಡೈವರ್ಟ್ ಮಾಡಿ ಬೇರೆ ಜಿಲ್ಲೆಗೆ ನೀರು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟರೆ, ಮುಂದಿನ ಪೀಳಿಗೆ ನಮಗೆ ಶಾಪ ಹಾಕದೆ ಬಿಡದು. ಹಾಗಾಗಿ ಮಾಗಡಿ ತಾಲೂಕಿಗೆ ನೀರು ಹರಿಸಲು ಹಲವು ಮಾರ್ಗಗಳಿವೆ. ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ರದ್ದು ಮಾಡಿ, ಬೇರೆ ಮೂಲದಿಂದ ನೀರು ತರಲು ಪ್ರಯತ್ನಿಸಲಿ” ಎಂದರು.
ಈ ಸುದ್ದಿ ಓದಿದ್ದೀರಾ? ಗದಗ | ಪ್ರಜ್ವಲ್ ಪ್ರಕರಣ ಕ್ರಮಕ್ಕೆ ಕೇಂದ್ರ ಸರ್ಕಾರ ಮಂದಾಗಲಿ: ಸಂಜಯ್ ದೊಡ್ಡಮನಿ
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ವೈ ಹೆಚ್ ಹುಚ್ಚಯ್ಯ, ಪಿ ಸಿ ಲೋಕೇಶ್ವರ್, ದಿಲೀಪ್‌ಕುಮಾರ್, ಪಂಚಾಕ್ಷರಯ್ಯ, ಪ್ರಭಾಕರ, ಡಾ ಸಂಜಯನಾಯಕ್, ಸೌಮ್ಯ, ಪುಟ್ಟಕಾಮಯ್ಯ ಸೇರಿದಂತೆ ಹಲವರು ಇದ್ದರು.
