ಬಿಜೆಪಿಯಲ್ಲಿ ಚುನಾಯಿತ ಪ್ರತಿನಿಧಿಯ ನಿವೃತ್ತಿ ವಯಸ್ಸನ್ನು 75 ವರ್ಷ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಿದ್ದಾರೆ. ಇದು ಅವರಿಗೂ ಅನ್ವಯವಾಗುತ್ತದೆಯೇ ಮತ್ತು ತನ್ನ 75ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಲು ಮೋದಿ ಅವರು ಸಿದ್ಧವೇ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ನಿವೃತ್ತಿ ಪಡೆಯಲು 75 ವರ್ಷ ಎಂದು ಮೋದಿ ಅವರೇ ನಿರ್ಧರಿಸಿದ್ದಾರೆ. ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಮತ್ತು ಹಲವಾರು ಹಿರಿಯ ಬಿಜೆಪಿ ನಾಯಕರ ವಿರುದ್ಧವಾಗಿ ಮೋದಿ ಈ ನಿರ್ಧಾರ ಕೈಗೊಂಡಿದ್ದಾರೆ” ಎಂದು ರೇವಂತ್ ರೆಡ್ಡಿ ಆರೋಪಿಸಿದರು.
ಇದನ್ನು ಓದಿದ್ದೀರಾ? ಖಾಸಗಿ ಸಂಪತ್ತಿನ ಬಗ್ಗೆ ರಾಹುಲ್ ಮಾತನಾಡಿಲ್ಲ; ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ: ಸಿಎಂ ರೇವಂತ್ ರೆಡ್ಡಿ
“ಈಗ ಪ್ರಧಾನಿ ನರೇಂದ್ರ ಮೋದಿ ಅವರೇ 74 ವರ್ಷವನ್ನು ದಾಟುತ್ತಿದ್ದಾರೆ. ಅವರಿಗೆ 75 ವರ್ಷವಾಗಲು ಇನ್ನು ಒಂದು ವರ್ಷಗಳ ಕಾಲ ಮಾತ್ರ ಬಾಕಿ ಉಳಿದಿದೆ. ಈಗ ನಾನು ಪ್ರಧಾನಿ ಮೋದಿ ಬಳಿ ಅದೇ ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ನೀವು ನಿಮ್ಮ 75ನೇ ವಯಸ್ಸಿನಲ್ಲಿ ನಿವೃತ್ತಿ ಪಡೆಯಲು ಸಿದ್ಧರಾಗಿದ್ದೀರಾ” ಎಂದು ಪ್ರಶ್ನಿಸಿದರು.
#WATCH | Hyderabad: Telangana CM Revanth Reddy says, “…For Modi, everything is politics, everything is about winning elections. So, Modi’s thinking is not right for the country. So, the country needs to be without BJP, without Modi now. They answer everything with ‘Jai Sri… pic.twitter.com/17ZYnIxbur
— ANI (@ANI) May 11, 2024
ಇನ್ನು ಪ್ರಧಾನಿ ಮೋದಿ ಅವರ ಆರ್ಥಿಕ ನೀತಿ ಬಗ್ಗೆಯೂ ಸಿಎಂ ರೇವಂತ್ ರೆಡ್ಡಿ ಪ್ರಶ್ನಿಸಿದ್ದಾರೆ. “ಇನ್ನೂ ಒಂದು ವಿಷಯವನ್ನು ನೆನಪಿಸಬಯಸುತ್ತೇನೆ, 1947ರಿಂದ 2014ರವರೆಗೆ 14 ಪ್ರಧಾನಿಗಳು ಸುಮಾರು 67 ವರ್ಷಗಳ ಕಾಲ 55 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಪ್ರಧಾನಿ ಮೋದಿ ತನ್ನ ಹತ್ತು ವರ್ಷದ ಅವಧಿಯಲ್ಲಿ 113 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದನ್ನು ಮರೆಮಾಚಲು ಯಾವ ದಾಖಲೆಯನ್ನು ಸಲ್ಲಿಸಿದರೂ ನಾವು ನಂಬಲಾರೆವು. ಚುನಾವಣೆಯಲ್ಲಿ ಗೆಲ್ಲಲು ಮೋದಿ ಯಾವ ಹಂತಕ್ಕಾದರೂ ಇಳಿಯಬಹುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ₹3 ಕೋಟಿ ಬೆಲೆಯ 22 ಕಾರು ಖರೀದಿಸಿ ಅಡಗಿಸಿಟ್ಟಿದ್ದ ಕೆಸಿಆರ್: ರೇವಂತ್ ರೆಡ್ಡಿ
ಇದಕ್ಕೂ ಮುನ್ನ ಸಿಎಂ ರೇವಂತ್ ರೆಡ್ಡಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮೋದಿ ಮಾತನಾಡಿದ್ದರು. ರಾಜ್ಯದ ಜನರು ಡಬಲ್ ಆರ್ (ಆರ್‌ಆರ್ ತೆರಿಗೆ) ತೆರಿಗೆಯ ಹೊರೆ ಹೊರಬೇಕಾಗಿದೆ ಎಂದು ಟೀಕಿಸಿದ್ದರು.
ತೆಲಂಗಾಣದ ಎಲ್ಲ 17 ಲೋಕಸಭಾ ಕ್ಷೇತ್ರಗಳಲ್ಲಿ ಮೇ 13ರಂದು ನಾಲ್ಕನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಜೂನ್ 4ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.