ಜಗತ್ತಿನಾದ್ಯಂತ ಸುಮಾರು 10% ಗರ್ಭಿಣಿಯರು ಮತ್ತು ಇತ್ತೀಚೆಗೆ ಮಕ್ಕಳಿಗೆ ಜನ್ಮ ನೀಡಿದ 13% ಮಹಿಳೆಯರು ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಅವರಲ್ಲಿ ಖಿನ್ನತೆ, ಆತಂಕ ಮತ್ತು ಸೈಕೋಸಿಸ್ ಸಮಸ್ಯೆಗಳು ಕಂಡುಬಂದಿವೆ. ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿದೆ ಎಮಧು ಇತ್ತೀಚೆಗೆ ಬಿಡುಗಡೆಯಾದ ಯುರೋಪ್ ಮೂಲದ ‘ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್’ ವರದಿ ಹೇಳಿದೆ.
ಗರ್ಭಿಣಿಯರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯು ಆತ್ಮಹತ್ಯೆ ಮತ್ತು ಪ್ರಸವ ಪೂರ್ವ ಅಥವಾ ಪ್ರಸವ ನಂತರದ (ಪೆರಿನಾಟಲ್ ಅವಧಿ) ಸಾವಿಗೆ ಕಾರಣವಾಗುತ್ತಿವೆ. ಪ್ರಮುಖವಾಗಿ ಮುಂದುವರೆದ ಅಥವಾ ಹೆಚ್ಚಿನ ಆದಾಯ ಇರುವ ದೇಶಗಳಲ್ಲಿ ಪೆರಿನಾಟಲ್ ಅವಧಿಯ ಸಾವುಗಳು ಹೆಚ್ಚಾಗಿವೆ. ಇದು 5-20% ತಾಯಂದಿರ ಸಾವುಗಳಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.
ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಗರ್ಭಿಣಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಈ ರಾಷ್ಟ್ರಗಳಲ್ಲಿ ಆತ್ಮಹತ್ಯೆಗಳು ಸಾಮಾನ್ಯವಾಗಿ ವರದಿಯಾಗುವುದಿಲ್ಲ ಎಂದಿರುವ ವರದಿ, ‘ಇದು ನಿರ್ಲಕ್ಷಿಸಲ್ಪಟ್ಟ ಗಂಭೀರ ಸಮಸ್ಯೆ’ ಎಂದಿದೆ.
“ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವ 85%ರಷ್ಟು ಗರ್ಭಿಯರು ‘ಬೇಬಿ ಬ್ಲೂಸ್’ ಎಂದು ಕರೆಯಲ್ಪಡುವ ಆರೋಗ್ಯ ಸಮಸ್ಯೆ ಅನುಭವ ಹೊಂದಿದ್ದಾರೆ. ಇದು ದೀರ್ಘಕಾಲದ ಕಿರಿಕಿರಿ, ಮೂಡ್ ಸ್ವಿಂಗ್, ಅಳು, ಬೇಸರ, ಅತಂಕದಂತಹ ರೋಗಲಕ್ಷಣಗಳನ್ನು ಹೊಂದಿರುತ್ತದೆ.
“ಪೆರಿನಾಟಲ್ ಮಾನಸಿಕ ಆರೋಗ್ಯ ಪರಿಸ್ಥಿತಿಗಳು ತಾಯಿ ಮತ್ತು ಮಗುವಿನ ಯೋಗಕ್ಷೇಮದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಮಗುವಿನ ಜೊತೆಗೆ ಬಾಂಧವ್ಯ, ಆರೈಕೆ ಮತ್ತು ಆರೋಗ್ಯಕರ ಬೆಳವಣಿಗೆಗೆ ಅಡ್ಡಿಯಾಗಬಹುದು. ಅಲ್ಲದೆ, ಮಗುವಿನ ದೈಹಿಕ, ಅರಿವು ಮತ್ತು ಭಾವನಾತ್ಮಕ ಬೆಳವಣಿಗೆಯ ಮೇಲೆ ದೀರ್ಘಾವಧಿಯ ಪರಿಣಾಮಗಳನ್ನು ಉಂಟುಮಾಡುತ್ತದೆ” ಎಂದು ವರದಿ ಹೇಳುತ್ತದೆ.
“ಎಲ್ಲ ಮಹಿಳೆಯರು ತಮ್ಮ ಜೀವನದ ಈ ನಿರ್ಣಾಯಕ ಅವಧಿಯಲ್ಲಿ ಸಮಗ್ರ ಬೆಂಬಲ ಮತ್ತು ಕಾಳಜಿಯನ್ನು ಪಡೆಯುವುದು ಮುಖ್ಯ. ಗರ್ಭಿಣಿ ಅಥವಾ ತಾಯಿಯ ಮಾನಸಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ತುರ್ತು ಕ್ರಮದ ಅಗತ್ಯವಿದೆ” ಎಂದು ವರದಿ ವಿವರಿಸಿದೆ.
ಮಾನಸಿಕ ಆರೋಗ್ಯದ ದೃಷ್ಠಿಯಿಂದ ಸಹಾಯದ ಅಗತ್ಯವಿರುವ ಮಹಿಳೆಯನ್ನು ಗುರುತಿಸಿ, ಅವರಿಗೆ ನೆರವು ನೀಡುವುದು ಅಗತ್ಯವೆಂದು ವರದಿ ಹೇಳುತ್ತದೆ. ಯಾಕೆಂದರೆ, ಇಂತಹ ಸಮಸ್ಯೆಯನ್ನು ಹೊಂದಿರುವ 70% ಮಹಿಳೆಯರು ಅರಿವಿನ ಕೊರತೆಯಿಂದಾಗಿ ತಮ್ಮ ರೋಗಲಕ್ಷಣಗಳನ್ನು ಮರೆಮಾಡುತ್ತಾರೆ. ಇದು ಪತ್ತೆಹಚ್ಚದ ಮತ್ತು ಚಿಕಿತ್ಸೆ ದೊರೆಯದ ಪ್ರಕರಣಗಳಿಗೆ ಕಾರಣವಾಗುತ್ತದೆ.