ಬಿಜೆಪಿ ಮತ್ತು ಶಿವಸೇನೆ (ಯುಬಿಟಿ) ನಡುವಿನ ವ್ಯತ್ಯಾಸವನ್ನು ವಿವರಿಸಿದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, “ನಮ್ಮ ಹಿಂದುತ್ವ ಜನರ ಮನೆಯಲ್ಲಿ ಒಲೆಯನ್ನು ಹೊತ್ತಿಸುವಂತದ್ದು, ಆದರೆ ಬಿಜೆಪಿಯ ಹಿಂದುತ್ವವು ಜನರ ಮನೆಗಳನ್ನೇ ಸುಡುವಂತದ್ದು” ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, “ಬಿಜೆಪಿಯ ಹಿಂದುತ್ವಕ್ಕೂ ನಮ್ಮ ಹಿಂದುತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ” ಎಂದು ಪ್ರತಿಪಾದಿಸಿದ್ದಾರೆ. ಜೊತೆಗೆ ವ್ಯತ್ಯಾಸವನ್ನೂ ವಿವರಿಸಿದರು.
Chhatrapati Sambhajinagar, Maharashtra: Former CM and Shiv Sena (UBT) chief Uddhav Thackeray says, “There is a vast difference between the Hindutva of BJP and ours. Our Hindutva lights stoves in houses, but BJP’s Hindutva burns houses.” (10.05.2024) pic.twitter.com/PXuUF5yok2
— ANI (@ANI) May 11, 2024
“ಮೋದಿ ಸರ್ಕಾರವು ನಮ್ಮ ಪಕ್ಷದ ವಿರುದ್ಧ ಭಾರತದ ಚುನಾವಣಾ ಆಯೋಗವನ್ನು ಬಳಸಿತ್ತು. ನಮ್ಮ ಬಿಲ್ಲು ಬಾಣವನ್ನೇ ಕಸಿದು ಯುದ್ಧ ಘೋಷಿಸಲಾಗಿದೆ. ನೀವು (ಪಿಎಂ ಮೋದಿ) ನನ್ನ ಪಕ್ಷ, ನನ್ನ ಚಿಹ್ನೆ ಮತ್ತು ನನ್ನ ಜನರನ್ನು ಕಿತ್ತುಕೊಂಡಿದ್ದೀರಿ. ಆದರೆ ನೀವು ಇನ್ನೂ ಉದ್ಧವ್ ಠಾಕ್ರೆಗೆ ಭಯಪಡುತ್ತೀರಾ” ಎಂದು ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಬಿಜೆಪಿ ಬಾಗಿಲು ತೆರೆದರೂ ಹಿಂದಿರುಗಿ ಹೋಗಲ್ಲ: ಉದ್ಧವ್ ಠಾಕ್ರೆ
ದೇಶದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದೆ ಎಂದು ಹೇಳುವ ಸರ್ಕಾರದ ವರದಿ ಬಗ್ಗೆಯೂ ಶಿವಸೇನೆ ನಾಯಕ ಮಾತನಾಡಿದರು. “ಕಳೆದ ದಶಕದಿಂದ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾಗಿದ್ದಾರೆ. ಮುಸ್ಲಿಂ ಜನಸಂಖ್ಯೆಯ ಈ ಹೆಚ್ಚಳವೇ ಅವರ ಸಾಧನೆಯೇ ಅಥವಾ ವೈಫಲ್ಯವೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಮುಸ್ಲಿಂ ಜನಸಂಖ್ಯೆಯ ಹೆಚ್ಚಳಕ್ಕೆ ಅವರನ್ನು ಪ್ರಶಂಸಿಸಬೇಕೆ ಅಥವಾ ಟೀಕಿಸಬೇಕೆ ಎಂದು ನಾವೆಲ್ಲರೂ ಗೊಂದಲಕ್ಕೊಳಗಾಗಿದ್ದೇವೆ” ಎಂದು ಕುಟುಕಿದರು.
“ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಬಿಜೆಪಿ ಸರ್ಕಾರ ಎಲ್ಲಾ ಅಧಿಕಾರಗಳನ್ನು ಕಿತ್ತುಕೊಂಡಿದೆ. ಕೇಜ್ರಿವಾಲ್‌ಗೆ ಜಾಮೀನು ಸಿಕ್ಕಿದೆ, ಆದರೆ ಮೋದಿ ಸರ್ಕಾರ ಕೇಜ್ರಿವಾಲ್ ಅವರ ಎಲ್ಲಾ ಅಧಿಕಾರವನ್ನು ಕಿತ್ತುಕೊಂಡಿದೆ” ಎಂದು ಕಿಡಿಕಾರಿದರು.
ಇದನ್ನು ಓದಿದ್ದೀರಾ? ಯಾವ ಫೈಲ್ ತೆರೆದಿದೆ: ಬಿಜೆಪಿಗೆ ‘ಬೇಷರತ್’ ಬೆಂಬಲ ಘೋಷಿಸಿದ ರಾಜ್ ಠಾಕ್ರೆಗೆ ರಾವತ್ ಟಾಂಗ್
“ಜೂನ್ 4 ರವರೆಗೆ ಮೋದಿ ಅವರ ನಾಟಕ ನಡೆಯಲಿದೆ. ಜೂನ್ 4 ರ ನಂತರ ಪ್ರಧಾನಿ ಮೋದಿ ಎಂದು ಕರೆಯಲಾಗುವುದಿಲ್ಲ, ನರೇಂದ್ರ ಮೋದಿ ಅವರೆಂದು ಕರೆಯಬೇಕಾಗುತ್ತದೆ” ಎಂದು ಹೇಳುವ ಮೂಲಕ ಇಂಡಿಯಾ ಒಕ್ಕೂಟದ ಗೆಲುವಿನ ಭರವಸೆ ವ್ಯಕ್ತಪಡಿಸಿದರು.
ದೇಶದಲ್ಲಿ ಲೋಕ ಚುನಾವಣೆಯ ನಾಲ್ಕನೇ ಹಂತದ ಮತದಾನ ಮೇ 13ರಂದು ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.