ಬಿರುಗಾಳಿ ಸಹಿತ ಮಳೆಗೆ ವಿವಿದೆಡೆ ಸಾವು-ನೋವು ಸಂಭವಿಸಿದೆ. ಬೀದರ್, ಯಾದಗಿರಿ ಜಿಲ್ಲೆಗಳಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮ ಹೊರಭಾಗದಲ್ಲಿ ಸೋಮವಾರ ನಸುಕಿನ ಜಾವ ಸಿಡಿಲು ಬಡಿದು ಓರ್ವ ಕುರಿಗಾಹಿ ಮೃತಪಟ್ಟಿದ್ದಾರೆ.
ಭಾನುವಾರ ತಡರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿತ್ತು. ಈ ವೇಳೆ ಸಿಡಿಲು ಬಡಿದು ಕುರಿಗಾಹಿ ಬುಯೆಪ್ಪ (22) ಮೃತಪಟ್ಟಿದ್ದಾರೆ. ಕುರಿಗಾಹಿ ಜತೆಗೆ ಸ್ಥಳದಲ್ಲೇ 7 ಕುರಿಗಳು ಮೃತಪಟ್ಟಿವೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೀದರ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದೆ. ಚಿಟಗುಪ್ಪಾ ತಾಲೂಕಿನ ಇಟಗಾ ಗ್ರಾಮದ ಇನಾಯತ್ ಸೈಯದ್ (21) ಎಂಬುವರು ಮಾವಿನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮೃತಪಟ್ಟಿದ್ದಾರೆ. ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಐಕೂರು ಗ್ರಾಮದಲ್ಲಿ ಸಿಡಿಲು ಬಡಿದು 10 ಕುರಿಗಳು ಸಾವನ್ನಪ್ಪಿವೆ. ಐಕೂರು ಗ್ರಾಮದ ರಾಯಪ್ಪ ಎಂಬ ಕುರಿಗಾಹಿಗೆ ಸೇರಿದ ಕುರಿಗಳನ್ನು ಜಮೀನಿನಲ್ಲಿರುವ ಕುರಿಹಟ್ಟಿಯಲ್ಲಿ ಬಿಡಲಾಗಿತ್ತು. ನಿನ್ನೆ ತಡರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆ ವೇಳೆ ಸಿಡಿಲು ಬಡಿದಿದೆ. ಪರಿಣಾಮ ಕುರಿಗಳು ಸ್ಥಳದಲ್ಲೇ ಮೃತಪಟ್ಟಿವೆ.
ಬೀದರ್ ತಾಲೂಕಿನ ಇಸ್ಲಾಂಪುರ ತಾಂಡಾದ ರೈತ ಭೀಮ ಬನ್ಸಿ ಎಂಬುವರಿಗೆ ಸೇರಿದ ನಾಲ್ಕು ಮೇಕೆಗಳು ಸಿಡಿಲು ಬಡಿದು ಸಾವನಪ್ಪಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?
ಗ್ರಾಮದ ಹೊರವಲಯದಲ್ಲಿ ಮೇಯಿಸಲು ಹೋದ ವೇಳೆ ಭಾನುವಾರ ಸಂಜೆ ಬಿರುಗಾಳಿ ಸಹಿತ ಸುರಿದಿದೆ. ಈ ವೇಳೆ ಸಿಡಿಲು ಬಡಿದು ಅಂದಾಜು 60 ಸಾವಿರ ರೂ. ಮೌಲ್ಯದ ನಾಲ್ಕು ಆಡುಗಳು ಮೃತಪಟ್ಟಿವೆ. ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ರೈತ ಭೀಮ್ ಬನ್ಸಿ ಆಗ್ರಹಿಸಿದ್ದಾರೆ.