ಈ ದಿನ ಸಂಪಾದಕೀಯ | ದೂರುಗಳಿಗೆ ಬೆಲೆ ಇಲ್ಲ, ಕ್ರಮ ಕೈಗೊಳ್ಳಲ್ಲ, ಆಯೋಗಕ್ಕೆ ಹಲ್ಲೂ ಇಲ್ಲ

Date:

Advertisements
ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ನಡೆಸುವ ಹೊಣೆಗಾರಿಕೆ ಇರುವ ಚುನಾವಣಾ ಆಯೋಗವು ಸಂಪೂರ್ಣ ಸ್ವಾಯತ್ತವಾಗಿ ಇರಬೇಕಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ, ಚುನಾವಣೆಯಲ್ಲಿ ಪ್ರಧಾನಿಯಿಂದ ಏನಾದರೂ ಅಕ್ರಮ ನಡೆದರೆ ಅವರನ್ನೂ ಕಟಕಟೆಯಲ್ಲಿ ನಿಲ್ಲಿಸುವಷ್ಟು ಸಾಮರ್ಥ್ಯ ಮತ್ತು ಕರ್ತವ್ಯನಿಷ್ಠೆ ಅದಕ್ಕೆ ಇರಬೇಕಾಗುತ್ತದೆ. ಆದರೆ, ಚುನಾವಣಾ ಆಯುಕ್ತರನ್ನು ನೇಮಕ ಮಾಡಿರುವುದೇ ಮೋದಿಯವರ ಬಿಜೆಪಿ ಸರ್ಕಾರವಾದ್ದರಿಂದ, ಹಲ್ಲಿಲ್ಲದ ಹಾವಾಗಿದೆ…

‘ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರು ಚುನಾವಣಾ ಪ್ರಕ್ರಿಯೆ ಮತ್ತು ಅದರ ಹಂತಗಳ ವಿಶ್ವಾಸಾರ್ಹತೆ ಪ್ರಶ್ನಿಸಿ ನೀಡಿರುವ ಹೇಳಿಕೆಗಳು ಮತದಾರರ ಭಾಗವಹಿಸುವಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂಥವಾಗಿವೆ ಮತ್ತು ಅವರನ್ನು ಮತದಾನದಿಂದ ದೂರ ಉಳಿಯುವಂತೆ ಮಾಡಬಲ್ಲ ಮಾರ್ಗವಾಗಿವೆ. ಇದು ಚುನಾವಣಾ ಪ್ರಕ್ರಿಯೆಯ ಮೇಲೆ ನಡೆದ ಆಕ್ರಮಣ, ಪಕ್ಷಪಾತದ ನಿರೂಪಣೆ ಸೃಷ್ಟಿಸುವ ಪ್ರಯತ್ನ, ಅತ್ಯಂತ ಅನಪೇಕ್ಷಿತ’ ಎಂದು ಮತದಾನ ಪ್ರಮಾಣದ ಮಾಹಿತಿ ನೀಡುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷಗಳ ನಾಯಕರಿಗೆ ಬರೆದಿದ್ದ ಪತ್ರಕ್ಕೆ ಚುನಾವಣಾ ಆಯೋಗವು ತೀವ್ರ ಆಕ್ಷೇಪ ಮತ್ತು ಅಸಮಾಧಾನ ವ್ಯಕ್ತಪಡಿಸಿದೆ.

ಏಪ್ರಿಲ್‌ 19ರ ಮತದಾನದ ಮಾಹಿತಿಯನ್ನು 11 ದಿನಗಳ ಬಳಿಕ, ಏಪ್ರಿಲ್‌ 26ರ ಮತದಾನದ ಮಾಹಿತಿಯನ್ನು 4 ದಿನಗಳ ಬಳಿಕ ಹಾಗೂ ಮೇ 7ರ ಮತದಾನದ ಮಾಹಿತಿಯನ್ನು 4 ದಿನಗಳ ಬಳಿಕ ಚುನಾವಣಾ ಆಯೋಗ ಹಂಚಿಕೊಂಡಿದೆ. ಚುನಾವಣಾ ಬಾಂಡ್‌ಗಳ ಬಗೆಗಿನ ಮಾಹಿತಿ ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮಯ ಕೇಳಿದಂತೆ, ಸುಪ್ರೀಂನಲ್ಲಿ ಭಂಡ ವಾದ ಮಾಡಿದಂತೆ!

ಚುನಾವಣಾ ಆಯೋಗ ಬಿಡುಗಡೆ ಮಾಡಿದ ಮತದಾನದ ಅಂಕಿ-ಅಂಶಗಳು ತಾಳೆಯಾಗದೇ ಇರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಧ್ವನಿ ಎತ್ತುವಂತೆ ಮೈತ್ರಿಕೂಟದ ನಾಯಕರಲ್ಲಿ ಕೇಳಿಕೊಂಡಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದೇ ನಮ್ಮ ಏಕೈಕ ಉದ್ದೇಶ ಎಂದಿದ್ದಾರೆ. ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳೋಣ ಹಾಗೂ ಅದನ್ನು ಹೊಣೆಗಾರರನ್ನಾಗಿ ಮಾಡೋಣ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Advertisements

ತಪ್ಪು ಎಸಗಿರುವುದು ಚುನಾವಣಾ ಆಯೋಗ. ಅದನ್ನು ಪ್ರಶ್ನಿಸಿ, ಎಚ್ಚರಿಸುವ ಕೆಲಸ ಮಾಡಿರುವವರು ಮಲ್ಲಿಕಾರ್ಜುನ ಖರ್ಗೆ. ಇದು ಹೇಗೆ ಆಕ್ರಮಣವಾಗುತ್ತದೆ, ಇದರಲ್ಲಿ ಆಯೋಗ ಅಸಮಾಧಾನ ವ್ಯಕ್ತಪಡಿಸುವಂಥದ್ದು ಏನಿದೆ?

ಇಡೀ ದೇಶದ ಮತದಾನ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನಕ್ಕೆ, ವಿದ್ಯುನ್ಮಾನ ಮತ ಯಂತ್ರಗಳಿಗೆ ಅಳವಡಿಸಿಕೊಂಡು ಇಲ್ಲಿಗೆ 20 ವರ್ಷಗಳಾಯಿತು. ಈ ಮತದಾನ ವ್ಯವಸ್ಥೆಯು ಭದ್ರತೆನಿಖರತೆ, ಸಮಗ್ರತೆ, ವೇಗ, ಗೌಪ್ಯತೆಲೆಕ್ಕಪರಿಶೋಧನೆಗೆ ಬೇಕಾದ ಬಲವಾದ ಸಾಮರ್ಥ್ಯವನ್ನು ಹೊಂದಿದೆ. ಕಾಲಕಾಲಕ್ಕೆ ಬೇಕಾದ ಬದಲಾವಣೆಗಳನ್ನೂ ಅಳವಡಿಸಿಕೊಳ್ಳಲಾಗಿದೆ.

ಹೀಗಿರುವಾಗ ಮತದಾನದ ಅಂಕಿ-ಅಂಶ ನೀಡಲು 11 ದಿನಗಳು ಏಕೆ ಬೇಕು? ಪ್ರಶ್ನೆ ಮಾಡುವುದು ತಪ್ಪೇ?

ಚುನಾವಣಾ ಆಯೋಗ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಅಸ್ತಿತ್ವದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವಂತಹ ಅಥವಾ ಪರಸ್ಪರ ದ್ವೇಷವನ್ನು ಉಂಟುಮಾಡುವ ಅಥವಾ ವಿವಿಧ ಜಾತಿಗಳು ಮತ್ತು ಸಮುದಾಯಗಳ ನಡುವೆ, ಧಾರ್ಮಿಕ ಅಥವಾ ಭಾಷಿಕ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುವ ಯಾವುದೇ ಚಟುವಟಿಕೆಯಲ್ಲಿ ತೊಡಗಬಾರದು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರೇ ಚುನಾವಣಾ ದಿನಾಂಕ ಘೋಷಣೆಯ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗಿ ಹೇಳಿದ್ದರು.

ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರು. ಸಾರ್ವಜನಿಕ ಭಾಷಣದಲ್ಲಿ ಮೊಘಲ್, ಮೀನು, ಮುಸ್ಲಿಂ, ಮೀಸಲಾತಿ ಮತ್ತು ಮಂಗಳಸೂತ್ರವನ್ನು ಎಳೆದು ತಂದರು. ಸಮುದಾಯಗಳ ನಡುವೆ ಧಾರ್ಮಿಕ ದ್ವೇಷ ಬಿತ್ತಿ ಭಿನ್ನಾಭಿಪ್ರಾಯಗಳು ಉಲ್ಪಣಗೊಳ್ಳುವಂತೆ ಮಾಡಿದರು.

ಮೋದಿಯವರ ಮಾತಿನಲ್ಲಿ ಸುಳ್ಳು ಬಿತ್ತುವ, ತಪ್ಪು ದಾರಿಗೆಳೆಯುವ ಮತ್ತು ದ್ವೇಷಾಸೂಯೆ ಉಂಟುಮಾಡುವ ಅಂಶಗಳಿವೆ ಎಂದು ವಿರೋಧ ಪಕ್ಷಗಳು ಆಡಿಯೋ, ವಿಡಿಯೋ ಮತ್ತು ಪ್ರಕಟಿತ ವರದಿಗಳ ಸಮೇತ ಚುನಾವಣಾ ಆಯೋಗಕ್ಕೆ ದೂರು ನೀಡಿದರು.

ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ಮತ್ತು ನ್ಯಾಯಯುತವಾಗಿ ನಡೆಸುವ ಹೊಣೆಗಾರಿಕೆ ಇರುವ ಚುನಾವಣಾ ಆಯೋಗವು ಸಂಪೂರ್ಣ ಸ್ವಾಯತ್ತವಾಗಿ ಇರಬೇಕಾಗುತ್ತದೆ. ಎಷ್ಟರಮಟ್ಟಿಗೆ ಎಂದರೆ, ಚುನಾವಣೆಯಲ್ಲಿ ಪ್ರಧಾನಿಯಿಂದ ಏನಾದರೂ ಅಕ್ರಮ ನಡೆದರೆ ಅವರನ್ನೂ ಕಟಕಟೆಯಲ್ಲಿ ನಿಲ್ಲಿಸುವಷ್ಟು ಸಾಮರ್ಥ್ಯ ಮತ್ತು ಕರ್ತವ್ಯನಿಷ್ಠೆ ಅದಕ್ಕೆ ಇರಬೇಕಾಗುತ್ತದೆ.

ಆದರೆ, ಚುನಾವಣಾ ಆಯುಕ್ತರನ್ನು ನೇಮಕ ಮಾಡಿರುವುದೇ ಮೋದಿಯವರ ಬಿಜೆಪಿ ಸರ್ಕಾರವಾದ್ದರಿಂದ, ನೆಪಮಾತ್ರಕ್ಕೆ ನೋಟಿಸ್ ಜಾರಿ ಆಗಿದೆಯೇ ಹೊರತು, ಕ್ರಮ ಎಂಬುದು ದೂರದ ಮಾತಾಗಿದೆ.

1949ರ ಜೂನ್ 1ರಂದು ಸಂವಿಧಾನ ರಚನಾ ಸಭೆಯ ಚರ್ಚೆಯಲ್ಲಿ ಬಾಬಾ ಸಾಹೇಬ್‌ ಅಂಬೇಡ್ಕರ್ ಅವರು, ‘ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ಇರಬೇಕು ಎಂದರೆ, ಚುನಾವಣಾ ಆಯೋಗವನ್ನು ಸರ್ಕಾರದ ನಿಯಂತ್ರಣದಿಂದ ಹೊರಗಿಡಬೇಕು’ ಎಂದಿದ್ದರು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅರವಿಂದ್ ಕೇಜ್ರಿವಾಲ್ ಆಗಮನ ಮೋದಿ ನಿರ್ಗಮನದ ಸೂಚಕವೇ?

ಆದರೆ, ಈಗಿನ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಚುನಾವಣಾ ಆಯೋಗವು ಅಭ್ಯರ್ಥಿಗಳಿಂದ ಆಗುವ ನೀತಿ ಸಂಹಿತೆಯ ಉಲ್ಲಂಘನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು, ದೂರು ಕೊಟ್ಟ ವಿರೋಧ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಉರಿದು ಬೀಳುತ್ತಿದೆ. ಆ ಮೂಲಕ, ತಮ್ಮನ್ನು ಆ ಸ್ಥಾನದಲ್ಲಿ ಕೂರಿಸಿದವರಿಗೆ ನಿಷ್ಠೆ ತೋರಿ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣು ಮಾಡುತ್ತಿದ್ದಾರೆ.

ಏತನ್ಮಧ್ಯೆ, ಬಿಜೆಪಿ ನಾಯಕರ ದ್ವೇಷ ಭಾಷಣ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಭಾರತೀಯ ಚುನಾವಣಾ ಆಯೋಗ ಕ್ರಮ ಕೈಗೊಳ್ಳದಿರುವುದರ ವಿರುದ್ಧ ನಾಗರಿಕ ಸಮಾಜದ ಸದಸ್ಯರು ಧ್ವನಿ ಎತ್ತಿದ್ದಾರೆ. #GrowASpineOrResign ಪೋಸ್ಟ್‌ಕಾರ್ಡ್ ಅಭಿಯಾನದ ಮೂಲಕ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಉತ್ತೇಜಿಸಲು ಚುನಾವಣಾ ಆಯೋಗವನ್ನು ನಾಗರಿಕರು ಒತ್ತಾಯಿಸಿದ್ದಾರೆ. ಇದು ಈಗ ದೇಶವ್ಯಾಪಿ ಅಭಿಯಾನವಾಗಿ ಹಬ್ಬುತ್ತಿದೆ. ಜನರಲ್ಲಿ ಜಾಗೃತಿ ಉಂಟು ಮಾಡುತ್ತಿದೆ.

ಆದರೆ, ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ದೂರು ಕೊಟ್ಟರೂ ಕ್ರಮ ಕೈಗೊಳ್ಳಲಾಗದ ಸ್ಥಿತಿಯಲ್ಲಿದೆ. ಆಯೋಗಕ್ಕೆ ಯಾರೂ ಹೆದರದ ಸ್ಥಿತಿ ನಿರ್ಮಾಣವಾಗಿದೆ. ಹಲ್ಲಿಲ್ಲದ ಆಯೋಗವೆಂದು ಸಾಬೀತಾಗಿದೆ. ಸರ್ಕಾರದಿಂದ ನೇಮಕಗೊಂಡ ಅಧಿಕಾರಿಗಳು, ನೇಮಿಸಿದವರ ಋಣಭಾರಕ್ಕೆ ಬಿದ್ದು ಬೆದರುಬೊಂಬೆಗಳಾಗಿದ್ದಾರೆ. ಸರ್ವ ಜನಾಂಗದ ಶಾಂತಿಯ ಹಬ್ಬ ಭಾಷಣಕ್ಕೆ, ಬರಹಕ್ಕೆ ಸೀಮಿತವಾಗಿದೆ.

ಪ್ರಜಾಪ್ರಭುತ್ವದ ಮೌಲ್ಯಗಳು ಉಳಿದು, ಬೆಲೆ ಬರಬೇಕಾದರೆ ಚುನಾವಣಾ ಆಯೋಗ ಹಲ್ಲಿಲ್ಲದ ಹಾವಾಗದೆ, ಹುಲಿಯಂತೆ, ಟಿ.ಎನ್. ಶೇಷನ್‌ರಂತೆ ಘರ್ಜಿಸುವುದೊಂದೇ ದಾರಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಮೊಟ್ಟೆಗೆ ವಿರೋಧ; ಬಡ ಮಕ್ಕಳ ಆಹಾರದ ಸ್ವಾತಂತ್ರ್ಯಕ್ಕೆ ಕೊಕ್ಕೆ

ಮಂಡ್ಯದ ಆಲಕೆರೆ ಗ್ರಾಮದ ಸರ್ಕಾರಿ ಶಾಲೆಯ ವಿಚಾರದಲ್ಲಿ 84 ಮಕ್ಕಳ ಪೋಷಕರು...

ಈ ದಿನ ಸಂಪಾದಕೀಯ | ಅವಾಂತರಕಾರಿ ಆಸಿಮ್ ಮುನೀರ್ ಮತ್ತು ಮೌನಿ ಮೋದಿ

ವಿಶ್ವಗುರು ಭಾರತದ ಪ್ರಧಾನಿ ಮೋದಿಯವರು ಅಮೆರಿಕ ಮತ್ತು ಚೀನಾ ದೇಶಗಳಿಗೆ ಸೆಡ್ಡು...

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

Download Eedina App Android / iOS

X