ಹಿಟ್ಟಿನ ಬೆಲೆಗಳ ಏರಿಕೆ, ವಿದ್ಯುತ್ ದರ ಏರಿಕೆ ಹಾಗೂ ತೆರಿಗೆ ಹೆಚ್ಚಳ ವಿರೋಧಿಸಿ ಪಾಕ್ ಆಕ್ರಮಿತ ಕಾಶ್ಮೀರ ದಲ್ಲಿ ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು ಉದ್ವಿಗ್ನ ಪರಿಸ್ಥಿತಿ ಇನ್ನು ಮುಂದುವರಿದಿದೆ. ಭದ್ರತಾ ಪಡೆ ಹಾಗೂ ಪ್ರತಿಭಟನಾಕಾರರ ನಡುವೆ ನಡೆಯುತ್ತಿರುವ ಸಂಘರ್ಷವನ್ನು ತಡೆಯಲು ಪಾಕ್ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ.
ಕಳೆದ ಶನಿವಾರ ಪ್ರತಿಭಟನಾ ನಿರತರು ಹಾಗೂ ಪೊಲೀಸರ ನಡುವೆ ಸಂಘರ್ಷ ಆರಂಭಗೊಂಡಿದ್ದು, ಒರ್ವ ಪೊಲೀಸ್ ಅಧಿಕಾರಿ ಮೃತಪಟ್ಟು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಬಹುತೇಕರು ಪೊಲೀಸರೆ ಇದ್ದಾರೆ. ಪ್ರತಿಭಟನೆಯಿಂದಾಗಿ ಸಾರ್ವಜನಿಕರ ಜೀವನ ನಿರ್ವಹಣೆ ಕೂಡ ಕಷ್ಟಕರವಾಗಿದೆ.
ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಸಂಘರ್ಷವನ್ನು ತಡೆಯಲು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಇಂದು ಉನ್ನತಮಟ್ಟದ ಸಭೆ ಹಮ್ಮಿಕೊಳ್ಳುವ ಸಾಧ್ಯತೆಯಿದೆ.
ಬೆಲೆಗಳ ಏರಿಕೆ, ವಿದ್ಯುತ್ ದರ ಏರಿಕೆ ಹಾಗೂ ತೆರಿಗೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಸಂಘಟನೆಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕಾರ್ಯಪಡೆ ಮುಂಚೂಣಿಯಲ್ಲಿದೆ. ವಿದ್ಯುತ್ ಬೆಲೆ ನಿಯಂತ್ರಣ, ಆಹಾರ ಧಾನ್ಯಗಳಿಗೆ ರಿಯಾಯಿತಿ ಹಾಗೂ ಶ್ರೀಮಂತ ವರ್ಗದವರಿಗೆ ಸವಲತ್ತು ಕಡಿತಗೊಳಿಸುವಂತೆ ಪ್ರಮುಖ ಬೇಡಿಕೆಯಿಟ್ಟಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂರುಗಳಿಗೆ ಬೆಲೆ ಇಲ್ಲ, ಕ್ರಮ ಕೈಗೊಳ್ಳಲ್ಲ, ಆಯೋಗಕ್ಕೆ ಹಲ್ಲೂ ಇಲ್ಲ
ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕಾರ್ಯಪಡೆ ಕರೆದಿದ್ದ ಮುಷ್ಕರದ ಸಂದರ್ಭದಲ್ಲಿ ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ಬಳಿಕ ಮಸೀದಿಗಳ ಮೇಲೂ ಕಲ್ಲು ತೂರಾಟ ನಡೆದಿದೆ. ಈ ಸಮಯದಲ್ಲಿ, ಪಿಒಕೆಯ ಸಂಹಾನಿ, ಸೆಹನ್ಸಾ, ಮೀರ್‌ಪುರ್, ರಾವಲ್‌ಕೋಟ್, ಖುಯಿರಟ್ಟಾ, ತಟ್ಟಪಾನಿ, ಹಟ್ಟಿಯಾನ್ ಬಾಲಾದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ.
ಪಾಕ್ ಆಡಳಿತದ ಕಾಶ್ಮೀರ ಸರ್ಕಾರವು ಸಂಪೂರ್ಣ ಪಿಒಕೆಯಲ್ಲಿ ಸೆಕ್ಷನ್ 144 ಅನ್ನು ವಿಧಿಸಿತ್ತು. ಇದರೊಂದಿಗೆ ಮೇ 10 ಮತ್ತು 11 ರಂದು ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದಾಗ್ಯೂ, ಏರುತ್ತಿರುವ ವಿದ್ಯುತ್ ಮತ್ತು ಹಿಟ್ಟಿನ ಬೆಲೆಗಳ ವಿರುದ್ಧ ಪಿಒಕೆಯ ಎಲ್ಲ ಜಿಲ್ಲೆಗಳಲ್ಲಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ.
ಇಲ್ಲಿನ ಜನರು ಹಸಿವಿನಿಂದ ನರಳುತ್ತಿದ್ದಾರೆ. ಆರೋಗ್ಯ ಸೌಲಭ್ಯವಿಲ್ಲ, ಸರ್ಕಾರದ ಯಾವುದೇ ಯೋಜನೆಗಳು ಈ ಭಾಗಕ್ಕೆ ನೀಡುತ್ತಿಲ್ಲ. ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೆಲೆ ಏರಿಕೆಯಿಂದ ಇಲ್ಲಿನ ಜನರು ಅಗತ್ಯವಸ್ತುಗಳ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಭಟನಾನಿರತರನ್ನು ಪಾಕಿಸ್ತಾನ ಸೇನೆ ಹಾಗೂ ಪೊಲೀಸ್ ಬಂಧಿಸುತ್ತಿದ್ದಾರೆ ಎಂದು ಸ್ಥಳೀಯ ನಾಯಕರು ಆರೋಪಿಸಿದ್ದಾರೆ.
