ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಹೋರ್ಡಿಂಗ್ ಮುರಿದು ಬಿದ್ದಿದ್ದು, ಘಟನೆಯಲ್ಲಿ ಈವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ. 74 ಜನರು ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿದೆ. ಈ ವೇಳೆ, ಘಾಟ್ಕೋಪರ್‌ನ ಪೆಟ್ರೋಲ್ ಪಂಪ್‌ನಲ್ಲಿ ಅಕ್ರಮವಾಗಿ ಹಾಕಲಾಗಿದ್ದ 100 ಅಡಿ ಎತ್ತರದ ಜಾಹೀರಾತು ಫಲಕ ಮುರಿದು ಬಿದ್ದಿದೆ.
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈವರೆಗೆ, ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. 74 ಮಂದಿ ಗಾಯಗೊಂಡಿದ್ದು, ಅವರಲ್ಲಿ 31 ಜನರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. 35 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮವಾಗಿ ಹೋರ್ಡಿಂಗ್ ಹಾಕಿ, ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಂಬೈ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಹೇಳಿದ್ದಾರೆ.
ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವ ಫನ್ಸಾಲ್ಕರ್, “ಘಾಟ್ಕೋಪರ್‌ನಲ್ಲಿ ಸಂಭವಿಸಿದ ದುರದೃಷ್ಟಕರ ದುರ್ಘಟನೆಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪಗಳು. ಮುಂಬೈಪೊಲೀಸ್ ತಂಡವು ರಕ್ಷಣಾ ಕಾರ್ಯಾಚರಣೆಯಲ್ಲಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತೇವೆ” ಎಂದಿದ್ದಾರೆ.
‘M/s Ego Media Private Limited’ ಮಾಲೀಕ ಭವೇಶ್ ಭಿಂಡೆ ಮತ್ತು ಇತರರ ವಿರುದ್ಧ ಪಂತ್ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ನರಹತ್ಯೆ ಆರೋಪದ ಮೇಲೆ ಐಪಿಸಿ ಸೆಕ್ಷನ್ 304, 338, ಮತ್ತು 337 ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಳಕ್ಕೆ ತೆರಳಿ, ಪರಿಸ್ಥಿತಿ ಅವಲೋಕಿಸಿದ್ದಾರೆ. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು ಮತ್ತು ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಏತನ್ಮಧ್ಯೆ, ಜಾಹೀರಾತು ಏಜೆನ್ಸಿಗೆ ಬಿಎಂಸಿ ನೋಟಿಸ್ ಜಾರಿ ಮಾಡಿದ್ದು, ಸ್ಥಳದ ಸಮೀಪವಿರುವ ಉಳಿದ ಮೂರು ಹೋರ್ಡಿಂಗ್‌ಗಳನ್ನು ತಕ್ಷಣ ತೆಗೆದುಹಾಕುವಂತೆ ತಾಕೀತು ಮಾಡಿದೆ.