ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಲು ಇದೇ ತಿಂಗಳ 16ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಸದಸ್ಯರೊಂದಿಗೆ ಡಿವೈಎಸ್‌ಪಿ ಶೇಖರ್ ನೇತೃತ್ವದಲ್ಲಿ ಸಭೆ ನಡೆಸಿ ಕಾನೂನಾತ್ಮಕ ಸಲಹೆ ಸೂಚನೆ ನೀಡಿದರು.
ತುಮಕೂರು ಜಿಲ್ಲೆ ಗುಬ್ಬಿ ಪಟ್ಟಣದ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಪೈಪ್‌ಲೈನ್ ಯೋಜನೆಯ ಆಗು-ಹೋಗುಗಳ ಬಗ್ಗೆ ಹೋರಾಟಗಾರರು ವಿವರಿಸಿದರು.
“ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹಂಚಿಕೆ ಪ್ರಕಾರ 24 ಟಿಎಂಸಿ ನೀರು ನೀಡಲಾಯಿತು. ಈಗ ವಾಮಮಾರ್ಗ ಮೂಲಕ ಮಾಗಡಿಗೆ ತೆಗೆದುಕೊಂಡು ಹೋಗುವುದು ಸರಿಯಲ್ಲ. ಜಿಲ್ಲೆಯ ರೈತರಿಗೆ ಅನ್ಯಾಯ ಮಾಡುವ ಈ ಯೋಜನೆ ಅನುಷ್ಠಾನವೇ ಅಕ್ರಮ. ನೀರಿನ ವಿಚಾರದಲ್ಲಿ ಗುಬ್ಬಿ ತಾಲೂಕಿನ ರೈತರಿಗೆ ಅತಿ ಹೆಚ್ಚು ಅನ್ಯಾಯವಾಗುತ್ತಿದೆ” ಎಂದು ಸಮಿತಿಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
“ಪೈಪ್‌ಲೈನ್ ಕಾಮಗಾರಿ ಬಗ್ಗೆ ಕಿಂಚಿತ್ತೂ ಮಾಹಿತಿ ಸಿಕ್ಕಿಲ್ಲ. ಡಿಪಿಆರ್, ಯಾವ ಮಾರ್ಗ, ಯಾವ ರೈತನ ಜಮೀನು, ಭೂಮಿ ವಶದ ಯಾವುದೇ ಪ್ರಕ್ರಿಯೆ ನಡೆಸದೆ ಈಗಾಗಲೇ ಕೆನಾಲ್ ಕೆಲಸ ಆರಂಭಿಸಿರುವುದು ಈ ಭಾಗದ ರೈತರನ್ನು ಹಾಳು ಮಾಡಿ ಅವರು ಮಾಗಡಿ ಕಡೆ ನೀರು ಕೊಂಡೊಯ್ಯುವುದು ಅಕ್ರಮವಾಗಿದೆ. ಈ ಹಿನ್ನಲೆ ನಮ್ಮ ನೀರು ನಮ್ಮ ಹಕ್ಕು, ಹೋರಾಟ ಮಾಡುತ್ತೇವೆ. ಅದು ಕಾನೂನು ಕ್ರಮಬದ್ಧ ಹೋರಾಟ” ಎಂದರು.
“ಗುಬ್ಬಿ ತಾಲೂಕಿನ ಸಾವಿರಾರು ರೈತರಿಗೆ ಅನ್ಯಾಯವಾಗಿರುವ ಈ ಯೋಜನೆಯನ್ನು ಈ ಹಿಂದೆ ಬಿಜೆಪಿ ಸರ್ಕಾರ ರದ್ದು ಮಾಡಿತ್ತು. ಓರ್ವ ಪ್ರಭಾವಿ ಆಣತಿಯಂತೆ ಮರು ಚಾಲನೆಯಾಗಿರುವ ಕಾಮಗಾರಿ ಇಡೀ ಜಿಲ್ಲೆಯ ರೈತರ ಮರಣ ಶಾಸನವಾಗಿದೆ. ಗುಬ್ಬಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಹೇರೂರು ಕೆರೆಗೆ ಎರಡು ಹಂತದಲ್ಲಿ ನೀರು ನೀಡುತ್ತಿರುವುದೂ ಕೂಡಾ ನಿಂತು ಹೋಗಲಿದೆ. ನೀರಿಗೆ ಹಾಹಾಕಾರ ಉದ್ಭವವಾಗುವ ಮುನ್ನ ಈ ಹೋರಾಟ ಅನಿವಾರ್ಯ. ಚುನಾವಣಾ ನೀತಿ ಸಂಹಿತೆ ಅನುಗುಣವಾಗಿ ಪ್ರತಿಭಟನೆ ನಡೆಯಲಿದೆ” ಎಂದು ಹೋರಾಟಗಾರರು ವಿವರಿಸಿದರು.
“ಜಿಲ್ಲೆಯ ಜನರ ಅಳಿವು ಉಳಿವಿನ ಪ್ರಶ್ನೆಯಾದ ಹೇಮಾವತಿ ಜೀವಜಲ ನಮ್ಮ ಹಕ್ಕು ಎಂಬುದು ಸರ್ಕಾರದ ಗಮನಕ್ಕೆ ಸೆಳೆಯಲಿದ್ದೇವೆ. ಈ ಹೋರಾಟಕ್ಕೆ ರೈತ ಸಂಘ, ವಿವಿಧ ಮಠಾಧೀಶರು, ಪಕ್ಷಾತೀತ ರಾಜಕೀಯ ಮುಖಂಡರು, ಚುನಾಯಿತ ಪ್ರತಿನಿಧಿಗಳು ಆಗಮಿಸಲಿದ್ದಾರೆ” ಎಂದು ಹೇಳಿದರು.
ಎಲ್ಲ ಚರ್ಚೆ ಆಲಿಸಿದ ಡಿವೈಎಸ್‌ಪಿ ಶೇಖರ್ ಮಾತನಾಡಿ, “ನೀತಿ ಸಂಹಿತೆ ಜಾರಿ ಇರುವ ಕಾರಣ ನಿಯಮಾನುಸಾರ ಕ್ರಮಬದ್ಧ ಹೋರಾಟ ನಡೆಸಬೇಕಿದೆ. ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಶಾಂತಿಯುತ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚೆ ಮಾಡಿದಂತೆ ಕ್ರಮ ಬದ್ಧವಾಗಿ ಹೋರಾಟಕ್ಕೆ ಅನುಮತಿ ಅಗತ್ಯವಿದೆ. ಸಾಧ್ಯವಾದಷ್ಟೂ ಅಧಿಕಾರಿಗಳ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳುವ ಪ್ರಯತ್ನ ನಡೆಯಲಿ” ಎಂಬ ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ನೀರು ಪೂರೈಕೆಗೆ ಮೀನಾಮೇಷ; ಅತ್ತನೂರು ಗ್ರಾ. ಪಂಚಾಯಿತಿಗೆ ಮಹಿಳೆಯರಿಂದ ಮುತ್ತಿಗೆ
ಸಭೆಯಲ್ಲಿ ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್, ಜೆಡಿಎಸ್ ಮುಖಂಡ ಜಿ ಎನ್ ಬೆಟ್ಟಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಬಿ ಎಸ್ ಪಂಚಾಕ್ಷರಿ, ಜಿಲ್ಲಾ ಉಪಾಧ್ಯಕ್ಷ ಎಚ್ ಟಿ ಭೈರಪ್ಪ, ಸಿ ಆರ್ ಶಂಕರ್ ಕುಮಾರ್, ಪಪಂ ಸದಸ್ಯ ಜಿ ಆರ್ ಶಿವಕುಮಾರ್, ಸಿದ್ದರಾಮಯ್ಯ, ಲೋಕೇಶ್, ಪ್ರಮೋದ್, ಸಿಪಿಐ ಗೋಪಿನಾಥ್, ಗುಬ್ಬಿ ಪಿಎಸ್‌ಐ ಸುನಿಲ್ ಕುಮಾರ್, ಸಿ ಎಸ್ ಪುರ ಪಿಎಸ್‌ಐ ಶಿವಕುಮಾರ್ ಸೇರಿದಂತೆ ಇತರರು ಇದ್ದರು.
