ದಲಿತರ ಭೂಮಿಯನ್ನು ಎಂಪಿಎಂ(ಮೈಸೂರು ಪೇಪರ್ ಮಿಲ್ಸ್)ನವರು ಆಕ್ರಮಿಸಿರುವುದನ್ನು ಜಂಟಿ ಸರ್ವೆ ಮಾಡಿಸಿ ಹದ್ದುಬಸ್ತು ಮಾಡಿಸಿ ಬಿಡಿಸಿಕೊಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಮೇ 13ರಿಂದ ದಲಿತರಿಗೆ ಮಂಜೂರಾದ ಸರ್ವೆ ನಂ 12ರ ಭೂಮಿಯಲ್ಲಿಯೇ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದು, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
“ವಿಷಯಕ್ಕೆ ಸಂಭಂದಿಸಿದಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಡಿ ಬಿ ಹಳ್ಳಿ ಗ್ರಾಮದ ಹಾಗೂ ಅರದೊಟ್ಟು ಗ್ರಾಮದ 14 ಮಂದಿ ತಮಗೆ ಸೇರಿದ 8.20 ಎಕರೆ ಜಮೀನನ್ನು ಅರದೊಟ್ಟು ಗ್ರಾಮದ ಗ್ರಾಮ ಠಾಣಕ್ಕೆ ಬಿಟ್ಟುಕೊಟ್ಟಿದ್ದರಿಂದ ಇದರ ಬದಲಿಗೆ ಸರ್ಕಾರವು 14 ಜನರಿಗೆ ತಲಾ 2ಎಕರೆಯಂತೆ ಚಂದನಕೆರೆ ಸರ್ವೆ.ನಂ 12ರ 413 ಗೋಮಾಳ ಜಮೀನಿನ ಪೈಕಿ 28 ಎಕರೆ ಭೂಮಿಯನ್ನು ಎಲ್‌ಎನ್‌ಡಿ 147/60.61ರಂತೆ ಸರ್ಕಾರ ಸಾಗುವಳಿ ಚೀಟಿ ನೀಡಿರುತ್ತದೆ ಹಾಗೂ ಚಂದನಕೆರೆಯ ಪರಿಶಿಷ್ಟ ಜಾತಿ ಆದಿಕರ್ನಾಟಕ ಜನಾಂಗಕ್ಕೆ ಸೇರಿದ ಸುಮಾರು 21 ಮಂದಿ ಹಾಗೂ ಕಲ್ಲಿಹಾಳ್ ಗ್ರಾಮದ 20 ಮಂದಿ ತಲಾ 2 ಎಕರೆಯಂತೆ ಸಾಗುವಳಿ ಮಾಡುತ್ತಾ ನಮೂನೆ 50-51ರಲ್ಲಿ ಅರ್ಜಿ ಸಲ್ಲಿಸಿ ಸ್ವಾಧೀನಾನುಭವದಲ್ಲಿದ್ದರು” ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
“1984-850A ಮೇಲ್ಕಂಡವರೆಲ್ಲರೂ ಸ್ವಾಧೀನಾನುಭವದಲ್ಲಿರುತ್ತಾರೆ. ಆದರೆ ದಲಿತರು ಸಾಗುವಳಿ ಮಾಡುತ್ತಾ ಬಂದಿದ್ದು, ಭೂಮಿಯನ್ನು ಅನಕ್ಷರಸ್ಥರು ಹಾಗೂ ಅಸಹಾಯಕ ದಲಿತರನ್ನು ಹೆದರಿಸಿ ದೌರ್ಜನ್ಯ ಮಾಡಿ 1985-86 ರಲ್ಲಿ ಎಂಪಿಎಂ ನವರು ನೀಲಗಿರಿ ನೆಡು ತೋಪು ಮಾಡಿದ್ದು ದಲಿತರು ಭೂಮಿಯ ಮೇಲೆ ಹೋಗದಂತೆ ತಡೆದು ದೌರ್ಜನ್ಯವೆಸಗಿರುತ್ತಾರೆ. ಸದರಿ ದಲಿತರು ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡುತ್ತಲೇ ಓಡಾಡುತ್ತಿದ್ದರು. ಎಂಪಿಎಂನವರ ದೌರ್ಜನ್ಯದಿಂದ ಭೂಮಿ
ಕಳೆದುಕೊಂಡ ಸಂತ್ರಸ್ತರಿಗೆ ಭೂಮಿ ಅವರ ಕೈ ಸೇರಲಿಲ್ಲ. ಕಚೇರಿಗಳಿಗೆ ಅಲೆದಾಡುವುದು ಅವರ ಜೀವನವಾಗಿದೆ. ಇತ್ತೀಚೆಗೆ ಎಂಪಿಎಂನವರು ದೌರ್ಜನ್ಯದಿಂದ ಕಿತ್ತುಕೊಂಡಿದ್ದ ದಲಿತರಿಗೆ ಸೇರಿದ ಭೂಮಿಯನ್ನು ಕೆಲವರು ಅಕ್ರಮವಾಗಿ ಬಗರ್ ಹುಕುಂ ಸಾಗುವಳಿ ಮಾಡಲು ಮುಂದಾಗಿರುವುದು ಸಮಿತಿಯ ಗಮನಕ್ಕೆ ಬಂದಿದೆ” ಎಂದರು.
“ತಾವುಗಳು ತಕ್ಷಣ ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗಳೊಂದಿಗೆ ಆಗಮಿಸಿ ಜಂಟಿ ಸರ್ವೆಕಾರ್ಯ ನಡೆಸಿ ಸರ್ಕಾರದಿಂದ ದಲಿತರಿಗೆ ಚಂದನಕೆರೆ ಸರ್ವೆ ನಂ 12ರಲ್ಲಿ ಮಂಜೂರಾದ ಭೂಮಿಯನ್ನು ಸರ್ವೆ ಕಾರ್ಯ ನಡೆಸಿ ಹದ್ದುಬಸ್ತು ಮಾಡಿಸಿ ದಲಿತರಿಗೆ ಭೂಮಿಯನ್ನು ಬಿಡಿಸಿಕೊಡಬೇಕು. ಹಾಗೂ ಬಗುರ್ ಹುಕುಂ ಸಾಗುವಳಿದಾರರಿಗೆ ಮಂಜೂರಾತಿ ಹಂತದಲ್ಲಿದ್ದ ಭೂಮಿಯನ್ನು ಸಾಗವಳಿ ಕೊಡಿಸಿಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಮೇ 16ರಂದು ಪ್ರತಿಭಟನೆ; ಡಿವೈಎಸ್‌ಪಿ ನೇತೃತ್ವದ ಪೂರ್ವಭಾವಿ ಸಭೆ
ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಪ್ರಧಾನ ಸಂಚಾಲಕ ಹನುಮಂತಪ್ಪ ಕಲ್ಲಿಹಾಳ್, ಜಿಲ್ಲಾ ಪ್ರಧಾನ ಸಂಚಾಲಕ ಟಿ ಎಚ್ ಹಾಲೇಶಪ್ಪ, ಗ್ರಾಮಾಂತರ ಸಹ ಸಂಚಾಲಕ ನವೀನ್ ಕುಮಾರ್ ಸೇರಿದಂತೆ ಇತರರು ಇದ್ದರು.
