- ʼಬಲರಾಮ್ ಅವರಿಂದ ನ್ಯಾಯಸಮ್ಮತ, ನಿಷ್ಪಕ್ಷಪಾತ ಚುನಾವಣೆ ಸಾಧ್ಯವಿಲ್ಲʼ
- ಬಲರಾಮ್ ಅವರ ಮೊಬೈಲ್ ಕರೆ ಪರಿಶೀಲಿಸಿ, ತನಿಖೆ ನಡೆಸುವಂತೆ ಆಗ್ರಹ
ಹಾಸನದ ಬಿಇಒ ಬಲರಾಮ್ ಅವರು ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಜೆಡಿಎಸ್ ಅಭ್ಯರ್ಥಿ ಎಚ್ ಪಿ ಸ್ವರೂಪ್ ಆಗ್ರಹಿಸಿದ್ದಾರೆ.
ಹಾಸನ ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಏಪ್ರಿಲ್ 4ರಂದು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. 15 ರಂದು ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
“ಬಲರಾಮ್ ಅವರು ಇದೇ ಜಿಲ್ಲೆಯ ಅರಕಲಗೂಡಿನವರು. ಹಾಗಾಗಿ ಅವರಿಂದ ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ಚುನಾವಣೆ ಸಾಧ್ಯವಿಲ್ಲ. ಶಿಕ್ಷಕರಿಗೆ ಒತ್ತಡ ಹಾಕಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ಇಡಿಸಿ ಮತಗಳನ್ನು ತಮ್ಮ ಕೈಗೆ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಈ ಬಗ್ಗೆ ಅವರ ಮೊಬೈಲ್ ಕರೆ ಪರಿಶೀಲಿಸಿ, ತನಿಖೆ ನಡೆಸಿ” ಎಂದು ಒತ್ತಾಯಿಸಿದರು.
“ಬಲರಾಮ್ ಅವರು ಹಾಸನ ಜಿಲ್ಲೆಯವರೇ ಆಗಿರುವ ಕಾರಣ, ಕೂಡಲೇ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಏಕೆಂದರೆ ಒಂದು ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ” ಎಂದರು.
“ಸರ್ಕಾರಿ ಶಿಕ್ಷಕರನ್ನು ಕರೆಸಿ ಅವರಿಗೆ ಊಟೋಪಚಾರ ಮಾಡುತ್ತಾ, ಒತ್ತಡ ಹಾಕುತ್ತಾ ಪ್ರಭಾವ ಬೀರುತ್ತಿದ್ದು, ಅವರ ಸಹೋದರಿ ಕೂಡ ಸಾಲಗಾಮೆಯಲ್ಲಿ ಶಿಕ್ಷಕಿ ಆಗಿರುವುದರಿಂದ ಅವರ ಮೂಲಕವೂ ಪ್ರಭಾವ ಬೀರುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಸೂಕ್ತವಾಗಿ ಪರಿಶೀಲನೆ ನಡೆಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನದಲ್ಲಿ ನೂರಕ್ಕೆ ನೂರು ಗೆದ್ದೇ ಗೆಲ್ತೀವಿ : ಪ್ರಜ್ವಲ್ ರೇವಣ್ಣ
ಶಾಸಕರಿಗೆ ಜನರೇ ಉತ್ತರ ಕೊಡುತ್ತಾರೆ
“ಶಾಸಕರ ಭ್ರಷ್ಟಾಚಾರದ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಯಾವುದೇ ನಾಯಕರ ಬಗ್ಗೆ ಮಾತನಾಡಲ್ಲ ಎಂದಿರುವ ಪ್ರೀತಂ ಗೌಡರಿಗೆ ಈಗ ಬುದ್ದಿ ಬ೦ದಿರಬೇಕು, ದುರಹಂಕಾರದ ಶಾಸಕರಿಗೆ ಮುಂದೆ ಜನರೇ ಉತ್ತರ ಕೊಡುತ್ತಾರೆ” ಎಂದರು.
“ಜೆಡಿಎಸ್ ರ್‍ಯಾಲಿ ಹಾಗೂ ನಮ್ಮ ನಾಯಕರ ಆಗಮನ ಕಂಡು ಅವರಿಗೆ ಭಯ ಆಗಿರಬೇಕು. ಅದಕ್ಕೇ ಯಾರ ಬಗ್ಗೆಯೂ ಮಾತನಾಡುವುದಿಲ್ಲ” ಎಂದಿದ್ದಾರೆ ಎಂದು ಕುಟುಕಿದರು.
“ಹಾಸನ ಟಿಕೆಟ್ ಗೊಂದಲ ವಿಚಾರ ಈಗ ಮುಗಿದ ಅಧ್ಯಾಯ. ಭವಾನಿ ರೇವಣ್ಣ ಅವರು ನಮ್ಮ ತಾಯಿ ಇದ್ದಹಾಗೆ, ಆಶೀರ್ವಾದ ಮಾಡಿ ಪ್ರಚಾರ ಕೈಗೊಂಡಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇರಲಿಲ್ಲ. ಯಾರಿಗೆ ಟಿಕೆಟ್ ಸಿಕ್ಕರೂ ಕೆಲಸ ಮಾಡಲು ನಿರ್ಧರಿಸಿದ್ದೆವು” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
“ಹಾಸನ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಿಸುತ್ತೇನೆ. ಮುಚ್ಚುತ್ತಿರುವ ಕಾರ್ಖಾನೆಗಳಿಗೆ ಪುನರುಜ್ಜೀವನ ನೀಡಬೇಕು. ಇಲ್ಲಿ ಓದಿದವರಿಗೆ ಇಲ್ಲೇ ಉದ್ಯೋಗ ಸಿಗಬೇಕು. ರೇವಣ್ಣ ಅವರ ಕನಸಿನಂತೆ ಚನ್ನಪಟ್ಟಣ ಕೆರೆ ಅಭಿವೃದ್ಧಿಯಾಗಬೇಕು ಎಂಬ ವಿಷಯ ಮುಂದಿಟ್ಟು ಜನರ ಎದುರು ಮತ ಕೇಳುವೆ” ಎಂದಿದ್ದಾರೆ.
“ಶಾಸಕರಿಗೆ ಭಯ ಶುರುವಾಗಿದೆ, ಹಾಗಾಗಿಯೇ ರೇವಣ್ಣ ಅವರನ್ನು ಒಮ್ಮೆ ಹೊಗಳೋದು, ಒಮ್ಮೆ ತೆಗಳೋದನ್ನು ಮಾಡುತ್ತಿದ್ದಾರೆ. ಸುದ್ದಿ ಮಾಧ್ಯಮಗಳ ಗಮನ ಬೇರೆಡೆಗೆ ಸೆಳೆಯಲು, ನಮ್ಮ ರ್‍ಯಾಲಿ ದಿನ ಹೊಳೆನರಸೀಪುರದಲ್ಲಿ ನಾಮಪತ್ರ ಸಲ್ಲಿಸುವೆ ಎಂದರು. ಆದರೆ, ದೇವೇಗೌಡರ ಆದಿಯಾಗಿ ನಮ್ಮ ನಾಯಕರೆಲ್ಲರೂ ಬಂದು ಆಶೀರ್ವಾದ ಮಾಡಿದರು. ಜನ ಬೆಂಬಲವೂ ಸಿಕ್ಕಿತು” ಎಂದರು.