ಕಮಲನಗರ ತಾಲೂಕಿನ 54 ಗ್ರಾಮಗಳ ದಾಖಲಾತಿಗಳನ್ನು ಔರಾದ ತಾಲೂಕಿನಿಂದ ಕಮಲನಗರ ತಾಲೂಕಿಗೆ ವರ್ಗಾಯಿಸುವಂತೆ ಜನಪರ ಹೋರಾಟ ಒಕ್ಕೂಟ ಆಗ್ರಹಿಸಿದೆ.
ಈ ಕುರಿತುಒಕ್ಕೂಟದ ಪ್ರಮುಖರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಕಮಲನಗರ ತಾಲೂಕು ತಹಸೀಲ್ದಾರ್ ಅಮಿತ ಕುಲಕರ್ಣಿ ಅವರಿಗೆ ಸಲ್ಲಿಸಿದರು.
ಜನಪರ ಹೋರಾಟ ಒಕ್ಕೂಟದ ಅಧ್ಯಕ್ಷ ವೈಜಿನಾಥ ವಡ್ಡೆ ಮಾತನಾಡಿ, “ತಾಲೂಕು ರಚನೆಯಾಗಿ ಸುಮಾರು ಆರು ವರ್ಷವಾದರೂ ಕಮಲನಗರದಲ್ಲಿ ತಾಲೂಕು ಕಚೇರಿಗಳು ನಡೆಯುತ್ತಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಜಿಲ್ಲಾಡಳಿತ ಸೇರಿದಂತೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ” ಎಂದು ದೂರಿದರು.
“ತಾಲೂಕು ಕೇಂದ್ರದಲ್ಲಿರುವ ಇಲಾಖೆವಾರು ಅಧಿಕಾರಿಗಳಿಗೆ ವೃದಲ್ಲಿ 3 ದಿನ ಸೇವೆಗಾಗಿ ಕಮಲನಗರ ತಾಲೂಕಿಗೆ ಕಡ್ಡಾಯಗೊಳಿಸಬೇಕು. ಗ್ರಾಮ ಪಂಚಾಯಿತಿನಿಂದ ಉದ್ದೇಶಿತ ಖರೀದಿಸಿದ 2.20 ಎಕರೆ ಭೂಮಿ ಕಚೇರಿಗಳ ಕಟ್ಟಡಕ್ಕಾಗಿ ಬಳಸಬೇಕು” ಎಂದು ಆಗ್ರಹಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪ್ರವೀಣ ಕುಲಕರ್ಣಿ ಮಾತನಾಡಿ, “54 ಗ್ರಾಮಗಳ ದಾಖಲೆಗಳನ್ನು ಜೂನ್ 7ರ ಒಳಗಾಗಿ ವರ್ಗಾಯಿಸದಿದ್ದರೆ ಒಕ್ಕೂಟದಿಂದ ತಹಶಿಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶ ತನ್ನ ಹಳೆಯ ಲಯಕ್ಕೆ, ಪ್ರಜಾಪ್ರಭುತ್ವಕ್ಕೆ ಹಿಂದಿರುಗುತ್ತಿದೆಯೇ?
ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಸಚಿನ ಅಗಾಳೆ, ತಾನಾಜಿ ಮೇತ್ರೆ ತೋರಣಾ, ಸೈಯದ್ ಮುಸಾ ಖತಗಾಂವ್, ಪ್ರಶಾಂತ ಖಾನಾಪುರೆ, ಶ್ರೀರಂಗ ಪರಿಹಾರ, ಭೀಮರಾವ್ ಕಣಜೆ, ವಿಠಲ ಪಾಟೀಲ್ ಬಾಲೂರ, ವಿಷ್ಣುದಾಸ ಸೇರಿದಂತೆ ಇತರರಿದ್ದರು.