ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರನ್ನು ದೆಹಲಿ ಪೊಲೀಸರು ಭಯೋತ್ಪಾದನಾ ವಿರೋಧಿ ಕಾನೂನಿನ (ಯುಎಪಿಎ) ಅಡಿಯಲ್ಲಿ ಬಂಧಿಸಿರುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಘೋಷಿಸಿದೆ. ಅವರನ್ನು ಬಿಡುಗಡೆ ಮಾಡುವಂತೆ ಪೊಲೀಸರಿಗೆ ಆದೇಶಿಸಿದೆ.
ತಮ್ಮ ಬಂಧನವನ್ನು ಅನೂರ್ಜಿತಗೊಳಿಸುವಂತೆ ಕೋರಿ ಪುರ್ಕಾಯಸ್ಥ ಅವರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬುಧವಾರ, ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಬಿಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ‘ಪುರಕಾಯಸ್ಥ ಅವರ ಬಂಧನ ಸಂಬಂಧ ಆಧಾರಗಳನ್ನು ಸಲ್ಲಿಸಿಲ್ಲ’ ಎಂದು ಹೇಳಿದೆ.
“ಬಂಧನದ ಆಧಾರಗಳನ್ನು ಒದಗಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇದು ಬಂಧನವನ್ನು ದುರ್ಬಲಗೊಳಿಸುತ್ತದೆ. ಮೇಲ್ಮನವಿದಾರರು ಕಸ್ಟಡಿಯಿಂದ ಬಿಡುಗಡೆಗೆ ಅರ್ಹನಾಗಿದ್ದಾರೆ. ಅವರನ್ನು ಕಸ್ಟಡಿಗೆ ನೀಡುವ ಆದೇಶವು ಅಮಾನ್ಯವಾಗಿದೆ” ಎಂದು ನ್ಯಾಯಮೂರ್ತಿ ಮೆಹ್ತಾ ಹೇಳಿದ್ದಾರೆ.
ಚೀನಾ ಪರ ಪ್ರಚಾರ ಮಾಡಲು ನ್ಯೂಸ್‌ಕ್ಲಿಕ್ ಚೀನಾದಿಂದ ಹಣ ಪಡೆದಿದೆ ಎಂದು ಅರೋಪಿಸಲಾಗಿತ್ತು. ಆರೋಪ ಕೇಳಿಬಂದ ಕೆಲ ದಿನಗಳಲ್ಲಿಯೇ ಯುಎಪಿಎ ಕಾಯಿದೆಯಡಿ ಪುರಕಾಯಸ್ಥ ಅವರನ್ನು 2023ರ ಅಕ್ಟೋಬರ್ 3 ರಂದು ಬಂಧಿಸಲಾಗಿತ್ತು.
ಪ್ರಕರಣ ಸಂಬಂಧ ಮಾರ್ಚ್‌ನಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಅದರಲ್ಲಿ, ದೆಹಲಿ ಪೊಲೀಸರು “ನ್ಯೂಸ್‌ಕ್ಲಿಕ್ ಮತ್ತು ಪುರಕಾಯಸ್ಥ ಭಯೋತ್ಪಾದಕರಿಗೆ ನೆರವು ನೀಡಿದ್ದಾರೆ ಮತ್ತು ಚೀನಾದ ಪರ ಪ್ರಚಾರವನ್ನು ಉತ್ತೇಜಿಸುತ್ತಿದ್ದಾರೆ” ಎಂದು ಆರೋಪಿಸಿದ್ದರು.
ಅಲ್ಲದೆ, ಪುರಕಾಯಸ್ಥ ಅವರನ್ನು ಬಂಧಿಸಿದ ದಿನವೇ ನ್ಯೂಸ್‌ಕ್ಲಿಕ್‌ನ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿತ್ತು. ಆದರೆ, ಅವರು ಪ್ರಕರಣದಲ್ಲಿ ಸಾಕ್ಷಿಯಾಗಲು ಒಪ್ಪಿಕೊಂಡ ಬಳಿಕ, ಅವರನ್ನು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.