ಜೀವನಾಂಶದ ಪ್ರಕರಣವನ್ನು ಹಿಂಪಡೆಯಲು ನಿರಾಕರಿಸಿದ ಪತ್ನಿಯನ್ನು ಆಕೆಯ ಪತಿ ಮತ್ತು ಆತನ ಸಹೋದರ ನಡುರಸ್ತೆಯಲ್ಲಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ನಡೆದಿದೆ.
ಹಾರೋಹಳ್ಳಿ ನಿವಾಸಿ ಮಂಜುಳಾ (35) ಹತ್ಯೆಯಾದ ದುರ್ದೈವಿ. ವೃತ್ತಿಪರ ಛಾಯಾಗ್ರಾಹಕ ವಡ್ಡರಹಳ್ಳಿಯ ರಾಜೇಶ್ (40) ಹಾಗೂ ಆತನ ಸಹೋದರ ಸೋಮಶೇಖರ್ ಆರೋಪಿಗಳು. ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.
ಮಂಜುಳಾ ಮತ್ತು ರಾಜೇಶ್ ಆರು ವರ್ಷದ ಹಿಂದೆ ಮದುವೆಯಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಇಬ್ಬರು ಬೇರ್ಪಟ್ಟಿದ್ದರು. ದಂಪತಿಗೆ 5 ವರ್ಷದ ಮಗಳಿದ್ದಾಳೆ.
ಸಂಬಂಧಿಕರ ಮನೆಯ ಸಮಾರಂಭಕ್ಕೆ ತೆರಳಲು ಮಂಜುಳಾ ಭಾನುವಾರ ಮಧ್ಯಾಹ್ನ ಕನಕಪುರದ ಮುದುವಾಡಿ ಗೇಟ್‌ನ ಸಂತೆಗೇಟ್ ಬಳಿಯ ಬಸ್ ನಿಲ್ದಾಣದಲ್ಲಿ ನಿಂತಿದ್ದರು. ಈ ವೇಳೆ, ಆಕೆಯನ್ನು ಹಿಂಬಾಲಿಸಿ ಬಂದಿದ್ದ ಆರೋಪಿಗಳು ಆಕೆಯನ್ನು ಕೊಲೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಮಂಜುಳಾ ಅವರ ಸಹೋದರ ಮಹೇಶ್ ದೂರು ದಾಖಲಿಸಿದ್ದಾರೆ.
ಮಂಜುಳಾಗೆ ಆರೋಪಿ ಪತಿ ರಾಜೇಶ್ ಹಲವು ಬಾರಿ ಪ್ರಕರಣವನ್ನು ಹಿಂಪಡೆಯಲು ಹೇಳಿದ್ದಾನೆ. ಆದರೆ, ಇದಕ್ಕೆ ಮಂಜುಳಾ ನಿರಾಕರಿಸಿದ್ದರು ಎನ್ನಲಾಗಿದೆ.
“ಮಂಜುಳಾ ಆಟೋದಲ್ಲಿ ತೆರಳುತ್ತಿದ್ದಳು. ಅವಳು ಆಟೋದಿಂದ ಇಳಿದ ನಂತರ, ಅವಳನ್ನು ಬೈಕಿನಲ್ಲಿ ಹಿಂಬಾಲಿಸುತ್ತಿದ್ದ ಆರೋಪಿ ರಾಜೇಶ್ ಆಕೆಗೆ ಬೈಕಿನಲ್ಲಿ ಬರಲು ಹೇಳಿದ್ದಾನೆ. ಆಕೆ ಇದಕ್ಕೆ ನಿರಾಕರಿಸಿ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಾಗ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಸ್ ನಿಲ್ದಾಣದಲ್ಲಿದ್ದ ಇತರ ಮಹಿಳೆಯರು ನನ್ನ ಸಹೋದರಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ, ಆರೋಪಿಗಳು ಅವರಿಗೆ ಬೆದರಿಕೆ ಹಾಕಿದ್ದಾರೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಕ್ರೂರ ಹತ್ಯೆಯ ಬಗ್ಗೆ ನನ್ನ ಸಂಬಂಧಿಕರೊಬ್ಬರು ನನಗೆ ಮಾಹಿತಿ ನೀಡಿದ್ದಾರೆ” ಎಂದು ಮಹೇಶ್ ಹೇಳಿದ್ದಾರೆ.
“ನನ್ನ ತಂಗಿ ಮತ್ತು ರಾಜೇಶ್ ಮದುವೆಯಾದ ಮೊದಲ ನಾಲ್ಕು ವರ್ಷ ಸಂತೋಷದಿಂದ ಇದ್ದರು. ಆ ನಂತರ ಆರೋಪಿ ನನ್ನ ತಂಗಿಗೆ ಕಿರುಕುಳ ನೀಡಲು ಆರಂಭ ಮಾಡಿದ್ದಾನೆ. ನನ್ನ ತಂಗಿಯ ಮೇಲೆ ಅನುಮಾನಿಸಲು ಪ್ರಾರಂಭ ಮಾಡಿದ್ದಾನೆ. ಮಲಗುವ ಕೋಣೆಯ ಒಳಗೂ ಸಿಸಿಟಿವಿಗಳನ್ನು ಹಾಕಿಸಿದ್ದನು” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ರೈಲು ನಿಲ್ದಾಣಗಳಿಂದ 22 ಮಕ್ಕಳನ್ನು ರಕ್ಷಿಸಿದ ಆರ್‌ಪಿಎಫ್
“ಅವನ ಹಿಂಸೆಯನ್ನು ಸಹಿಸಲಾಗದೆ ಅವಳು ಅವನಿಂದ ದೂರ ಆಗಿ, ನಮ್ಮೊಂದಿಗೆ ನೆಲೆಸಿದ್ದಳು. ಅವರಿಗೆ ಐದು ವರ್ಷದ ಮಗಳಿದ್ದು, ಮಗುವನ್ನು ನೋಡಿಕೊಳ್ಳಲು ಪತಿಯಿಂದ ಜೀವನಾಂಶ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಕಳೆದ ಆರು ತಿಂಗಳಿನಿಂದ ನ್ಯಾಯಾಲಯದ ಪ್ರಕರಣವನ್ನು ಹಿಂಪಡೆಯುವಂತೆ ರಾಜೇಶ್ ನನ್ನ ತಂಗಿಗೆ ಒತ್ತಾಯಿಸುತ್ತಿದ್ದನು. ಆಕೆ ನಿರಾಕರಿಸಿದಾಗ ರಾಜೇಶ್ ಮತ್ತು ಆತನ ಸಹೋದರ ನಮ್ಮ ಮನೆ ಬಳಿ ಬಂದು ಸಮಸ್ಯೆ ಸೃಷ್ಟಿಸುತ್ತಿದ್ದರು. ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಾಜೇಶ್ ಆಕೆಗೆ ಬೆದರಿಕೆ ಹಾಕಿದ್ದನು” ಎಂದು ತಿಳಿಸಿದ್ದಾರೆ.
“ಇಬ್ಬರು ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆರೋಪಿಗಳನ್ನು ಹುಡುಕುತ್ತಿದ್ದೇವೆ” ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕನಕಪುರ ಗ್ರಾಮಾಂತರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.