ಭಾರತ ಮತ್ತು ಇರಾನ್ ನಡುವೆ ಬಂದರು ಒಪ್ಪಂದ; ಭಾರತದ ಪಾಲಿಗೆ ದೊಡ್ಡ ವ್ಯವಹಾರ

Date:

Advertisements
ಭಾರತದ ತೈಲ ವ್ಯಾಪಾರದಲ್ಲಿ ಯಾವುದೇ ಅಡೆತಡೆ ಉಂಟಾದರೆ, ಅದು ತೈಲದ ಖರೀದಿ ಮೇಲೆ ಮಾತ್ರವಲ್ಲದೆ, ವಿದೇಶಿ ವಿನಿಮಯ ಮತ್ತು ರೂಪಾಯಿ ಮೌಲ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಭಾರತ ಇಂತಹ ಪ್ರತಿಕೂಲ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಚಾಬಹಾರ್‌ ಒಪ್ಪಂದ ನೆರವಾಗುತ್ತದೆ.

ಭಾರತವು ಮೊದಲ ಬಾರಿಗೆ ವಿದೇಶಿ ಬಂದರೊಂದನ್ನು ನಿರ್ವಹಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಇರಾನ್‌ನ ಚಾಬಹಾರ್‌ನಲ್ಲಿರುವ ಒಂದು ಬಂದರಿನ ನಿರ್ವಹಣೆಗೆ ಭಾರತವು ಇರಾನ್‌ ಜೊತೆ ಒಪ್ಪಂದ ಮಾಡಿಕೊಂಡಿದೆ. ಉಭಯ ರಾಷ್ಟ್ರಗಳು ಮೇ 13ರಂದು ಒಪ್ಪಂದಕ್ಕೆ ಸಹಿ ಹಾಕಿವೆ. 10 ವ‍ರ್ಷಗಳ ಅವಧಿಗೆ ಚಾಬಹಾರ್‌ ಬಂದರು ನಿ‍‍ರ್ವಹಣೆಯ ಅಧಿಕಾರವನ್ನು ಇರಾನ್‌, ಭಾರತಕ್ಕೆ ನೀಡಿದೆ.

ಸೋಮವಾರ, ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ನಡೆದ ಒಪ್ಪಂದ ಸಭೆಯಲ್ಲಿ, ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಮತ್ತು ಪೋರ್ಟ್ಸ್ ಅಂಡ್ ಮ್ಯಾರಿಟೈಮ್ ಆರ್ಗನೈಸೇಶನ್ ಆಫ್ ಇರಾನ್ (ಪಿಎಂಒ) ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದ ಸಭೆಯಲ್ಲಿ ಕೇಂದ್ರ ಬಂದರು ಸಚಿವ ಸರ್ಬಾನಂದ ಸೋನೊವಾಲ್ ಕೂಡ ಭಾಗಿಯಾಗಿದ್ದರು. ”ಈ ಒಪ್ಪಂದದ ಮೂಲಕ ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ ಮತ್ತು ರಾಜಕೀಯ ಸಂಬಂಧಗಳು ಜಿಗಿತ ಕಂಡಿವೆ” ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕ ಹಿಮಾಂಶು ರಾಯ್ ಬಣ್ಣಿಸಿದ್ದಾರೆ.

ಚಾಬಹಾರ್‌ನಲ್ಲಿ ಎರಡು ವಿಭಿನ್ನ ಬಂದರುಗಳಿವೆ. ಒಂದು) ಶಾಹಿದ್ ಬೆಹೆಷ್ಟಿ, ಮತ್ತೊಂದು) ಶಾಹಿದ್ ಕಲಂತರಿ. ಇದರಲ್ಲಿ ಶಾಹಿದ್ ಬೆಹೆಷ್ಟಿ ಬಂದರನ್ನು ಭಾರತ ನಿರ್ವಹಿಸಲಿದೆ. ಮತ್ತು ಭಾರತವು ಮೊದಲನೆಯದನ್ನು ನಿರ್ವಹಿಸುತ್ತದೆ.

Advertisements

ಅಂದಹಾಗೆ, 22 ವರ್ಷಗಳ ಹಿಂದೆ, ಅಂದರೆ – 2002ರಲ್ಲಿ ಈ ರೀತಿಯ ವಿದೇಶಿ ಬಂದರು ನಿರ್ವಹಣೆಯ ಕಲ್ಪನೆ ಚರ್ಚೆಯಲ್ಲಿತ್ತು. ಅದು ಈಗ ಜಾರಿಯಾಗಿದೆ. ಬಂದರು ನಿರ್ವಹಣೆಗಾಗಿ ಒಪ್ಪಂದ ಮಾಡಿಕೊಂಡಿರುವುದು ಭಾರತದ ಮಟ್ಟಿಗೆ ಪ್ರಮುಖ ರಾಜತಾಂತ್ರಿಕ ವಿಜಯವೆಂದು ಪರಿಗಣಿಸಲಾಗಿದೆ.

ಬಂದರು ನಿರ್ವಹಣೆಯು ರಾಜಕೀಯ ಮತ್ತು ಆರ್ಥಿಕವಾಗಿ ಭಾರತಕ್ಕೆ ಹೇಗೆ ಲಾಭವಾಗಬಹುದು ಎಂಬುದನ್ನು ನೋಡೋಣ…

ಚಾಬಹಾರ್ ಬಂದರು ಮತ್ತು ಭೌಗೋಳಿಕ ರಾಜಕೀಯ ಮಹತ್ವ

ಚಾಬಹಾರ್ ಬಂದರಿನ ಮಹತ್ವವು ಅದರ ಭೌಗೋಳಿಕ ಸ್ಥಳದಲ್ಲಿದೆ. ಗಲ್ಫ್ ಆಫ್ ಓಮನ್‌ನ ಮುಖ್ಯ ಭಾಗದಲ್ಲಿರುವ ಈ ಬಂದರು ಗುಜರಾತ್‌ನ ಕಾಂಡ್ಲಾ ಬಂದರಿನಿಂದ ಕೇವಲ 550 ನಾಟಿಕಲ್ ಮೈಲುಗಳು (1018.6 ಕಿ.ಮೀ) ಮತ್ತು ಮುಂಬೈನಿಂದ 786 ನಾಟಿಕಲ್ ಮೈಲಿ (1455.67 ಕಿ.ಮೀ) ದೂರದಲ್ಲಿದೆ.

ಈ ಬಂದರಿನ ದೀರ್ಘಾವಧಿಯ ನಿರ್ವಹಣಾ ಒಪ್ಪಂದದ ಬಳಿಕ, ಭಾರತವು ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ಉಜ್ಬೇಕಿಸ್ತಾನ್, ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್ ಹಾಗೂ ತುರ್ಕಮೆನಿಸ್ತಾನಗಳೊಂದಿಗೆ ಯಾವುದೇ ಅಡೆತಡೆ ಇಲ್ಲದ ವ್ಯಾಪಾರ-ವಹಿವಾಟು ನಡೆಸಲು ಅವಕಾಶ ಒದಗಿಸುತ್ತದೆ. ಇದರರ್ಥ, ಭಾರತವು ತನ್ನ ಸರಕುಗಳನ್ನು ಈ ರಾಷ್ಟ್ರಗಳಿಗೆ ಹಾಗೂ ಯುರೋಪ್‌ಗೆ ಸಾಗಿಸಲು ಅನುಮತಿಗಾಗಿ ಪಾಕಿಸ್ತಾನವನ್ನು ಅವಲಂಬಿಸಬೇಕಾಗಿಲ್ಲ.

“ಇಸ್ಲಾಮಾಬಾದ್ ಸಾಮಾನ್ಯ ಭಾರತೀಯ ಸರಕುಗಳನ್ನು ಸಹ ಭೂ ಮಾರ್ಗದ ಮೂಲಕ ಅಫ್ಘಾನಿಸ್ತಾನಕ್ಕೆ ಸಾಗಿಸಲು ಅನುಮತಿಸುತ್ತಿಲ್ಲ. ಹೀಗಾಗಿ, ಭಾರತವು ಪಾಕಿಸ್ತಾನದ ಮೂಲಕ ಆಫ್ಘಾನಿಸ್ತಾನಕ್ಕೆ ಹೋಗದೆ, ನೇರವಾಗಿ ಅಫ್ಘಾನ್‌ ತಲುಪಲು ಚಾಬಹಾರ್‌ ಬಂದರು ಅನುವು ಮಾಡಿಕೊಡುತ್ತದೆ” ಎಂದು ಭೌಗೋಳಿಕ ರಾಜಕೀಯ ತಜ್ಞ, ನಿವೃತ್ತ ಲೆಫ್ಟಿನೆಂಟ್ ಜನರಲ್ ಕಮಲ್ ದಾವರ್ ಹೇಳಿದ್ದಾರೆ.

ಇದಲ್ಲದೆ, ಚಾಬಹಾರ್ ಬಂದರನ್ನು ಪಾಕಿಸ್ತಾನದ ಗ್ವಾದರ್ ಬಂದರು ಮತ್ತು ಚೀನಾದ ‌ʼಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ʼ (BRI) ಯೋಜನೆಗೆ ಪ್ರತಿಸ್ಪರ್ಧಿಯಾಗಿ ಭಾರತವು ನೋಡುತ್ತಿದೆ. ಪಾಕಿಸ್ತಾನದೊಂದಿಗೆ ಚೀನಾ ಒಪ್ಪಂದ ಮಾಡಿಕೊಂಡು ಪಾಕಿಸ್ತಾನದ ಗ್ವಾದರ್‌ ಬಂದರಿನವರೆಗೆ ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಆ ಮೂಲಕ ಆಫ್ರಿಕಾ ಭೂಭಾಗದೊಂದಿಗೆ ತನ್ನ ವ್ಯವಹಾರವನ್ನು ಸುಲಭ ಮಾಡಿಕೊಳ್ಳಲು ಮುಂದಾಗಿದೆ. ಅದೇ ರೀತಿಯಲ್ಲಿ, ಭಾರತವು ಚಾಬಹಾರ್‌ ಬಂದರಿನ ಮೂಲಕ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳೊಂದಿಗೆ ವ್ಯಾಪಾರ-ವ್ಯವಹಾರವನ್ನು ಉತ್ತೇಜಿಸಬಹುದು ಎಂಬುದು ಕಮಲ್‌ ದಾವರ್‌ ಅವರ ಅಭಿಪ್ರಾಯ.

Target China-Pakistan Economic Corridor (CPEC)
ಚೀನಾದ ‌ʼಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ʼ ಯೋಜನೆ

ಚಾಬಹಾರ್ ಒಪ್ಪಂದದ ಆರ್ಥಿಕ ಮಹತ್ವ

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ತೈಲ ಪೂರೈಕೆಗೆ ಅಡೆತಡೆಗಳು ಎದುರಾಗುತ್ತಿವೆ. ಇಂತಹ ಸಮಯದಲ್ಲಿ ಈ ಒಪ್ಪಂದವು ಭಾರತಕ್ಕೆ ಮಹತ್ವದ್ದಾಗಿದೆ.

ಭಾರತವು ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲ ಖರೀದಿದಾರ ರಾಷ್ಟ್ರವಾಗಿದೆ. ಭಾರತಕ್ಕೆ ಅಗತ್ಯವಿರುವ ಕಚ್ಚಾ ತೈಲದ ಪೈಕಿ 85% ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ, ದೇಶದ ತೈಲ ವ್ಯಾಪಾರದಲ್ಲಿ ಯಾವುದೇ ಅಡೆತಡೆ ಉಂಟಾದರೆ, ಅದು ತೈಲದ ಖರೀದಿ ಮೇಲೆ ಮಾತ್ರವಲ್ಲದೆ, ವಿದೇಶಿ ವಿನಿಮಯ ಮತ್ತು ರೂಪಾಯಿ ಮೌಲ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಭಾರತ ಇಂತಹ ಪ್ರತಿಕೂಲ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಚಾಬಹಾರ್‌ ಒಪ್ಪಂದ ನೆರವಾಗುತ್ತದೆ.

“ಇಸ್ರೇಲ್-ಹಮಾಸ್ ಯುದ್ಧ ಮತ್ತು ಕೆಂಪು ಸಮುದ್ರದಲ್ಲಿ ಹೌತಿ ಬಂಡುಕೋರರ ದಾಳಿಯಿಂದ ಪಶ್ಚಿಮ ಏಷ್ಯಾದ ಆರ್ಥಿಕ ಪರಿಸ್ಥಿತಿ ಅನಿಶ್ಚಿತತೆಯಲ್ಲಿದೆ. ಈ ಸಮಯದಲ್ಲಿ, ಚಾಬಹಾರ್ ಬಂದರು ಭಾರತದ ತೈಲ ವ್ಯಾಪಾರಕ್ಕೆ ಅತ್ಯುತ್ತಮ ಸುರಕ್ಷಿತ ವಹಿವಾಟಿಗೆ ಸಹಾಯವಾಗುತ್ತದೆ” ಎಂದು ಹೇಳಲಾಗಿದೆ.

“ಚಾಬಹಾರ್ ಬಂದರಿನ ಮೇಲೆ ಹಿಡಿತ ಸಾಧಿಸಿದ ನಂತರ, ಭಾರತವು 7,200-ಕಿಮೀ ಉದ್ದದ ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (NSTC) ಮೇಲೆ ಗಮನ ಹರಿಸಬೇಕಾಗಿದೆ. ಈ ಕಾರಿಡಾರ್ – ರಷ್ಯಾದ ಬಾಲ್ಟಿಕ್‌ ಮತ್ತು ಉತ್ತರದ ಬಂದರುಗಳಿಂದ ಭಾರತದ ಪಶ್ಚಿಮ ಬಂದರುಗಳ ನಡುವೆ ಸಂಪರ್ಕ ಸಾಧಿಸುವ ಉದ್ದೇಶವನ್ನು ಹೊಂದಿದೆ. ಈ ಕಾರಿಡಾರ್‌ ಯೋಜನೆಯನ್ನು 2000ನೇ ವರ್ಷದಲ್ಲಿ ರೂಪಿಸಲಾಗಿತ್ತು. ಇದು, ಚಾಬಹಾರ್‌ ಮೂಲಕ ಇರಾನ್‌ನಿಂದ ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ ಹಾದು ರಷ್ಯಾದ ಉತ್ತರ ಭಾಗದ ಬಂದರುಗಳಿಗೆ ರಸ್ತೆ ಸಂಪರ್ಕ ಒದಗಿಸುತ್ತದೆ.

The Political Economics of the International North-South Transport Corridor
ರಷ್ಯಾ ಭಾರತ ರೂಪಿಸಿರುವ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್

ಎನ್‌ಎಸ್‌ಟಿಸಿ ಕಾರಿಡಾರ್‌ ಯೋಜನೆ 24 ವರ್ಷಗಳಿಂದ ಹಲವಾರು ಅಡೆತಡೆಗಳನ್ನು ಎದುರಿಸಿದೆ. ಅದರಲ್ಲಿ, ಈ ಹಿಂದೆ ಇರಾನ್‌ ಮೇಲೆ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಹೇರಿದ್ದ ನಿರ್ಬಂಧವೂ ಪ್ರಮುಖ ಕಾರಣ. ಈ ನಿರ್ಬಂಧದಿಂದಾಗಿ ಕಾರಿಡಾರ್‌ನ ಎಲ್ಲ ಕೆಲಸಗಳು ಸ್ಥಗಿತಗೊಂಡಿದ್ದವು.

ಭಾರತದಲ್ಲಿರುವ ಸರಕು ಸಾಗಣೆದಾರರ ಸಂಘಗಳ ಒಕ್ಕೂಟದ ಪ್ರಕಾರ, ಯುರೋಪ್ ಮತ್ತು ಏಷ್ಯಾವನ್ನು ಸಂಪರ್ಕಿಸುವ ಸಾಂಪ್ರದಾಯಿಕ ಸೂಯೆಜ್ ಕಾಲುವೆ ಮಾರ್ಗಕ್ಕಿಂತ ಈ ಕಾರಿಡಾರ್‌ ಅತ್ಯಂತ ಉಪಯುಕ್ತವಾಗಿದೆ. ಸೂಯೆಜ್‌ ಕಾಲುವೆಗೆ ಹೋಲಿಸಿದರೆ, ಈ ಕಾರಿಡಾರ್‌ನಿಂದ 40%ರಷ್ಟು ಕಡಿಮೆ ದೂರ ಮತ್ತು 30% ಅಗ್ಗವಾಗಿದ್ದು, ಎಲ್ಲ ರಫ್ತು-ಆಮದುದಾರರಿಗೆ ಆರ್ಥಿಕ ವರದಾನವಾಗಲಿದೆ.

ಚಾಬಹಾರ್‌ ಒಪ್ಪಂದದ ಕಾರಣ ಭಾರತದ ಮೇಲೆ ಅಮೆರಿಕಾ ನಿರ್ಬಂಧ ಹೇರುತ್ತದೆಯೇ?     

ಸೋಮವಾರ, ಭಾರತ-ಇರಾನ್ ತಮ್ಮ ಒಪ್ಪಂದವನ್ನು ಘೋಷಿಸಿದ ಕೆಲವೇ ಗಂಟೆಗಳಲ್ಲಿ, ಇರಾನ್‌ನೊಂದಿಗೆ ಆರ್ಥಿಕ ಮಾತುಕತೆ ನಡೆಸುವ ಯಾವುದೇ ದೇಶವು ನಿರ್ಬಂಧಗಳಿಗೆ ಒಳಪಡಬಹುದು ಎಂದು ಅಮೆರಿಕಾ ಎಚ್ಚರಿಕೆ ನೀಡಿದೆ.

ಚಾಬಹಾರ್ ಬಂದರಿನ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕಾ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ವಕ್ತಾರ ವೇದಾಂತ್ ಪಟೇಲ್, ”ಭಾರತವು ತನ್ನದೇ ಆದ ವಿದೇಶಾಂಗ ನೀತಿಗಳನ್ನು ಅನುಸರಿಸಲು, ಗುರಿಗಳನ್ನು ಸಾಧಿಸಲು ಸ್ವತಂತ್ರವಾಗಿದೆ ಎಂದಿದ್ದಾರೆ. ಆದರೂ, ಅವರು ನಿರ್ಬಂಧದ ಸಾಧ್ಯತೆಗಳನ್ನು ತಳ್ಳಿಹಾಕಿಲ್ಲ. ನಿರ್ಬಂಧದ ಅಪಾಯಗಳ ಬಗ್ಗೆಯೂ ನಮಗೆ ತಿಳಿದಿರಬೇಕು ಎಂದಿದ್ದಾರೆ.

ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಗಳ ಕಾರಣ, ರಷ್ಯಾ ಮತ್ತು ಇರಾನ್‌ ವಿರುದ್ಧ ಅಮೆರಿಕಾ ಈಗಾಗಲೇ CAATSA (ನಿರ್ಬಂಧಗಳ ಕಾಯ್ದೆ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವುದು) ಅಡಿಯಲ್ಲಿ ದುರ್ಬಲ ಆರ್ಥಿಕ ನಿರ್ಬಂಧಗಳನ್ನು ಹೇರಲಾಗಿದೆ. ಇಂತಹ ಸಮಯದಲ್ಲಿ ಭಾರತ-ಇರಾನ್‌ ನಡುವೆ ಒಪ್ಪಂದವಾಗಿದೆ.

ಆದಾಗ್ಯೂ, ಭಾರತ ಮತ್ತು ಅಮೆರಿಕ ಕಾರ್ಯತಂತ್ರವನ್ನು ಗಮನಿಸಿದಾಗ, ಭಾರತ-ಇರಾನ್ ಒಪ್ಪಂದದ ಮೇಲಿನ ನಿರ್ಬಂಧಗಳ ಬಗ್ಗೆ ಅಮೆರಿಕಾ ಮೌನಕ್ಕೆ ಜಾರಬಹುದು ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

“ಇರಾನ್‌ನೊಂದಿಗಿನ ಒಪ್ಪಂದದ ಕಾರಣ ಭಾರತವನ್ನು ನಿರ್ಬಂಧಿಸುವ ಧೈರ್ಯವನ್ನು ಅಮೆರಿಕ ಮಾಡುತ್ತದೆ ಎಂದು ನಾನು ನಂಬುವುದಿಲ್ಲ. ಎರಡು ದೇಶಗಳ ನಡುವಿನ ಭೌಗೋಳಿಕ ಸಾಮೀಪ್ಯದಿಂದಾಗಿ ನಾವು ಇರಾನ್‌ನೊಂದಿಗೆ ವ್ಯಾಪಾರ ಮಾಡುವುದು ಅವಶ್ಯಕ ಎಂಬುದನ್ನು ಭಾರತವು ಅಮೆರಿಕನ್ನರಿಗೆ ತಿಳಿಸಬೇಕು. ಇರಾನ್‌ ಜೊತೆ ಭಾರತವು ಮಿಲಿಟರಿ ಒಪ್ಪಂದಗಳಿಗೆ ಸಹಿ ಹಾಕಿಲ್ಲ. ಹಾಗಾಗಿ, ಅಮೆರಿಕ ಆತಂಕಗೊಳ್ಳಲು ಯಾವುದೇ ಕಾರಣಗಳಿಲ್ಲ” ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಕಮಲ್ ದಾವರ್ ಹೇಳಿದ್ದಾರೆ.

ಇರಾನ್‌, ರಷ್ಯಾ ಹಾಗೂ ಮಧ್ಯ ಏಷ್ಯಾದ ರಾಷ್ಟ್ರಗಳಿಂದಿಗೆ ಸರಕುಗಳ ರಫ್ತು-ಆಮದು ವ್ಯವಹಾರದ ದೃಷ್ಟಿಯಿಂದ ಚಾಬಹಾರ್‌ ಬಂದರು ಭಾರತಕ್ಕೆ ಮಹತ್ವದ್ದಾಗಿದೆ. ಆದಾಗ್ಯೂ, ಈ ಒಪ್ಪಂದದ ವಿಚಾರದಲ್ಲಿ ಅಮೆರಿಕದ ನಡೆ ಏನಾಗದಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ರೀತಿಯ ಅಭಿಪ್ರಾಯ – ಚರ್ಚೆಗಳು ನಡೆಯಲಿವೆ ಎಂಬುದನ್ನು ಮುಂದಿನ ದಿನಗಳಲ್ಲಿ ಗಮನಿಸಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ದೊಡ್ಡ ವ್ಯವಹಾರ ಹೌಧು , ದೊಡ್ಡ ಅಂತಾರಾಷ್ಟ್ರೀಯ ದಿಟ್ಟತನವು ಹೌದು
    ದೊಡ್ಡಣ್ಣ ಅನ್ನಿಸಿಕೊಳ್ಳುವ ಅಮೇರಿಕಾ ಜೊತೆಗೆ ಸವಾಲಿನ ಸೆಡ್ಡು ಹೌದು !
    ನಿರೀಕ್ಷಿತ ಮಟ್ಟದಲ್ಲಿ ತ್ವರಿತವಾಗಿ ಕೆಲಸವಾದರೆ ಪಾಕಿಸ್ತಾನ ಪಿ ಓ ಕೆ ಭಾರತ
    ದ್ವಂದ್ವಗಳ ನಡುವೆ ,ಬಂಗಾಳದೇಶ ಹುಟ್ಟಿದ ರೀತಿಯಲ್ಲಿ ,ಅನಿವಾರ್ಯ ಪರಿಸ್ಥಿತಿ
    ವಾಯು ಬಾರದಂತೆ ನಿರ್ಮಾಣ ಆಗುವ ಮುಂಚೆ ಎಲ್ಲ ರೀತಿಯಲ್ಲೂ ಈ ಯೋಜನೆಯನ್ನು
    ಹತೋಟಿಗೆ ತಂದು ನಿವಹಿಸಿದರೆ , ! ಒಳ್ಳೆಯದು ASSIA ಗೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ’ ಎಂದ ಬಿಜೆಪಿ ನಾಯಕ ಅನುರಾಗ್ ಠಾಕೂರ್; ಟ್ರೋಲ್‌ಗೆ ಗುರಿ

"ಭಗವಾನ್ ಹನುಮಂತ ಮೊದಲ ಬಾಹ್ಯಾಕಾಶ ಯಾತ್ರಿಕ" ಎಂದು ಹೇಳುವ ಮೂಲಕ ಬಿಜೆಪಿ...

ಅಂಗವಿಕಲರ ಕುರಿತು ಹಾಸ್ಯ: ಕ್ಷಮೆಯಾಚಿಸಲು ಕಾಮಿಡಿಯನ್‌ಗಳಿಗೆ ಸುಪ್ರೀಂ ಸೂಚನೆ

ನೀವು ಮಾತುಗಳನ್ನು ವಾಣಿಜ್ಯೀಕರಣಗೊಳಿಸುವಾಗ ಯಾವುದೇ ಒಂದು ಸಮುದಾಯದ ಭಾವನೆಗಳನ್ನು ನೋಯಿಸಲು ಸಾಧ್ಯವಿಲ್ಲ...

ಲೈಂಗಿಕ ಕಿರುಕುಳ ಆರೋಪ; ಕೇರಳದ ಕಾಂಗ್ರೆಸ್‌ ಶಾಸಕ ಪಕ್ಷದಿಂದ ಅಮಾನತು

ಲೈಂಗಿಕ ಕಿರುಕುಳದ ಆರೋಪಗಳ ತೀವ್ರ ಚರ್ಚೆಯ ನಡುವೆ ಕಾಂಗ್ರೆಸ್ ಶಾಸಕ ರಾಹುಲ್...

ಸಮರ್ಪಕ ಮಾಹಿತಿ ನೀಡದೆಯೇ ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಮಾರಾಟ: ಗ್ರಾಹಕ ಹಕ್ಕು ಉಲ್ಲಂಘನೆ

ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಎಥೆನಾಲ್‌...

Download Eedina App Android / iOS

X