ಬಜೆಟ್‌ನಲ್ಲಿ ಮುಸ್ಲಿಮರಿಗೆ ಕಾಂಗ್ರೆಸ್‌ನವರು ಶೇ.15 ರಷ್ಟು ಹಣ ನೀಡಲು ಬಯಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಮೂರ್ಖತನದಿಂದ ಕೂಡಿದೆ ಎಂದು ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಜೆಟ್ ಯಾವುದೇ ಜಾತಿ ಅಥವಾ ಧರ್ಮದ ಆಧಾರದ ಮೇಲೆ ಒಳಗೊಂಡಿರುವುದಿಲ್ಲ. ಬಜೆಟ್‌ಅನ್ನು ಯಾವುದೇ ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ಮಂಜೂರು ಮಾಡಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಮೋದಿ ಅವರು ಶೇ.1 ರಷ್ಟು ನಿಜವನ್ನು ಹೇಳಿಲ್ಲ. ಅವರು ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಹೇಳಿದರು.
ಮೋದಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೃಷಿಯ ಅಭಿವೃದ್ಧಿಯ ಬಗ್ಗೆ ಆಸಕ್ತಿ ಹೊಂದಿದ್ದರು. ಆದರೆ ಈಗ ಕೇವಲ ರಾಜಕೀಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ಜನರು ಬದಲಾವಣೆ ಬಯಸಿದ್ದಾರೆ. ಅದು ಲೋಕಸಭಾ ಚುನಾವಣೆಯ ಬಳಿಕ ತಿಳಿಯಲಿದೆ ಎಂದು ಶರದ್ ಪವಾರ್ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
ಇತ್ತೀಚಿಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಹಿಂದಿನ ಕಾಂಗ್ರೆಸ್ ಆಡಳಿತದ ಬಜೆಟ್‌ನಲ್ಲಿ ಶೇ.15 ರಷ್ಟು ಹಣವನ್ನು ಮುಸ್ಲಿಮರಿಗೆ ನೀಡಲು ಬಯಸಿದ್ದರು. ಆದರೆ ನಾವು ಧರ್ಮದ ಆಧಾರದ ಮೇಲೆ ಬಜೆಟ್‌ನ ಹಣವನ್ನು ಮೀಸಲಿಡುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದರು.
ಮೇ. 20 ರಂದು ಮಹಾರಾಷ್ಟ್ರದ 13 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೋದಿ ಇಲ್ಲಿನ ಕೆಲವು ಪ್ರದೇಶಗಳಲ್ಲಿ ಪ್ರಚಾರ ಹಮ್ಮಿಕೊಳ್ಳಲಿದ್ದಾರೆ.
ಮಹಾರಾಷ್ಟ್ರದಲ್ಲಿ ಒಟ್ಟು 48 ಲೋಕಸಭಾ ಕ್ಷೇತ್ರಗಳಿದ್ದು, 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ 4 ಹಂತಗಳಲ್ಲಿ 35 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ.20 ರಂದು ಕೊನೆಯ ಹಂತದ ಚುನಾವಣೆಯಾಗಿದೆ.
