ರಾಜ್ಯ ರಾಜಧಾನಿ ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮೇ 24ರಿಂದ ಜೂನ್ 10ರವರೆಗೂ ಮಾವು ಮತ್ತು ಹಲಸಿನ ಮೇಳ ನಡೆಯಲಿದೆ. ಮೇಳ ಮಾಡುವುದಕ್ಕೆ ಮಾವು ಅಭಿವೃದ್ಧಿ ನಿಗಮ ಹಾಗೂ ಲಾಲ್‌ಬಾಗ್ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
ಮೇಳದಲ್ಲಿ ಸುಮಾರು 60 ಮಳಿಗೆಗಳು ಇರಲಿವೆ. ಕೊಪ್ಪಳದ ಕೇಸರ್, ಚಿತ್ರದುರ್ಗ ಮತ್ತು ತುಮಕೂರಿನ ಬಾದಾಮಿ, ರಸಪುರಿ, ಬೆನಿಶಾ, ಮಲಗೋವಾ, ಇಮಾಮ್ಪಸಂದ್ ನಂತಹ ಪ್ರಸಿದ್ಧ ತಳಿಗಳೂ ಸೇರಿದಂತೆ ಸೇಂಧೂರ, ನೀಲಂ, ಮಲ್ಲಿಕಾ, ಆಮ್ರಪಾಲಿ, ಬಂಗನಪಲ್ಲಿ, ತೋತಾಪುರಿ, ಸಕ್ಕರೆಗುತ್ತಿ ತಳಿಯ ಹಣ್ಣುಗಳು ಇರಲಿವೆ.
ಈ ಮಾವಿನ ಮೇಳಕ್ಕೆ ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಸೇರಿದಂತೆ ನಾನಾ ಜಿಲ್ಲೆಗಳ ಮಾವು ಬೆಳೆಗಾರರು ಮೇಳದಲ್ಲಿ ಭಾಗವಹಿಸಲಿದ್ದಾರೆ. ಮೇಳದಲ್ಲಿ ವಾಣಿಜ್ಯ, ಪಾರಂಪರಿಕ ಮಾವಿನ ತಳಿಗಳ ಜತೆಗೆ ಉಪ್ಪಿನಕಾಯಿಗೆ ಬಳಸುವ ಆಮ್ಲೆಟ್, ಮಿಡಿ ಮಾವು ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಇರಲಿದೆ.
ಹಣ್ಣುಗಳ ರಾಜ ಮಾವಿನ ಹಣ್ಣು ಮಾರುಕಟ್ಟೆಗಳಲ್ಲಿ ಸದ್ಯ ದುಬಾರಿಯಾಗಿದೆ. ನೀರಿಲ್ಲದೇ, ಬಿಸಿಲಿನ ಝಳಕ್ಕೆ ಈ ಬಾರಿ ಮಾವಿನ ಇಳುವರಿ ಕುಂಠಿತಗೊಂಡಿದೆ. ಹೀಗಾಗಿ, ದರ ಕೂಡ ದುಬಾರಿಯಾಗಿದೆ. ಆದರೂ ಬೆಂಗಳೂರಿನ ಜನ ಖರೀದಿಸುತ್ತಿದ್ದಾರೆ. ಪ್ರತಿವರ್ಷ ಮಾವಿನ ಸೀಸನ್ನಲ್ಲಿ ರಾಜ್ಯದಲ್ಲಿ ಸುಮಾರು 15 ಲಕ್ಷ ಟನ್ ಮಾವು ಉತ್ಪಾದನೆಯಾಗಬೇಕಿತ್ತು. ಆದರೆ, ಮಳೆಯಿಲ್ಲದ ಪರಿಣಾಮ ಹಾಗೂ ಅಧಿಕ ತಾಪಮಾನದಿಂದಾಗಿ ಕೇವಲ 4-5 ಲಕ್ಷ ಟನ್ನಷ್ಟು ಮಾವಿನ ಫಸಲು ಕಡಿಮೆ ಬಂದಿದೆ. ಹೀಗಾಗಿ, ಈ ಬಾರಿ ಮೇಳದಲ್ಲಿ ದರ ಕೊಂಚ ಹೆಚ್ಚು ಇರಲಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿಡಿಯೋ ಕಾಲ್ ಮಾಡಿ ಪತ್ನಿಗೆ ಹೆದರಿಸಲು ಹೋಗಿ ಪತಿ ಸಾವು
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರದ ಲಾಲ್ಬಾಗ್ನಲ್ಲಿ ಮಾವಿನ ಮೇಳ ನಡೆಯಲಿದ್ದು, ಈಗಾಗಲೇ ಭರ್ಜರಿ ಸಿದ್ಧತೆ ಆರಂಭಗೊಂಡಿದೆ. ಲಾಲ್ಬಾಗ್ನ ಮಾವು ಮತ್ತು ಹಲಸಿನ ಮೇಳದಲ್ಲಿ ಜಿಕೆವಿಕೆ, ಐಐಎಚ್ಆರ್ ಸೇರಿದಂತೆ ಇತರ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಹಲಸಿನ ತಳಿಗಳು, ರೈತರು ಬೆಳೆದ ನಾನಾ ತಳಿಯ ಹಲಸಿನ ಹಣ್ಣನ್ನು ಮಾರಾಟ ಮಾಡಲಾಗುತ್ತದೆ.
“ಮಾವು ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ರಸಪುರಿ ಮತ್ತು ತೋತಾಪುರಿಯಂತಹ ತಳಿಯ ಹಣ್ಣುಗಳನ್ನು ಮೇಳಕ್ಕೆ ತರಲಿದ್ದಾರೆ” ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಸಿ.ಜಿ.ನಾಗರಾಜ್ ತಿಳಿಸಿದರು.