- ರಾಹುಲ್ ಗಾಂಧಿಯಿಂದ ಪೌರ ಕಾರ್ಮಿಕರ ಸಮಸ್ಯೆಗಳ ಮಾಹಿತಿ ಸಂಗ್ರಹ
- ಬೆಂಗಳೂರಿನಲ್ಲಿ ಪೌರ ಕಾರ್ಮಿಕರೊಂದಿಗೆ ಸುರ್ಜೇವಾಲ ಸಂವಾದ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೌರ ಕಾರ್ಮಿಕರನ್ನು ಕಾಯಂಗೊಳಿಸುತ್ತೇವೆ ಎಂದು ಎಐಸಿಸಿ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭರವಸೆ ನೀಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಲ್ಲೇ ರಣದೀಪ್ ಸುರ್ಜೇವಾಲ ಪೌರ ಕಾರ್ಮಿಕರಿಗೆ ಮಹತ್ವದ ಭರವಸೆ ನೀಡಿದ್ದಾರೆ. ಸುಮಾರು 25 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಾಗಿ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪೌರ ಕಾರ್ಮಿಕರ ಜೊತೆಗೆ ಸಂವಾದ ನಡೆಸಿರುವ ಸುರ್ಜೇವಾಲ, “ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಡುವವವರು ಇಂದು ಸಂಕಷ್ಟದಲ್ಲಿದ್ದಾರೆ. ಅವರಿಗೆ ಸಹಕಾರ ಆಗುವಂತಹ ಮತ್ತು ಬದುಕು ಸುಧಾರಿಸುವ ಅಗತ್ಯ ಕ್ರಮಗಳನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತದೆ” ಎಂದು ಹೇಳಿದ್ದಾರೆ.
“ಪೌರ ಕಾರ್ಮಿಕರಿಗೆ ಸರಿಯಾದ ವೇತನ ನೀಡುತ್ತೇವೆ. ಪ್ರತಿ ನೌಕರರಿಗೂ ಮೂರರಿಂದ ಹತ್ತು ಲಕ್ಷ ರೂಪಾಯಿಯ ವಿಮೆ ಮಾಡಿಸುತ್ತೇವೆ. ಪೌರ ಕಾರ್ಮಿಕರ ವಸತಿ ಸೌಲಭ್ಯ ಸೇರಿದಂತೆ ಇತರೆ ಮೂಲ ಸೌಕರ್ಯಗಳನ್ನು ಒದಗಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಾನು ಸಿಎಂ ಕುರ್ಚಿಯ ಆಕಾಂಕ್ಷಿಯಲ್ಲ : ಮಲ್ಲಿಕಾರ್ಜುನ ಖರ್ಗೆ
“ಕಳೆದ ಬಾರಿ ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಪೌರ ಕಾರ್ಮಿಕರ ಕನಿಷ್ಠ ವೇತನವನ್ನು ₹6 ಸಾವಿರದಿಂದ ₹21 ಸಾವಿರವರೆಗೆ ಹೆಚ್ಚಿಸಿದೆ” ಎಂದು ಹೇಳಿದ್ದಾರೆ.
“ಪೌರ ಕಾರ್ಮಿಕರ ಸಮಸ್ಯೆಗಳ ಕುರಿತು ರಾಹುಲ್ ಗಾಂಧಿ ಮಾಹಿತಿ ತೆಗೆದುಕೊಂಡಿದ್ದಾರೆ. ಈ ವರ್ಗದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು ಸಲಹೆ ನೀಡಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿಯೇ ಪೌರ ಕಾರ್ಮಿಕರ ಅನೇಕ ಬೇಡಿಕೆಗಳನ್ನು ಈಡೇರಿಸುತ್ತೇವೆ” ಎಂದಿದ್ದಾರೆ.