2024 25ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಪ್ರವೇಶದ ಸಂದರ್ಭದಲ್ಲಿ ಟ್ಯೂಷನ್ ಶುಲ್ಕವನ್ನು ಹೆಚ್ಚಿಸಿ ಡೊನೇಷನ್ ವಸೂಲಿ ಮಾಡಲು ಮುಂದಾಗಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತೀವ್ರವಾಗಿ ಖಂಡಿಸಿದೆ.
ಈ ಕುರಿತು ಎಸ್‌ಎಫ್‌ಐ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಅರುಣ ಕೋಡಗೆ ನೇತ್ರತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಜಿಲ್ಲೆಯಲ್ಲಿ ಬಹುತೇಕ ಎಲ್ಲ ಖಾಸಗಿ ಶಾಲೆಗಳು ಈಗಾಗಲೇ ಬೇಬಿ ಕ್ಲಾಸಿನಿಂದ ಎಲ್ಲ ತರಗತಿಯ ಪ್ರವೇಶಾತಿಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳ ಪಾಲಕರಿಂದ ಮನಬಂದಂತೆ ಡೊನೇಷನ್ ವಸೂಲಿಗೆ ಮುಂದಾಗಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾಗಿದ್ದರೂ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೌನವಾಗಿದ್ದಾರೆ” ಎಂದು ಆರೋಪಿಸಿದರು.
“ಸರ್ಕಾರ ಇನ್ನು ಈ ವರ್ಷದ ಶೈಕ್ಷಣಿಕ ಪ್ರವೇಶಾತಿಯನ್ನು ಪ್ರಾರಂಭ ಮಾಡದಿದ್ದರೂ ಖಾಸಗಿ ಶಾಲೆಗಳು ತುದಿಗಾಲಲ್ಲಿ ನಿಂತು ಪ್ರವೇಶಾತಿ ಶುಲ್ಕ ಹಾಗೂ ಬಟ್ಟೆ, ಶೂ, ಸಾಕ್ಸ್, ನೋಟ್ ಬುಕ್ಸ್‌ಗಳನ್ನು ಶಾಲೆಗಳಲ್ಲಿ ಮಾರಾಟ ಮಾಡುತ್ತಿರುವುದು ಕಾನೂನುಬಾಹಿರ. ಇಂತಹ ಶಾಲೆಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಶೈಕ್ಷಣಿಕ ವರ್ಷದ ವಾರ್ಷಿಕ ಶುಲ್ಕದಲ್ಲಿ ಕೇವಲ ಬೋಧನಾ ಶುಲ್ಕ ಮಾತ್ರ ವಸೂಲಿ ಮಾಡಬೇಕು. ಯಾವುದೇ ಕಾರಣಕ್ಕೂ ಆನ್‌ಲೈನ್ ಶಿಕ್ಷಣ ನೀಡುವುದು ಸರಿಯಾದ ಕ್ರಮವಲ್ಲ” ಎಂದು ಒತ್ತಾಯಿಸಿದರು.
ಡೊನೇಶನ್ ಹಾವಳಿ ನಿಯಂತ್ರಣ ಮಾಡಬೇಕು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ರೆಗುಲೇಟಿಂಗ್ ಪ್ರಾಧಿಕಾರ ರಚಿಸಿ, ಸರ್ಕಾರದ ನಿಯಮ ಗಾಳಿಗೆ ತೂರಿದ ಶಾಲೆಗಳ ಮಾನ್ಯತೆ ರದ್ದುಪಡಿಸಬೇಕು,.ಅನಧಿಕೃತ ಶಾಲೆಗಳ ಮಾನ್ಯತೆ ಇಲ್ಲದೆ ಐಸಿಐಸಿ/ ಸಿಬಿಎಸ್ಸಿ ನಡೆಸುವ ಶಾಲೆಗಳ ಮಾನ್ಯತೆ ರದ್ದುಗೊಳಿಸಬೇಕು. ಅಧಿಕೃತ ಶಾಲೆಗಳ ಕನ್ನಡ ಮಾಧ್ಯಮ/ಇಂಗ್ಲಿಷ್ ಮಾಧ್ಯಮ ಶಾಲೆಗಳ ಪಟ್ಟಿ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಪ್ರಮುಖರಾದ ಅಮರ ಗಾದಗಿ, ರೋಷನ್ ಮಲ್ಕಾಪೂರೆ ಇದ್ದರು.