ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ನೀತಿಗಳಿಂದ ಕನ್ನಡ ಭಾಷೆ ನಾಶವಾಗುತ್ತಿದೆ. ಒಂದೆಡೆ ಸಾವಿರಾರು ವಿದ್ಯಾರ್ಥಿಗಳು ಪ್ರಥಮ ಭಾಷೆ ಕನ್ನಡದಲ್ಲಿಯೇ ಅನುತ್ತೀರ್ಣರಾಗಿದ್ದಾರೆ. ಕನ್ನಡ ಓದಲು ಮತ್ತು ಬರೆಯಲು ಬರುತ್ತಿಲ್ಲ. ಮತ್ತೊಂದೆಡೆ ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಹಿಂದಿಯೇತರ ಭಾಷಿಗರನ್ನು ಹೊರಗಿಡುವ ವ್ಯವಸ್ಥಿತ ಹುನ್ನಾರ ಚಾಲ್ತಿಯಲ್ಲಿದೆ ಎಂದು ಡಾ. ರಮೇಶ್ ಬೆಳ್ಳಮ್ಕೊಂಡ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಮೇಶ್ ಬೆಳ್ಳಮ್ಕೊಂಡ, “ಕರ್ನಾಟಕದಲ್ಲಿ ಕನ್ನಡ ಉಳಿಯಬೇಕೆಂದರೆ, ನ್ಯಾಯಯುತವಾದ ದ್ವಿಭಾಷಾ ನೀತಿ ಜಾರಿಯಾಗಬೇಕು. ಕರ್ನಾಟಕದೊಳಗೆ ನಮ್ಮ ಪ್ರಾದೇಶಿಕ ಭಾಷೆ ಕನ್ನಡ ಹಾಗೂ ಭಾರತದ ಒಳಗೆ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂವಹನ ನಡೆಸಲು ಇಂಗ್ಲಿಷ್ ಭಾಷೆ; ಇವೆರಡೂ ಶಿಕ್ಷಣ, ಆಡಳಿತ ಮತ್ತು ಸಾಮಾನ್ಯ ಸಂವಹನದಲ್ಲಿ ಕಡ್ಡಾಯ ಭಾಷೆಗಳಾಗಬೇಕು. ಕನ್ನಡ ಮಾಧ್ಯಮ ಶಾಲೆಗಳ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಣಾಯಕ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ಕನ್ನಡ ಮಾಧ್ಯಮದಲ್ಲಿ ಓದಿದ ಸಾವಿರಾರು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲೇ ಅನುತ್ತೀರ್ಣಗೊಂಡಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಈ ಬಾರಿಯ ಕನ್ನಡ ಮಾಧ್ಯಮ ಶಾಲೆಗಳ ಫಲಿತಾಂಶ ಕೇವಲ ಶೇ.52 ದಾಖಲಾಗಿದೆ. ಶೇ.48 ರಷ್ಟು ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿದ್ದಾರೆ. ಕೊಪ್ಪಳ ಜಿಲ್ಲೆಯೊಂದರಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ಸುಮಾರು 22 ಸಾವಿರ ವಿದ್ಯಾರ್ಥಿಗಳ ಪೈಕಿ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿಲ್ಲ” ಎಂದು ತಿಳಿಸಿದ್ದಾರೆ.
“ಇದು ಕನ್ನಡ ಶಾಲೆಗಳ ಗುಣಮಟ್ಟ, ಶಿಕ್ಷಕರ ಬೋಧನಾ ಗುಣಮಟ್ಟಗಳ ಬಗ್ಗೆ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ. ಕನ್ನಡ ಶಾಲೆಗಳ ಅಗತ್ಯತೆ ಬಗ್ಗೆ ಪೋಷಕರು ಪ್ರಶ್ನಿಸುವಂತಾಗಿದೆ. ಸಮವಸ್ತ್ರ, ಶೂಗಳು, ಪುಸ್ತಕಗಳು, ಬಿಸಿಯೂಟ, ಮೊಟ್ಟೆ, ಚಿಕ್ಕಿ ಹೀಗೆ ಸಾಕಷ್ಟು ಉಚಿತ ಕೊಡುಗೆಗಳನ್ನು ರಾಜ್ಯ ಸರ್ಕಾರ ನೀಡುತ್ತಲೇ ಬಂದಿದೆ. ಆದರೆ, ಉತ್ತಮ ಗುಣಮಟ್ಟದ ಶಿಕ್ಷಣವನ್ನೇ ನೀಡುತ್ತಿಲ್ಲ ಎಂದಾದರೆ ಏನು ಕೊಟ್ಟು ಏನು ಬಂತು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಒಂದೆಡೆ ಕನ್ನಡ ಮಾಧ್ಯಮ ಶಾಲೆಗಳಿಂದ ಕಳಪೆ ಶಿಕ್ಷಣ, ಮತ್ತೊಂದೆಡೆ ಕೇಂದ್ರ ಸರ್ಕಾರದಿಂದ ಹಿಂದಿ ಹೇರಿಕೆ. ಸಾಲದ್ದಕ್ಕೆ ಸಂಸ್ಕೃತವನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಇದರಿಂದ ಕನ್ನಡದ ಕಗ್ಗೋಲೆಯಾಗುತ್ತಿದೆ. ಕನ್ನಡಿಗರನ್ನು ಹಿಂದಿಗರ ಗುಲಾಮರನ್ನಾಗಿಸಲಾಗುತ್ತಿದೆ. ಹಿಂದಿಯನ್ನು ಹೇರುವ ಮೂಲಕ ಕನ್ನಡವನ್ನು ಎರಡನೇ ದರ್ಜೆಯ ಭಾಷೆಯಾಗಿ ಪರಿಗಣಿಸಲಾಗುತ್ತಿದೆ ಮತ್ತು ಭಾರತದಲ್ಲಿ ಕನ್ನಡಿಗರನ್ನು ಎರಡನೇ ದರ್ಜೆಯ ಭಾರತೀಯರಂತೆ ನೋಡಲಾಗುತ್ತಿದೆ. ಭಾಷಾ ನೀತಿಗಳು ಮತ್ತು ಆಚರಣೆಗಳು ಹಿಂದಿ ಹೇರಿಕೆಯ ಪರವಾಗಿವೆ” ಎಂದಿದ್ದಾರೆ.
“ದೇಶದಲ್ಲಿ ಭಾಷಾ ಅಸಮಾನತೆ ಮತ್ತು ಭಾಷಾ ಅನ್ಯಾಯ ಅಸ್ತಿತ್ವದಲ್ಲಿದೆ. ದೇಶದ ಹಿಂದಿಯೇತರ ಜನಸಂಖ್ಯೆಯ ಮೇಲೆ ಹಿಂದಿಯನ್ನು ಹೇರಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ರಚಲಿತ ಆಚರಣೆಗಳು ಮತ್ತು ನೀತಿಗಳ ಪರಿಣಾಮವಾಗಿ ಕರ್ನಾಟಕ ಸೇರಿದಂತೆ ದೇಶದ ಇತರ ಅನೇಕ ರಾಜ್ಯಗಳಲ್ಲಿ ಭಾಷಾ ಅಸಮಾನತೆ ಅಸ್ತಿತ್ವದಲ್ಲಿದೆ. ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ಇತರೆ ಅವಕಾಶಗಳು ಹಿಂದಿಯವರಿಗೆ ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರಸ್ತುತ, ಬಹುಪಾಲು ಅಥವಾ ಸಂಪೂರ್ಣವಾಗಿ, ಯುಪಿಎಸ್ಸಿ ಪರೀಕ್ಷೆಗಳು, ಎಸ್ಎಸ್ಸಿ ಪರೀಕ್ಷೆಗಳು, ಬ್ಯಾಂಕ್ ಅಧಿಕಾರಿಗಳ ಪರೀಕ್ಷೆಗಳು, ರೈಲ್ವೆ ಪರೀಕ್ಷೆಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳ ಪರೀಕ್ಷೆ ಸೇರಿದಂತೆ ಮುಂತಾದವುಗಳನ್ನು ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ನಡೆಸಲಾಗುತ್ತದೆ” ಎಂದು ತಿಳಿಸಿದ್ದಾರೆ.
“ಈ ನೀತಿ ಮತ್ತು ಅಭ್ಯಾಸವು ಹಿಂದಿಯೇತರ ಭಾರತೀಯರಿಗಿಂತ ಹಿಂದಿ ಭಾರತೀಯರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಬ್ಯಾಂಕಿಂಗ್ ವಿಶೇಷ ಭಾಷಾ ಅಧಿಕಾರಿಗಳ ನೇಮಕಾತಿಯನ್ನು ಘೋಷಿಸಿತ್ತು. ಅದಕ್ಕೆ ಬೇಕಾದ ವಿದ್ಯಾರ್ಹತೆ ಹಿಂದಿ ಅಥವಾ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಸೇರಿದಂತೆ ಬೇರೆ ಯಾವುದೇ ಭಾಷೆಗೆ ಅಲ್ಲಿ ಸ್ಥಾನವಿರಲಿಲ್ಲ. ಈ ಅಧಿಕಾರಿಗಳ ಕಾರ್ಯವೇನೆಂದರೆ ಕರ್ನಾಟಕ ಸೇರಿದಂತೆ ಭಾರತದ ಎಲ್ಲೆಡೆ ಬ್ಯಾಂಕ್ಗಳಲ್ಲಿ ಹಿಂದಿ ಬಳಕೆಯನ್ನು ಕ್ರಮೇಣ ಹೆಚ್ಚಿಸುವುದೇ ಆಗಿದೆ. ಇದು ಅತ್ಯಂತ ಅಪಾಯಕಾರಿಯಾಗಿದೆ” ಎಂದು ರಮೇಶ್ ಬೆಳ್ಳಮ್ಕೊಂಡ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅನುಮಾನಾಸ್ಪದ ರೀತಿಯಲ್ಲಿ ಮತ್ತೊಬ್ಬ ಯುವತಿಯ ಶವ ಪತ್ತೆ
ಈ ಸಂದರ್ಭ ಮಾತನಾಡಿದ ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ್ ರಾಥೋಡ್, “ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ. ಭಾರತೀಯ ಸಂವಿಧಾನವು ಯಾವುದೇ ರಾಷ್ಟ್ರ ಭಾಷೆಯನ್ನು ನಿರ್ದಿಷ್ಟ ಪಡಿಸಿಲ್ಲ. ಸಂವಿಧಾನದ ಶೆಡ್ಯೂಲ್ 8ರಲ್ಲಿ 22 ಭಾಷೆಗಳಿದ್ದು, ಅದರಲ್ಲಿ ಹಿಂದಿಯೂ ಒಂದಾಗಿದೆ. ಆದರೆ, 342 ರಿಂದ 351ನೇ ವಿಧಿಗಳಲ್ಲಿ ಸಂವಿಧಾನವು ಹಿಂದಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಬೇಕು ಎಂದು ಹೇಳುತ್ತದೆ. ಇದರರ್ಥ ಎಲ್ಲ ಪ್ರಮುಖ ಹಿಂದಿಯೇತರ ಭಾರತೀಯ ಭಾಷೆಗಳಿಗೆ ಕಡಿಮೆ ಪ್ರಾಮುಖ್ಯತೆಯನ್ನು ನೀಡಬೇಕು ಎಂದಾಗುತ್ತದೆ. ಇದು ನಮ್ಮ ಸಂವಿಧಾನದ ಮೂಲ ಆಶಯವಾದ ಸಮಾನತೆ ಮತ್ತು ನೈಸರ್ಗಿಕ ನ್ಯಾಯದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ. ಹಾಗಾಗಿ ಹಿಂದಿಗೆ ನೀಡಲಾದ ಈ ವಿಶೇಷ ಸ್ಥಾನವನ್ನು, ಸಂವಿಧಾನದಲ್ಲಿಯೇ ಇರುವ ಅವಕಾಶದಂತೆ, ಸಂವಿಧಾನದ ತಿದ್ದುಪಡಿಯೊಂದಿಗೆ ತೆಗೆದುಹಾಕಬೇಕಿದೆ. ಆಗ ಎಲ್ಲ ಭಾರತೀಯರಿಗೆ ಸಮಾನವಾದ ನ್ಯಾಯವನ್ನು ದೊರಕಿಸಿಕೊಡುವಂತಾಗುತ್ತದೆ” ಎಂದು ಆಗ್ರಹಿಸಿದರು.
“ಇಂಗ್ಲಿಷ್ ಅನ್ನು ದ್ವೇಷಿಸುವುದರಿಂದ ಹಿಂದಿ ಹೇರಿಕೆಯನ್ನು ಸುಗಮಗೊಳಿಸಿದಂತಾಗುತ್ತದೆ. ಹಿಂದಿಯೇತರ ಭಾರತೀಯರನ್ನು ಮತ್ತಷ್ಟು ಕಡೆಗಣಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ ಎಂಬುದನ್ನು ಕನ್ನಡಿಗರು ಮನಗಾಣಬೇಕು” ಎಂದು ಸಲಹೆ ನೀಡಿದ್ದಾರೆ.
ಈ ವೇಳೆ ಪಕ್ಷದ ಮುಖಂಡರಾದ ಶಶಿಧರ್ ಆರಾಧ್ಯ, ಸಶಾ ವಲಿ, ನವೀನ್ ಅಯ್ಯರ್ ಮತ್ತಿತರರು ಉಪಸ್ಥಿತರಿದ್ದರು.