ಮುಸ್ಲಿಂ ಜನಸಂಖ್ಯೆ ಏರುತ್ತಿದೆಯೇ? ಹಿಂದುಗಳಿಗೆ ಅಪಾಯವಿದೆಯೇ? PMEAC ವರದಿ ಎಷ್ಟು ಸತ್ಯ?

Date:

Advertisements

ಚುನಾವಣಾ ಪರ್ವ ಭಾರೀ ಪ್ರಚಾರದೊಂದಿಗೆ ನಡೆಯುತ್ತಿದೆ. ಮತದಾನ ಹಂತಗಳು ಮುಗಿದಂತೆಲ್ಲ ಆತಂಕಗೊಳ್ಳುತ್ತಿರುವ ಬಿಜೆಪಿ ವಿಭಜನೆಯ ದ್ವೇಷದ ಭಾಷಣವನ್ನು ಹೆಚ್ಚಿಸುತ್ತಿದೆ. ಬಿಜೆಪಿಯ ಮುಖ್ಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ವಿರುದ್ಧ ದ್ವೇಷ ಭಾಷಣ ಮಾಡುತ್ತಿದ್ದಾರೆ. ವಿಪಕ್ಷಗಳ ‘ಇಂಡಿಯಾ’ ಒಕ್ಕೂಟ ಅಧಿಕಾರಕ್ಕೆ ಬಂದರೆ, ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತದೆ. ಹಿಂದುಗಳ ಮಂಗಳಸೂತ್ರವನ್ನೂ ಕಸಿದುಕೊಂಡು ಮುಸ್ಲಿಮರಿಗೆ ನೀಡಲಾಗುತ್ತದೆ. ಭಾರತದ ಕ್ರಿಕೆಟ್‌ ತಂಡದಲ್ಲೂ ಮುಸ್ಲಿಮರೇ ತುಂಬಿಹೋಗುತ್ತಾರೆಂಬ ದ್ವೇಷಪೂರಿತ ಸುಳ್ಳಿನ ಸುರಿಮಳೆ ಸುರಿಸುತ್ತಿದ್ದಾರೆ. ಹಿಂದುಗಳು ಹೆಚ್ಚಿರುವ ಭಾರತದಲ್ಲಿ ಹಿಂದುಗಳೇ ಎರಡನೆ ದರ್ಜೆಯ ಪ್ರಜೆಗಳಾಗಿಬಿಡುತ್ತಾರೆ. ಎಲ್ಲ ಸವಲತ್ತುಗಳನ್ನು ಮುಸ್ಲಿಮರು ಕಸಿದುಕೊಳ್ಳುತ್ತಾರೆ ಎಂಬ ಸುಳ್ಳು ನಿರೂಪಣೆಯನ್ನ ಬಿಜೆಪಿ ರೂಪಿಸುತ್ತಿದೆ. ಹಿಂದುಗಳಲ್ಲಿ ಆತಂಕದ ಜೊತೆಗೆ ದ್ವೇಷವನ್ನು ಹರಡುತ್ತಿದೆ.

ಮೋದಿ ಅವರು ದ್ವೇಷಪೂರಿತ ಪ್ರಚಾರಕ್ಕೆ ಮತ್ತಷ್ಟು ಪುಷ್ಟಿಕೊಡಲು ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯು (PMEAC) 1950 ಮತ್ತು 2015ರ ನಡುವೆ ಹಿಂದೂಗಳ ಜನಸಂಖ್ಯೆಯ ಪಾಲು ಸುಮಾರು 8% ರಷ್ಟು ಕಡಿಮೆಯಾಗಿದೆ. ಆದರೆ, ಇದೇ ಅವಧಿಯಲ್ಲಿ ಮುಸ್ಲಿಂ ಜನರ ಪಾಲು 43%ಗೆ ಏರಿಕೆಯಾಗಿದೆ ಎಂದು ವರದಿ ನೀಡಿದೆ. 1950ರ ಜನಗಣತಿಯ ಪ್ರಕಾರ, ದೇಶದಲ್ಲಿ 84% ಹಿಂದುಗಳಿದ್ದರು. ಆದರೆ, ಇದು 2015ರ ವೇಳೆಗೆ 78%ಗೆ ಇಳಿದಿದೆ. ಆದರೆ, ಅದೇ ಅವಧಿಯಲ್ಲಿ, ಮುಸ್ಲಿಮರು, ಕ್ರಿಶ್ಚಿಯನ್, ಬೌದ್ಧರು ಮತ್ತು ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತರ ಪಾಲು ಹೆಚ್ಚಾಗಿದೆ. ಜೈನ ಮತ್ತು ಪಾರ್ಸಿಗಳ ಸಂಖ್ಯೆ ಮಾತ್ರವೇ ಕಡಿಮೆಯಾಗಿದೆ ಎಂದು ಆ ವರದಿ ವಿವರಿಸಿದೆ.

ಅಂದಹಾಗೆ, ಪಿಎಂಇಎಸಿ ನೀಡಿದ ವರದಿ ಎಷ್ಟು ವಸ್ತುನಿಷ್ಠವಾದುದು ಎಂಬುದು ಮುಖ್ಯ ಸಂಗತಿ. ಈ ಪಿಎಂಇಎಸಿ ಎಂದರೇನು ಅಂತ ಮೊದಲು ನೋಡುವ. ಈ ಮಂಡಳಿಯನ್ನು 2017ರಲ್ಲಿ ಸ್ಥಾಪಿಸಲಾಯಿತು. ಇದು, ಆರ್ಥಿಕ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಗೆ ಸಲಹೆ ನೀಡಲು ಸಂಶೋಧನೆಗಳನ್ನು ನಡೆಸುತ್ತದೆ. ಆದರೆ, ಇದರ ಸಂಶೋಧನೆಯೇ ವಿವಾದಾತ್ಮಕವಾಗಿದೆ. ಒಂದೆರಡು ವರ್ಷಗಳ ಹಿಂದೆ ಮಂಡಳಿಯ ಮುಖ್ಯಸ್ಥ ಬಿಬೆಕ್ ಡೆಬ್ರಾಯ್ ಹೇಳಿಕೆಯೇ ಅದಕ್ಕೆ ಸಾಕ್ಷಿ. ಅವರು, ”ಲಿಖಿತ ಸಂವಿಧಾನಗಳ ಜೀವಿತಾವಧಿಯು ಕೇವಲ 17 ವರ್ಷ ಮಾತ್ರ. ಪ್ರಸ್ತುತ ಭಾರತದ ಸಂವಿಧಾನವು ಹೆಚ್ಚಾಗಿ 1935ರ ಭಾರತ ಸರ್ಕಾರದ ಕಾಯಿದೆಯನ್ನು ಆಧರಿಸಿದೆ. ನಮ್ಮ ಸಂವಿಧಾನವು ವಸಾಹತುಶಾಹಿ ಪರಂಪರೆಯನ್ನು ಒಳಗೊಂಡಿದೆ” ಎಂದು ಹೇಳಿದ್ದರು. ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು.

Advertisements

ಇದು ಪ್ರಧಾನಿಗಳ ಆರ್ಥಿಕ ಸಲಹಾ ಮಂಡಳಿ ನಡೆಸುತ್ತಿರುವ ಅಧ್ಯಯನ. ಈ ಅಧ್ಯಯನ ಬಿಜೆಪಿ-ಆರ್‌ಎಸ್‌ಎಸ್‌ನ ಸಿದ್ಧಾಂತ ಮತ್ತು ಕಾರ್ಯಾಚರಣೆಗಳಿಗೆ ಅನುಗುಣವಾಗಿಯೇ ನಡೆಯುತ್ತಿದೆ ಅಥವಾ ಸಿದ್ದವಾಗುತ್ತಿದೆ ಎಂಬಕ್ಕೆ ಸಂವಿಧಾನದ ಮೇಲಿನ ಡೆಬ್ರಾಯ್ ಹೇಳಿಕೆಗಳೇ ಸಾಕ್ಷಿ.

ಇನ್ನು, ಈಗ ಪ್ರಜಾಪ್ರಭುತ್ವದ ಅಳಿವು-ಉಳಿವಿನ ಹೋರಾಟದ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಬಿಜೆಪಿ ಸೋಲು ಬಹುತೇಕ ಖಚಿತವೆಂದು ಹೇಳಲಾಗುತ್ತಿದೆ. ಇಂತಹ ಸಮಯದಲ್ಲಿ, ಈ ಮಂಡಳಿ ಇಂತದೊಂದು ವಿಚಿತ್ರ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿದೆ. ಈ ಅಧ್ಯಯನ ಮುಸ್ಲಿಂ ವಿರೋಧ ದ್ವೇಷ ಭಾಷಣಕ್ಕೆ ಪೂರಕವಾಗಿದೆ. ಮಾತ್ರವಲ್ಲದೆ, ಧಾರ್ಮಿಕ ವಿಭಜನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಜೊತೆಗೆ, ಹಲವು ದಶಕಗಳಿಂದ ಆರ್‌ಎಸ್‌ಎಸ್‌ ಪ್ರತಿಪಾದಿಸುತ್ತಿರುವ, ‘ಹಿಂದೂ ಖತ್ರೆ ಮೇ ಹೈ’ (ಹಿಂದೂಗಳು ಅಪಾಯದಲ್ಲಿದ್ದಾರೆ) ಎಂಬ ಭಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಇದೆಲ್ಲದರ ನಡುವೆ, ಈ ಅಧ್ಯಯನವನ್ನು ಮುಂಡಿಟ್ಟಿರುವ ಸಂಶೋಧಕರು ತಮ್ಮ ವಿಶ್ಲೇಷಣೆಯಲ್ಲಿ ಹಲವಾರು ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂಬುದು ಗಮನಾರ್ಹ.

ಮೊದಲಿಗೆ, ಜನಸಂಖ್ಯಾ ಅಧ್ಯಯನಗಳು ಜನಗಣತಿಯನ್ನು ಆಧರಿಸಿರುತ್ತವೆ. ಆದರೆ, ಈ ಅಧ್ಯಯನವು ಸುಮಾರು 23 ಲಕ್ಷ ಜನರನ್ನು ಸಂಪರ್ಕಿಸಿ ಅಸೋಸಿಯೇಷನ್ ಆಫ್ ರಿಲಿಜನ್ ಡಾಟಾ ಆರ್ಕೈವ್ (ARDA) ನಡೆಸಿರುವ ಸಮೀಕ್ಷೆಯನ್ನು ಆಧರಿಸಿದೆ. ಈ ಸಮೀಕ್ಷೆ ಭಾರತದ ವಿಶಾಲ ಜನಸಂಖ್ಯೆಯ ಅತೀ ಸಣ್ಣ ಮಾದರಿ. ಜನಸಂಖ್ಯೆಯ ವಿಚಾರದಲ್ಲಿ ಯಾವಾಗಲೂ ಸಮೀಕ್ಷೆಗಿಂತ ಜನಗಣತಿ ಅಂಕಿಅಂಶಗಳು ಹೆಚ್ಚು ವಿಶ್ವಾಸಾರ್ಹ ಮತ್ತು ಸಮಗ್ರವಾಗಿರುತ್ತವೆ. ಮಾತ್ರವಲ್ಲದೆ, ಜನಸಂಖ್ಯೆಯ ಬೆಳವಣಿಗೆಯ ವಿವಿಧ ಅಂಶಗಳನ್ನು ಹೊರತರುತ್ತವೆ. ಇದೆಲ್ಲವೂ ಗೊತ್ತಿರುವ ಆಡಳಿತಾರೂಢ ಬಿಜೆಪಿ 2021ರ ಜನಗಣತಿಯನ್ನು ನಡೆಸಿಯೇ ಇಲ್ಲ. ಜೊತೆಗೆ, ಅಧ್ಯಯನ ನಡೆಸಿರುವ ಈ ಮಂಡಳಿ 2011ರ ಜನಗಣತಿಯನ್ನು ಪರಿಗಣಿಸಿಯೇ ಇಲ್ಲ. ಅದನ್ನು ವಿಶ್ಲೇಷಣೆ ಮಾಡಿಯೂ ಇಲ್ಲ. ಹೆಚ್ಚು ವಿಶ್ವಾಸವುಳ್ಳ ಜನಗಣತಿ ವರದಿಯ ಬದಲಾಗಿ, ಜನಸಂಖ್ಯೆ ಸಣ್ಣ ಮಾದರಿಯುಳ್ಳ ಸಮೀಕ್ಷೆಯ ಡೇಟಾವನ್ನು ಅಧ್ಯಯನದ ಸಂಶೋಧಕರು ಬಳಸಿದ್ದಾರೆ. ಅಂದರೆ, ಅವರ ಅಧ್ಯಯನ ಎಷ್ಟು ವಿಶ್ವಾಸಾರ್ಹ ಎಂಬುದಕ್ಕೆ ಇದು ಕನ್ನಡಿ ಹಿಡಿಯುತ್ತದೆ.

ಮತ್ತೊಂದು ವಿಚಾರ, ಅಧ್ಯಯನವು 1950ರ ಜನಸಂಖ್ಯೆಯ ಅಂಕಿಅಂಶಗಳನ್ನು 2015ರ ಅಂಕಿಅಂಶಗಳೊಂದಿಗೆ ಹೋಲಿಸಿದೆ. ಇದು ಮತ್ತೊಂದು ಅನಿಯಂತ್ರಿತ ವಿಧಾನವಾಗಿದೆ. ಈ ವರದಿಯು ಪ್ರಧಾನಿ ಮೋದಿ ಅವರು ಹೇಳಿರುವ ‘ಹೆಚ್ಚು ಮಕ್ಕಳನ್ನು ಹೆರುವವರು’ ಎಂಬ ಮಾತಿಗೆ ಪೂರಕವಾಗಿದೆ. ಕಾರ್ಪೊರೇಟ್ ಮಾಧ್ಯಮಗಳು ಮತ್ತು ಕೋಮು ಸಂಘಟನೆಗಳು ತಮ್ಮ ಕೋಮುವಾದಿ ಮತ್ತು ವಿಭಜನೆಯ ದ್ವೇಷ ಪ್ರಚಾರಕ್ಕೆ ಈ ಡೇಟಾವನ್ನು ಬಳಸಿಕೊಳ್ಳುತ್ತಿವೆ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುತ್ತಿದ್ದಾರೆ ಎಂಬ ಸಾಮಾಜಿಕ ಭ್ರಾಂತಿಯನ್ನು ಈ ವರದಿ ಮತ್ತಷ್ಟು ಹೆಚ್ಚಿಸಿದೆ.

ಅಂದಹಾಗೆ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಈ ಭ್ರಾಂತಿಯನ್ನ ಹೆಚ್ಚಾಗಿ ಬಿತ್ತಿದ್ದರು. ಗುಜರಾತ್‌ನಲ್ಲಿ ಮುಸ್ಲಿಮರು ಆಶ್ರಯ ಪಡೆದಿದ್ದ ನಿರಾಶ್ರಿತರ ಶಿಬಿರಗಳನ್ನು ಮುಚ್ಚಲು ಮುಂದಾಗಿದ್ದ ಮೋದಿ, ಆ ನಿರಾಶ್ರಿತರ ಶಿಬಿರಗಳನ್ನ ‘ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆಗಳು’ ಅಂತ ಕರೆದಿದ್ದರು. ಈಗ, ಅದನ್ನೇ ಮತ್ತೆ ಪುನರುಚ್ಚರಿಸಿದ್ದಾರೆ. ಹಿಂದು ಹೆಣ್ಣುಮಕ್ಕಳ ಮಂಗಳಸೂತ್ರಗಳನ್ನು ಕಾಂಗ್ರೆಸ್‌ ಕಸಿದುಕೊಂಡು, ‘ಹೆಚ್ಚು ಮಕ್ಕಳನ್ನು ಹೆರುವವರಿಗೆ’ ಕೊಡುತ್ತದೆ ಎಂದಿದ್ದಾರೆ. ಮುಸ್ಲಿಂ ಸಮುದಾಯವನ್ನು ಅವಕಾಶಗಳನ್ನು ಕಿತ್ತುಕೊಳ್ಳುವ ಸ್ಥಾನದಲ್ಲಿ ಕೂರಿಸಿದ್ದಾರೆ.

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೆರುತ್ತಿದ್ದಾರೆ ಎಂಬುದು ಸತ್ಯವೇ? ದೇಶದಲ್ಲಿ ಒಟ್ಟು ಫಲವತ್ತತೆ ದರವನ್ನ (TFR) ನೋಡಿದರೆ, ಇದು ನಮಗೆ ಅರ್ಥವಾಗುತ್ತದೆ. ರಾಷ್ಟ್ರೀಯ ಆರೋಗ್ಯ ಕುಟುಂಬ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಸಮುದಾಯಗಳಲ್ಲಿ ಫಲವತ್ತತೆಯ ಪ್ರಮಾಣವು ಕಡಿಮೆಯಾಗುತ್ತಿದೆ. 1992-93ರಲ್ಲಿ ಇದು ಹಿಂದುಗಳಲ್ಲಿ 3.3 ಇದ್ದರೆ, ಮುಸ್ಲಿಮರಲ್ಲಿ 4.41 ಆಗಿತ್ತು. 2019-21ರಲ್ಲಿ ಇದು ಹಿಂದುಗಳಲ್ಲಿ 1.94ಕ್ಕೆ ಕುಸಿದಿದೆ. ಅದೇ ರೀತಿ ಮುಸ್ಲಿಮರಲ್ಲಿಯೂ 2.36ಗೆ ಕುಸಿತಕಂಡಿದೆ. ಫಲವತ್ತತೆಯಲ್ಲಿ ಶೇಕಡಾವಾರು ದರವು ಹಿಂದುಗಳಲ್ಲಿ 41.21% ಕುಸಿತವಾಗಿದ್ದರೆ, ಮುಸ್ಲಿಮರಲ್ಲಿ 46.49% ಕುಸಿತವಾಗಿದೆ. ಅಂದರೆ, ಶೇಕಡಾವಾರು ನೋಡಿದರೆ, ಹಿಂದುಗಳಿಗಿಂತ ಮುಸ್ಲಿಮರಲ್ಲಿಯೇ ಫಲವತ್ತತ್ತೆ ಪ್ರಮಾಣ ಹೆಚ್ಚಾಗಿ ಕುಸಿದಿದೆ. ಇದೇ ರೀತಿ ಮುಂದುವರಿದರೆ, ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆ ದರ ಮತ್ತಷ್ಟು ಕುಸಿಯುತ್ತದೆ. ಹೀಗಾಗಿ, ಎಂದಿಗೂ ಮುಸ್ಲಿಮರ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲು ಸಾಧ್ಯವೇ ಇಲ್ಲ.

ಇದರಲ್ಲಿ, ಮತ್ತೊಂದು ಆಸಕ್ತಿದಾಯಕ ವಿಷಯವೆಂದರೆ, ಫಲವತ್ತತೆ ದರವನ್ನು ಧರ್ಮ ಅಥವಾ ಇತರ ಅಂಶಗಳಿಂದ ನಿರ್ಧರಿಸಲಾಗುತ್ತದೆಯೇ ಎಂಬುದು ಶಾಶ್ವತವಾಗಿ ಉಳಿದಿರುವ ಪ್ರಶ್ನೆ. ಈ ನಡುವೆ, ‘ಮುಸ್ಲಿಮರು ಉದ್ದೇಶಪೂರ್ವಕವಾಗಿ ಮತ್ತು ಹಿಂದುಗಳಿಗೆ ವಿರುದ್ಧವಾಗಿ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿದ್ದಾರೆ, ಇದರಿಂದಾಗಿ, ಅವರು ಭಾರತದಲ್ಲಿ ಬಹುಸಂಖ್ಯಾತರಾಗುತ್ತಾರೆ. ಭಾರತವನ್ನು ಗಜಾವ-ಎ-ಹಿಂದ್ (ಮುಸ್ಲಿಮರಿಂದ ಭಾರತವನ್ನು ವಶಪಡಿಸಿಕೊಳ್ಳುವುದು) ಎಂದು ಘೋಷಿಸುತ್ತಾರೆ’ ಎಂಬ ಸುಳ್ಳು ನಿರೂಪಣೆಯನ್ನು ಹಿಂದುತ್ವ ಕೋಮುವಾದಿಗಳು ಎಗ್ಗಿಲ್ಲದೆ ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ವಾಸ್ತವವೆಂದರೆ, ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ ಎಂದು ಹೇಳುವುದು ಕೋಮು ರಾಜಕೀಯದ ಪ್ರಮುಖ ಸುಳ್ಳುಗಳಲ್ಲಿ ಗಂಭೀರವಾದ ಸುಳ್ಳು.

ಯಾವುದೇ ದೇಶದಲ್ಲಿ ಕುಟುಂಬದಲ್ಲಿನ ಮಕ್ಕಳ ಸಂಖ್ಯೆಯನ್ನು ಎರಡು ಅಂಶಗಳು ಪ್ರಭಾವದಿಂದ ನಿರ್ಧರಿಸಲಾಗುತ್ತದೆ. ಒಂದು ಬಡತನದ ಮಟ್ಟ ಮತ್ತು ಎರಡನೆಯದು ಒಟ್ಟಾರೆಯಾಗಿ ಸಮುದಾಯದಲ್ಲಿ ಮತ್ತು ನಿರ್ದಿಷ್ಟವಾಗಿ ಮಹಿಳೆಯರ ಸಾಕ್ಷರತೆಯ ಪ್ರಮಾಣ. ಕೇರಳ, ಕಾಶ್ಮೀರ ಮತ್ತು ಕರ್ನಾಟಕದಲ್ಲಿನ ಮುಸ್ಲಿಂ ಮಹಿಳೆಯರ ಫಲವತ್ತತೆಯ ದರವನ್ನು ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಿಂದು ಮಹಿಳೆಯರಿಗೆ ಹೋಲಿಕೆ ಮಾಡಿ ನೋಡಿದರೆ, ಮುಸ್ಲಿಂ ಮಹಿಳೆಯರಲ್ಲಿ ಫಲವತ್ತತೆಯ ಪ್ರಮಾಣ ತೀರಾ ಕಡಿಮೆಯಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ ಖುರೇಶಿ ಅವರ ಪುಸ್ತಕ, ‘ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ. ಫ್ಯಾಮಿಲಿ ಪ್ಲಾನಿಂಗ್ ಅಂಡ್ ಪೊಲಿಟಿಕಲ್ ಇನ್ ಇಂಡಿಯಾ’ (ಜನಸಂಖ್ಯಾ ಸುಳ್ಳು: ಇಸ್ಲಾಂ. ಭಾರತದಲ್ಲಿ ಕುಟುಂಬ ಯೋಜನೆ ಮತ್ತು ರಾಜಕೀಯ) ಈ ಸಮಸ್ಯೆಯ ಸಮಗ್ರವಾಗಿ ವಿವರಿಸಿದೆ. ಭಾರತದ 29 ರಾಜ್ಯಗಳ ಪೈಕಿ 24ರಲ್ಲಿ ಮಹಿಳೆಯರ ಫಲವತ್ತತೆ ಪ್ರಮಾಣ ಈಗಾಗಲೇ 2.179ಅನ್ನು ಸಮೀಪಿಸಿದೆ. ಇದು ಸ್ಥಿರ ಜನಸಂಖ್ಯೆಯ ಒಂದು ಸೂಚಕವಾಗಿದೆ ಎಂದು ಪುಸ್ತಕ ಹೇಳುತ್ತದೆ.

2011ರ ಜನಗಣತಿಯ ಪ್ರಕಾರ 14.2% ರಷ್ಟಿರುವ ಮುಸ್ಲಿಂ ಜನಸಂಖ್ಯೆಯು 2050ರ ವೇಳೆಗೆ 18%ಕ್ಕೆ ಸ್ಥಿರಗೊಳ್ಳುತ್ತದೆ ಅಥವಾ ಇನ್ನು ಕಡಿಮೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯ ದಶಮಾನದ ದರವು ಗಣನೀಯ ಕುಸಿತವನ್ನ ಇದು ತೋರಿಸುತ್ತದೆ.

ನಿಷ್ಕಳಂಕವಾಗಿ ನಡೆಯುವ ಹಲವಾರು ಅಧ್ಯಯನಗಳನ್ನು ಲೆಕ್ಕಿಸದ ಕೋಮುವಾದಿಗಳು ಸುಳ್ಳು-ಪೊಳ್ಳು ನಿರೂಪಣೆಗಳೊಂದಿಗೆ ಮುಸ್ಲಿಂ ಸಮುದಾಯವನ್ನು ವಿವಿಧ ರೀತಿಯಲ್ಲಿ ಅಪಹಾಸ್ಯ ಮಾಡುತ್ತಾರೆ.

ಇದೇ ಜನಸಂಖ್ಯೆಯಾಧಾರಿತ ಅಪಹಾಸ್ಯಗಳನ್ನು ಖಂಡಿಸಿದ್ದ ಮುಸ್ಲಿಂ ಗಣ್ಯರ ತಂಡವೊಂದು ಆರ್‌ಎಸ್‌ಎಸ್‌ ಸರಸಂಘಚಾಲಕನ ಜೊತೆ ಚರ್ಚಿಸಲು ಅಪಾಯಿಂಟ್‌ಮೆಂಟ್ ಕೇಳಿದ್ದನ್ನು ನಾವು ಮರೆಯಲಾಗದು. ಖುರೇಶಿ ಅವರು ಆ ತಂಡದ ಭಾಗವಾಗಿದ್ದರು. ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ತಮ್ಮ ಪುಸ್ತಕವನ್ನು ನೀಡಿದ್ದರು. ಇದೆಲ್ಲವೂ, ಸಂಘಪರಿವಾರ ಮತ್ತು ಬಿಜೆಪಿ ಉದ್ದೇಶಿತ ದ್ವೇಷ ಹರಡಲು ‘ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ – ಹಿಂದುಗಳು ಅಲ್ಪಸಂಖ್ಯಾತರಾಗುತ್ತಾರೆ’ ಎಂಬ ಸುಳ್ಳು ನಿರೂಪಣೆಯನ್ನು ಹರಡುತ್ತಿದೆ ಎಂಬುದನ್ನು ಸಾಬೀತು ಪಡಿಸುತ್ತದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

Download Eedina App Android / iOS

X