ನಟಿ ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೇ ಟಿಕೆಟ್ ಕೊಟ್ಟಿಲ್ಲ. ಇನ್ನು ರಮ್ಯಾಗೆ ಕರೆದು ಸಚಿವ ಸ್ಥಾನ ಕೊಡ್ತೀವಾ? ಎಂದು ಸಚಿವ ಆರ್ ಅಶೋಕ ಹೇಳಿದರು.
ʼಬಿಜೆಪಿಗೆ ಬನ್ನಿ ನಾಳೆಯೇ ನಿಮ್ಮನ್ನು ಮಂತ್ರಿ ಮಾಡುತ್ತೇವೆʼ ಎಂದು ಬಿಜೆಪಿ ನಾಯಕರು ಆಹ್ವಾನಿಸಿದ್ದಾರೆ ಎಂದು ಸ್ವತಃ ರಮ್ಯಾ ಈ ವಿಚಾರ ಬಹಿರಂಗಪಡಿಸಿದ್ದಾರೆ. ರಮ್ಯಾ ಅವರ ಈ ಹೇಳಿಕೆಗೆ ಸಚಿವ ಆರ್ ಅಶೋಕ್ ಭಾನುವಾರ ತಿರುಗೇಟು ನೀಡಿದ್ದಾರೆ.
ಇಂಗ್ಲಿಷ್ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಶನಿವಾರ ಮಾತನಾಡಿದ್ದ ರಮ್ಯಾ, “ನಾನು ಕೆಲವು ಬಾರಿ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದಾಗ ಬಿಜೆಪಿಯಿಂದ ಆಫರ್ ಬಂದಿತ್ತು. ಆದರೆ, ನಾನು ಯಾವುದೇ ಭಿನ್ನಭಿಪ್ರಾಯ ಕಾರಣಕ್ಕೆ ಬಿಜೆಪಿಗೆ ಹೋಗಲಿಲ್ಲ. ಹಾಗಂತ ನನಗೆ ಬಿಜೆಪಿ ಮೇಲೆ ದ್ವೇಷ ಇಲ್ಲ. ಆದರೆ, ಅವರ ಕೆಲವೊಂದು ಸಿದ್ಧಾಂತಗಳಿಗೆ ನನ್ನ ವಿರೋಧವಿದೆ” ಎಂದು ಹೇಳಿಕೊಂಡಿದ್ದರು.
ಮುಂದುವರಿದು, “ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರನ್ನು ಆಕಸ್ಮಿಕವಾಗಿ ಭೇಟಿಯಾದಾಗ, ʼನೀವು ಏಕೆ ರಾಜಕೀಯವನ್ನು ಬಿಟ್ರಿ? ಮತ್ತೆ ರಾಜಕೀಯಕ್ಕೆ ಬನ್ನಿ, ನಿಮಗೆ ಸಾಮರ್ಥ್ಯವಿದೆ. ರಾಜಕೀಯ ಕ್ಷೇತ್ರವನ್ನು ಬಿಡಬೇಡಿʼ ಎಂದು ಸಲಹೆ ನೀಡಿದ್ದರು” ಎಂದು ರಮ್ಯಾ ಹೇಳಿದ್ದರು.
“ಕಾಂಗ್ರೆಸ್ ಈ ಬಾರಿ ಆರು ಕ್ಷೇತ್ರಗಳ ಟಿಕೆಟ್ ಅನ್ನು ನನಗೆ ಆಫರ್ ಮಾಡಿತ್ತು. ಆದರೆ, ನಾನು ಇನ್ನೂ ತಯಾರಾಗಿಲ್ಲ. ಚುನಾವಣೆಗೆ ನಿಲ್ಲಲು ಗ್ರೌಂಡ್‌ನಲ್ಲಿ ಕೆಲಸ ಮಾಡಬೇಕು. ಅದಕ್ಕೆ ಸಂಪೂರ್ಣ ಸಮಯ ವಿನಿಯೋಗಿಸಬೇಕು. ಅದು ಈಗ ನನಗೆ ಸಾಧ್ಯವಿಲ್ಲ. ನಾನು ಸ್ಪರ್ಧಿಸದೇ ಪಕ್ಷಕ್ಕೆ ಬೆಂಬಲ ನೀಡುತ್ತೇನೆ. ಪಕ್ಷಕ್ಕಾಗಿ ದುಡಿಯುತ್ತೇನೆ” ಎಂದು ಹೇಳಿದ್ದೇನೆ ಎಂದು ರಮ್ಯಾ ತಿಳಿಸಿದ್ದರು.