ವಿಜಯಪುರ ಜಿಲ್ಲೆಯ ಜಂಬಗಿ ಕೆರೆಗೆ ಕಗ್ಗೋಡು ಕರೆಯಿಂದ ನೀರು ಹರಿಸಬೇಕೆಂದು ರೈತರು ಆಗ್ರಹಿಸಿದ್ದಾರೆ. ರೈತರ ಒತ್ತಾಯಕ್ಕೆ ಅಧಿಕಾರಿಗಳು ಒಪ್ಪದ ಹಿನ್ನೆಲೆ ಧರಣಿ ನಡೆಸುತ್ತಿದ್ದಾರೆ.
ಗುರುವಾರ, ಜಂಬಗಿ ಕೆರೆ ಸುತ್ತಮುತ್ತಲಿನ ಗ್ರಾಮಗಳ ವಿಜಯಪುರಲ್ಲಿ ರೈತರು ಧರಣಿ ಆರಂಭಿಸಿದ್ದರು. ಅಧಿಕಾರಿಗಳು ಮಾತುಕತೆಗೆ ಕರೆದ ಹಿನ್ನೆಲೆ ಧರಣಿಯನ್ನು ಸ್ಥಗಿತಗೊಳಿಸಿ, ಶುಕ್ರವಾರ ಸಭೆಗೆ ಹಾಜರಾಗಿದ್ದರು. ಆದರೆ, ಜಂಬಗಿ ಕೆರೆಗೆ ಕಗ್ಗೋಡು ಕರೆಯಿಂದ ನೀರು ಹರಿಸಲು ಉಪ ವಿಭಾಗಾಧಿಕಾರಿ ಶ್ವೇತಾ ಬೀಡೆಕರ, ತಹಸೀಲ್ದಾರ್ ಕವಿತಾ ಒಪ್ಪದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಮತ್ತೆ ಧರಣಿ ಮುಂದುವರೆಸಿದ್ದಾರೆ.
ಕಗ್ಗೋಡ ಕೆರೆಯಿಂದ 6-7 ಕಿ.ಮೀ ಅಂತರದಲ್ಲಿ ಜಂಬಗಿ ಕೆರೆ ಇದೆ. ಹೀಗಾಗಿ, ಹಳ್ಳದ ಮೂಲಕ ನೀರು ಹರಿಸಿದರೆ, ಶೀಘ್ರವೇ ಕರೆ ತುಂಬುತ್ತದೆ ಎಂಬುದು ರೈತರ ವಾದ. ಆದರೆ, ಸಭೆಯಲ್ಲಿ ಅಧಿಕಾರಿಗಳು ರಾಂಪೂರ ವಿಭಾಗದಿಂದ ಜಂಬಗಿ ಕೆರೆಗೆ ನೀರು ಹರಿಸುವುದಾಗಿ ಹೇಳುತ್ತಿದ್ದಾರೆ.
ಅಧಿಕಾರಗಳ ನಿಲುವಿಗೆ ವಿರೋಧ ವ್ಯಕ್ತಪಡಿಸಿರುವ ರೈತರು, ರಾಂಪೂರ ವಿಭಾಗದಿಂದ ನೀರು ಹರಿಸಿದರೆ ಜಂಬಗಿ ಕೆರೆಗೆ ಸಮರ್ಪಕವಾಗಿ ನೀರು ತಲುಪುವುದಿಲ್ಲ. ಹೀಗಾಗಿ,ಕಗ್ಗೋಡ ಕೆರೆಯಿಂದ ನೀರು ಹರಿಸಿದರೆ, ಮಾತ್ರವೇ ಶಾಶ್ವತ ಪರಿಹಾರ ದೊರೆಯುತ್ತದೆ ಎಂದಿದ್ದಾರೆ.
ಧರಣಿಯಲ್ಲಿ ಮಾತನಾಡಿದ ರೈತ ಮುಖಂಡ ಮಹಾದೇವಪ್ಪ ತೇಲಿ, “ರಾಂಪೂರ ವ್ಯಾಪ್ತಿಯ ಕಾಲುವೆಯಿಂದ ನೀರು ಹರಿಸಿ, ಈ ಬಾರಿ ಕೆರೆ ತುಂಬುವುದು ಅಸಾಧ್ಯ. ಆದರೆ, ಸಮೀಪದ ಕಗ್ಗೋಡ ಕೆರೆಯಿಂದ ಹಳ್ಳದ ಮೂಲಕ ನೀರು ಹರಿಸಿದರೆ, ಕೇವಲ 6-7 ಕಿ.ಮೀ. ಅಂತರದಲ್ಲಿರುವ ಜಂಬಗಿ ಕೆರೆಗೆ ಸರಾಗವಾಗಿ ನೀರು ಹರಿದು ಬರುತ್ತದೆ, ಕೆರೆ ತುಂಬುತ್ತದೆ. ಇಳಿಜಾರು ಮಾರ್ಗದಲ್ಲಿ ಹಳ್ಳ ಹರಿಯುವುದರಿಂದ ವಿಶೇಷವಾಗಿ ಯಾವುದೇ ಖರ್ಚಿಲ್ಲದೇ ಜಂಬಗಿ ಕೆರೆ ತುಂಬಿಸಬಹುದು” ಎಂದಿದ್ದಾರೆ.
ಧರಣಿಯಲ್ಲಿ ರೈತ ಮುಖಂಡ ಪ್ರಕಾಶ ತೇಲಿ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಮಸೂತಿ, ಆಹೇರಿ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ ಗಾಣಗೇರ, ಪ್ರಭು ಕಾರಜೋಳ, ಜಯಸಿಂಗರಜಪೂತ, ಚಿನ್ನಪ್ಪವಾಡೇದ, ಅನಮೇಶ ಜಮಖಂಡಿ, ನಿಜಲಿಂಗಪ್ಪ ತೇಲಿ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ನಾಗರಾಣ, ಬಸವಂತ ತೇಲಿ ಸೇರಿದಂತೆ ಅನೇಕರು ಇದ್ದರು.