“ಶಕ್ತಿ ಯೋಜನೆಯಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಕುಸಿಯುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಆಘಾತ ತಂದಿದೆ. ಮಾಹಿತಿ ಕೊರತೆಯಿಂದ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ” ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧ ಸಚಿವ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವುದರಿಂದ ಮೆಟ್ರೋ ಆದಾಯ ಕುಸಿದಿದೆ” ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ ಈ ರೀತಿ ತಿರುಗೇಟು ಕೊಟ್ಟಿದ್ದಾರೆ.
“ಮೆಟ್ರೋ ಆದಾಯ ಹಾಗೂ ಶಕ್ತಿ ಯೋಜನೆ ಬಗ್ಗೆ ಪ್ರಧಾನಮಂತ್ರಿಗಳು ಪ್ರಸ್ತಾಪ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೆಟ್ರೋ 130 ಕೋಟಿ ರೂ. ಆದಾಯ ಗಳಿಸಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಶೇ. 30ರಷ್ಟು ಏರಿಕೆ ಕಂಡಿದೆ. ನಮ್ಮ ರಾಜ್ಯದ ಪೈಕಿ ಬೆಂಗಳೂರಿನಲ್ಲಿ ಮಾತ್ರ ಮೆಟ್ರೋ ಇದೆ. ಶಕ್ತಿ ಯೋಜನೆ ಕರ್ನಾಟಕದಾದ್ಯಂತ ಜಾರಿ ಮಾಡಲಾಗಿದೆ. ನಾವು ಬಡವರ ಬಗ್ಗೆ ಆಲೋಚಿಸಿ ಈ ಯೋಜನೆ ಜಾರಿ ಮಾಡಿದ್ದೇವೆ” ಎಂದು ತಿಳಿಸಿದರು.
“ಕೋವಿಡ್ ಸಮಯದಲ್ಲಿ ಉಚಿತ ಬಸ್ ಪ್ರಯಾಣ ವ್ಯವಸ್ಥೆಗೆ ಒತ್ತಾಯ ಮಾಡಿದ್ದು ನಾವೇ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ನೆರವಾಗಲು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಮೊದಲು ಜಾರಿ ಮಾಡಿದ್ದು ಶಕ್ತಿ ಯೋಜನೆ. ಸಾರ್ವಜನಿಕರ ಅನುಕೂಲಕ್ಕೆ ಸಾರಿಗೆ ಇಲಾಖೆಯಿಂದ ಒಂದು ಸಾವಿರಕ್ಕೂ ಹೆಚ್ಚು ಹೊಸ ಬಸ್ ಗಳನ್ನು ಖರೀದಿ ಮಾಡಲಾಗಿದೆ. ಬಿಜೆಪಿಯವರಿಂದ ಇಂತಹ ಒಂದೇ ಒಂದು ಯೋಜನೆ ಜಾರಿ ಮಾಡಲು ಆಗಲಿಲ್ಲ” ಎಂದು ಡಿಸಿಎಂ ಡಿಕೆಶಿ ತಿರುಗೇಟು ನೀಡಿದ್ದಾರೆ.
“ತೆಲಂಗಾಣದಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ ಅಲ್ಲೂ ಕೂಡ ಈ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ಮೆಟ್ರೋದಲ್ಲಿ ಶೇ. 30 ರಷ್ಟು ಪ್ರಯಾಣಿಕರ ಸಂಖ್ಯೆ ಹಾಗೂ ಆದಾಯ ಹೆಚ್ಚಾಗಿದೆ. ಮೆಟ್ರೋದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪಾಲುದಾರರು. ಆದರೂ ಪ್ರಧಾನಮಂತ್ರಿಗಳಿಗೆ ಈ ವಿಚಾರವಾಗಿ ಮಾಹಿತಿ ಕೊರತೆ ಇದೆ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದಂತಿದೆ” ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
“ನಾವು ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದರೂ ಕೆಎಸ್ಆರ್ಟಿಸಿ ಹಾಗೂ ಮೆಟ್ರೋ ಸಂಸ್ಥೆಗಳನ್ನು ಸಮರ್ಥವಾಗಿ ನಡೆಸುತ್ತಿದ್ದೇವೆ. ಪ್ರಧಾನಮಂತ್ರಿಗಳಿಗೆ ಮಾಧ್ಯಮಗಳ ಮೂಲಕ ಈ ಮಾಹಿತಿ ನೀಡಲು ಬಯಸುತ್ತೇನೆ. ನಮ್ಮ ಶಕ್ತಿ ಯೋಜನೆ ಬಗ್ಗೆ ಬೇರೆ ರಾಜ್ಯದವರು ಬಂದು ಮಾಹಿತಿ ಪಡೆಯುತ್ತಿದ್ದಾರೆ. ಈ ಯೋಜನೆ ಜನರಿಗೆ ಅನುಕೂಲ ತಂದಿದೆ, ಅವರ ವಿಶ್ವಾಸ ಗಳಿಸಿದೆ. ದಿನನಿತ್ಯ ರಾಜ್ಯದಲ್ಲಿ ಮಹಿಳೆಯರು 60 ಲಕ್ಷ ಟ್ರಿಪ್ ನಷ್ಟು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಮಹಿಳೆಯರು ಈ ಯೋಜನೆಯಿಂದ ತೃಪ್ತರಾಗಿ ಸಂತೋಷದಿಂದ ಪ್ರಯಾಣ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗಗಳಲ್ಲಿ ಬಸ್ ಕೊರತೆ ಇದೆ ಎಂದು ಕೇಳಿದಾಗ, “ಈಗಾಗಲೇ ಸಾರಿಗೆ ಇಲಾಖೆ ವತಿಯಿಂದ 1 ಸಾವಿರ ಹೊಸ ಬಸ್ಗಳನ್ನು ನಿಯೋಜಿಸಲು ಬುಕ್ ಮಾಡಲಾಗಿದೆ. ರಾಮನಗರಕ್ಕೆ 100 ಬಸ್ ನಿಯೋಜಿಸಲಾಗಿದೆ. ಬೆಂಗಳೂರು, ಉತ್ತರ ಕರ್ನಾಟಕದ ಭಾಗಗಳಿಗೂ ಬಸ್ ಹಂಚಿಕೆ ಮಾಡುತ್ತೇವೆ. ಕೆಎಸ್ಆರ್ಟಿಸಿಯಲ್ಲಿ ನಾವು ಲಾಭ ನೋಡುತ್ತಿಲ್ಲ. ನಮಗೆ ನಷ್ಟ ಆಗದಿದ್ದರೆ ಸಾಕು. ಇನ್ನು ಸರ್ಕಾರ ಮಹಿಳೆಯರ ಪ್ರಯಾಣದ ವೆಚ್ಚವನ್ನು ಭರಿಸುತ್ತಿದೆಯೇ ಹೊರತು ಸಾರಿಗೆ ಸಂಸ್ಥೆಗಳಿಂದ ವೆಚ್ಚ ಭರಿಸುತ್ತಿಲ್ಲ” ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಇದನ್ನು ಓದಿದ್ದೀರಾ? 100 ಕೋಟಿ ಆಫರ್ ಆರೋಪ: ‘ವಕೀಲ ದೇವರಾಜೇಗೌಡ ಮೆಂಟಲ್ ಕೇಸ್’ ಎಂದ ಡಿಸಿಎಂ ಡಿ ಕೆ ಶಿವಕುಮಾರ್
ಲೋಕಸಭೆಯಲ್ಲಿ ನಿಮ್ಮ ಸಂಖ್ಯೆಗಳೆಷ್ಟು ಎಂಬ ಪ್ರಶ್ನೆಗೆ, “ಉತ್ತರ ಭಾರತದ ರಾಜ್ಯಗಳಲ್ಲೂ ಚುನಾವಣೆ ಉತ್ತಮವಾಗಿ ನಡೆಯುತ್ತಿದ್ದು, ಜನ ಬದಲಾವಣೆ ಬಯಸಿದ್ದಾರೆ. ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳ ಆಸುಪಾಸು ಕ್ಷೇತ್ರಗಳನ್ನು ಗೆಲ್ಲಲಿದೆ. ನಮ್ಮ ಗ್ಯಾರಂಟಿ ಏಟು ಏನು ಎಂದು ಗೊತ್ತಿಲ್ಲ. ಬಿಜೆಪಿಯವರು ನಮ್ಮ ಗ್ಯಾರಂಟಿ ನೋಡಿ ಗಾಬರಿಯಾಗಿದ್ದಾರೆ” ಎಂದು ಡಿ ಕೆ ಶಿವಕುಮಾರ್ ವ್ಯಂಗ್ಯವಾಡಿದರು.
