ಒಂಬತ್ತು ತಿಂಗಳಿಂದ ಸಾಮಾನ್ಯ ಸಭೆ ನಡೆಸದೇ ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ತೆರಿಗೆ ಹಣ ಹಾಗೂ 15ನೇ ಹಣಕಾಸು ಯೋಜನೆಯ ಲಕ್ಷಾಂತರ ರೂ. ಅವ್ಯವಹಾರ ನಡೆಸಿದ ಜನವಾಡ ಗ್ರಾಮ ಪಂಚಾಯತ್ ಪಿಡಿಒ ಸವಿತಾ ಹಿರೇಮಠ ಅವರನ್ನು ವರ್ಗಾಯಿಸುವಂತೆ ಸದಸ್ಯರು ಒತ್ತಾಯಿಸಿದ್ದಾರೆ.
ಈ ಸಂಬಂಧ ಜನವಾಡ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತುಕರಾಮ ಜಗದಾಳೆ ಸೇರಿದಂತೆ 17 ಜನ ಸದಸ್ಯರು ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಕ ಅಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಬೀದರ್ ತಾಲೂಕಿನ ಜನವಾಡಾ ಗ್ರಾಮ ಪಂಚಾಯತ್ ಪಿಡಿಓ ಸವಿತಾ ಹಿರೇಮಠ ಅವರು 9 ತಿಂಗಳಿಂದ ಗ್ರಾಪಂ ಸಾಮಾನ್ಯ ಸಭೆ ಮಾಡಲಾರದೇ ತೆರಿಗೆ ಹಣ ಮತ್ತು 15ನೇ ಹಣಕಾಸು ಯೋಜನೆಯ ಲಕ್ಷಾಂತರ ಹಣವನ್ನು ಕುಡಿಯುವ ನೀರು, ಸ್ವಚ್ಛತೆ ಕಾಮಗಾರಿ ಹೆಸರಿನಲ್ಲಿ ಕಬಳಿಸಿದ್ದಾರೆ. ಸದಸ್ಯರ ಗಮನಕ್ಕೆ ತರಲಾರದೇ ಡಿಜಿಟಲ್ ಖಾತಾ ನಮೂನೆ 11-A ಅಕ್ರಮವಾಗಿ ತೆಗೆದುಕೊಟ್ಟು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ” ಎಂದು ಆರೋಪಿಸಿದರು.
“15ನೇ ಹಣಕಾಸಿನ ಕ್ರಿಯಾ ಯೋಜನೆ ಸಿದ್ಧಪಡಿಸಲು ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ಹಲವು ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನದೆ ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ಬಾರಿ ಗ್ರಾಪಂ ಸಭೆ ನಡೆಸಲು ನೋಟಿಸ್ ನೀಡಿದ್ದರೂ ಕುಂಟು ನೆಪ ಹೇಳಿ ರದ್ದುಪಡಿಸಿದ್ದಾರೆ. ಇದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ” ಎಂದು ದೂರಿದರು.
“ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆಸಿದ ಪಿಡಿಓ ಸವಿತಾ ಹಿರೇಮಠ ಅವರನ್ನು ಸೇವೆಯಿಂದ ವರ್ಗಾಯಿಸುವಂತೆ ಕಳೆದ ಮಾರ್ಚ್ 7ರಂದು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿತ್ತು. ಆದರೆ ಯಾವುದೇ ಕ್ರಮ ಜರುಗಿಸಿಲ್ಲ. ಈಗಲಾದರೂ ಇದನ್ನು ಗಂಭೀರವಾಗಿ ಪರಿಗಣಿಸಿ ಸದರಿ ಪಿಡಿಒಗೆ ವರ್ಗಾಯಿಸಿ, ಅವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮೇ 20ರಂದು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಫೀನಿಕ್ಸ್‌ನಂತೆ ಎದ್ದು ಬಂದ ಆರ್‌ಸಿಬಿ ಪ್ಲೇ-ಆಫ್‌ಗೆ: ಚೆನ್ನೈ ಸೂಪರ್ ಕಿಂಗ್ಸ್ ಮನೆಗೆ
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸುರೇಖಾ ಸಂತೋಷ, ಶಬಾನಾ ಬೇಗಂ ಸಿರಾಜೋದ್ದಿನ್, ಎಂಡಿ ಲತೀಫ್ ಖುರೇಷಿ, ಮುಕೇಶ ದೀಲಿಪಕುಮಾರ, ಸುಮನ ಗಣಪತಿ, ರೀನಾ ವಿಜಯಕುಮಾರ, ಚಮನ್ ಸಿಂಗ ಮಹಾವೀರ, ಪ್ರೀತಿ ದಾದಾರಾವ, ಲಕ್ಷ್ಮಣ ಶಂಕರ, ರಘುನಾಥ ಶಂಕರ, ಪ್ರಭಾವತಿ ಅಶೋಕ, ರಾಧಾಬಾಯಿ ಸಂಜುಕುಮಾರ, ಲಕ್ಷ್ಮೀಬಾಯಿ ಸುಭಾಷ, ರಮೇಶ ಗಣಪತಿ ಇದ್ದರು.