ಕಳೆದ ಐದು ವರ್ಷಗಳಲ್ಲಿ ಅಮೇಥಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರು ಯೋಚಿಸದ ಕಾರಣ ಕ್ಷೇತ್ರವು ‘ನೊಂದಿದೆ’ ಎಂದು ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಅಮೇಥಿ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಪರವಾಗಿ ನಡೆದ ಪ್ರಚಾರದಲ್ಲಿ ಪ್ರಿಯಾಂಕಾ ಭಾಗಿಯಾಗಿದ್ದರು. ಮೇ 20 ರಂದು ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಕೊನೆಯ ಸುತ್ತಿನ ಪ್ರಚಾರದಲ್ಲಿ ಪ್ರಿಯಾಂಕಾ ಅವರು ಶರ್ಮಾ ಪರವಾಗಿ ಮತಚಾಯಿಸಿದ್ದಾರೆ. ‘ಶರ್ಮಾತಮ್ಮ ಇಡೀ ಜೀವನವನ್ನು ಅಮೇಥಿಗೆ ಅರ್ಪಿಸಿದ್ದಾರೆ’ ಎಂದು ಹೇಳಿದ್ದಾರೆ.
“ಶರ್ಮಾ ಕಳೆದ 40 ವರ್ಷಗಳಿಂದ ಅಮೇಥಿಯೊಂದಿಗೆ ಸಂಬಂಧ ಹೊಂದಿದ್ದಾರೆ. ಅವರು ಈ ಕ್ಷೇತ್ರದಲ್ಲಿ ನನ್ನ ತಂದೆ ರಾಜೀವ್ ಗಾಂಧಿ ಅವರಿಗೆ ನಿಖಕವರ್ತಿಯಾಗಿದ್ದರು. ನನ್ನ ತಾಯಿ ಸೋನಿಯಾ ಗಾಂಧಿ ಮತ್ತು ನನ್ನ ಅಣ್ಣ ರಾಹುಲ್ ಗಾಂಧಿಯವರ ಗೆಲುವಿಗಾಗಿಯೂ ಕೆಲಸ ಮಾಡಿದ್ದಾರೆ. ಅವರು ಅಮೇಥಿಗೆ ತಮ್ಮ ಜೀವನವನ್ನು ಅರ್ಪಿಸಿದ್ದಾರೆ” ಎಂದು ಹೇಳಿದರು.
ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕ್ರಮವಾಗಿ ಶರ್ಮಾ ಮತ್ತು ರಾಹುಲ್ ಗಾಂಧಿ ಪರವಾಗಿ ಪ್ರಿಯಾಂಕಾ ಭಾರೀ ಪ್ರಚಾರ ನಡೆಸುತ್ತಿದ್ದಾರೆ. ಎರಡೂ ಕ್ಷೇತ್ರಗಳಲ್ಲೂ ಬೀಡುಬಿಟ್ಟಿದ್ದಾರೆ. “ಅಮೇಥಿ ನನ್ನ ಮನೆ ಮತ್ತು ಕುಟುಂಬ. ನಾವು ಅದರಿಂದ ಎಂದಿಗೂ ದೂರ ಉಳಿದಿಲ್ಲ. ಉಳಿಯುವುದೂ ಇಲ್ಲ” ಎಂದು ಹೇಳಿದರು.
ಇರಾನಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ, “2019ರಲ್ಲಿ ಅವರು ನಿಮ್ಮನ್ನು ದಾರಿ ತಪ್ಪಿಸಿದ್ದರಿಂದ ರಾಹುಲ್ ಅವರನ್ನು ಸೋಲಿಸಲಾಯಿತು. ಆದರೆ, ನಾವು ನಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡಿದ್ದೇವೆ. ಅಮೇಥಿ ನನ್ನ ಮನೆ ಮತ್ತು ಕುಟುಂಬ. ನಾವು ಈ ಕುಟುಂಬಕ್ಕಾಗಿ ಕೆಲಸ ಮಾಡುತ್ತಲೇ ಇರುತ್ತೇವೆ. ಕಿಶೋರಿ ಲಾಲ್ ಶರ್ಮಾ ಜೊತೆಗೆ ರಾಹುಲ್ ಗಾಂಧಿ ಕೂಡ ಇದು ನನ್ನ ಕುಟುಂಬ ಎಂದು ಹೇಳಿದ್ದಾರೆ.ನಾನು ಅಮೇಥಿ ಮತ್ತು ರಾಯ್ ಬರೇಲಿಗಾಗಿ ಕೆಲಸ ಮಾಡುತ್ತೇನೆ” ಎಂದು ಪ್ರಿಯಾಂಕಾ ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡ್ ಮತ್ತು ಅಮೇಥಿಯಿಂದ ಸ್ಪರ್ಧಿಸಿದ್ದರು. ಅವರು ವಯನಾಡಿನಲ್ಲಿ ಗೆದ್ದರು. ಆದರೆ, ಅಮೇಥಿಯಲ್ಲಿ ಇರಾನಿ ವಿರುದ್ಧ ಸೋತರು. ಈಗ, ರಾಹುಲ್ ವಯನಾಡ್ ಮತ್ತು ರಾಯ್‌ಬರೇಲಿಯಲ್ಲಿ ಸ್ಪರ್ಧಿಸಿದ್ದಾರೆ. ತಮ್ಮ ಹಳೆಯ ಕ್ಷೇತ್ರ ಅಮೇಥಿಯನ್ನು ಪಕ್ಷದ ಹಿರಿಯ ಕಾರ್ಯಕರ್ತ ಶರ್ಮಾ ಅವರಿಗೆ ಬಿಟ್ಟುಕೊಟ್ಟಿದ್ದಾರೆ.