ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗೆ ಬರೋಬ್ಬರಿ 9,900 ಕೋಟಿ ರೂಪಾಯಿ ಜಮೆಯಾಗಿರುವ ಘಟನೆ ನಡೆದಿದೆ. ಸಾಫ್ಟ್‌ವೇರ್ ದೋಷದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
ಭಾನು ಪ್ರಕಾಶ್ ಎಂಬವರು ಬರೋಡಾ ಯುಪಿ ಬ್ಯಾಂಕ್‌ನಲ್ಲಿರುವ ತನ್ನ ಬ್ಯಾಂಕ್ ಖಾತೆಯ ಮೊತ್ತವನ್ನು ಪರಿಶೀಲಿಸಿದ್ದು, ಅವರ ಖಾತೆಗೆ ಬರೋಬ್ಬರಿ 99,99,94,95,999.99 ರೂಪಾಯಿ (9,900 ಕೋಟಿ ರೂಪಾಯಿ) ಜಮೆಯಾಗಿದೆ. ಇಷ್ಟು ಮೊತ್ತ ತನ್ನ ಬ್ಯಾಂಕ್ ಖಾತೆಯಲ್ಲಿ ಇರುವುದನ್ನು ನೋಡಿ ಬೆರಗಾಗಿದ್ದಾರೆ. ಕೂಡಲೇ ಬ್ಯಾಂಕ್‌ಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ವಿಜಯಪುರ | ಅಂಗನವಾಡಿ ನೌಕರರ ಹೋರಾಟ; ಖಾತೆಗೆ ಜಮೆಯಾಯಿತು 2019ರ ಗೌರವ ಧನ
ಭಾನು ಪ್ರಕಾಶ್ ಅವರ ಖಾತೆಯು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಖಾತೆಯಾಗಿದ್ದು, ಬ್ಯಾಂಕ್ ಈ ಖಾತೆಯನ್ನು ಎನ್‌ಪಿಎ ಖಾತೆಯಾಗಿ ತಪ್ಪಾಗಿ ಮಾಡಿಕೊಂಡಿದೆ. ಸಾಫ್ಟ್‌ವೇರ್ ದೋಷದಿಂದಾಗಿ ಅವರ ಖಾತೆ ಹಣ ವರ್ಗಾವಣೆ ಆಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
“ಬ್ಯಾಂಕ್‌ನ ಸಾಫ್ಟ್‌ವೇರ್‌ನಲ್ಲಿನ ಗ್ಲಿಚ್‌ನಿಂದಾಗಿ ಇದು ನಡೆದಿದೆ. ಈ ಗ್ಲಿಚ್‌ನಿಂದಾಗಿ ಖಾತೆಯಲ್ಲಿ ಭಾರೀ ಪ್ರಮಾಣದ ಹಣ ಇದ್ದಂತೆ ಕಂಡಿದೆ” ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕ ರೋಹಿತ್ ಗೌತಮ್ ಹೇಳಿದ್ದಾರೆ.
“ಖಾತೆಯನ್ನು ಎನ್‌ಪಿಎ ಸ್ಟೇಟಸ್‌ಗೆ ಲಿಂಕ್ ಮಾಡಿದ ಸಾಫ್ಟ್‌ವೇರ್ ದೋಷದಿಂದಾಗಿ ಬ್ಯಾಂಕ್ ಖಾತೆಯಲ್ಲಿ ಅಷ್ಟೊಂದು ಹಣ ಇದ್ದಂತೆ ಕಂಡು ಬಂದಿದೆ ಎಂದು ನಾವು ಭಾನು ಪ್ರಕಾಶ್ ಅವರಿಗೆ ತಿಳಿಸಿದ್ದೇವೆ. ಈ ತಪ್ಪನ್ನು ತಿದ್ದುಪಡಿ ಮಾಡಲು ಕ್ರಮವನ್ನು ಕೈಗೊಳ್ಳಲಾಗಿದೆ. ಹಣ ದುರುಪಯೋಗವಾಗದಂತೆ ನೋಡಿಕೊಳ್ಳಲು ಖಾತೆಯನ್ನು ಫ್ರೀಝ್ ಮಾಡಲಾಗಿದೆ” ಎಂದು ತಿಳಿಸಿದರು.