ಕಳೆದ 6-7 ವರ್ಷದಲ್ಲಿ ಆರು ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ನೆಟ್ಟಿಗರು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್‌ಡಿಟಿವಿಯ ಪ್ರಧಾನ ಸಂಪಾದಕ ಸಂಜಯ್ ಪುಗಾಲಿಯಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಆರರಿಂದ ಏಳು ವರ್ಷಗಳಲ್ಲಿ 6 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಅಂಕಿ ಅಂಶ ಹೇಳುತ್ತದೆ” ಎಂದರು.
ತನ್ನ ಹೇಳಿಕೆಯನ್ನು ಪಿಎಲ್‌ಎಫ್‌ಎಸ್ ಡೇಟಾವನ್ನು ಉಲ್ಲೇಖಿಸಿ ಸಮರ್ಥಿಸಿಕೊಂಡ ಪ್ರಧಾನಿ, ನಿರುದ್ಯೋಗ ಅರ್ಧದಷ್ಟು ಕಡಿಮೆಯಾಗಿದೆ ಎಂದು ವಾದಿಸಿದ್ದಾರೆ.
6 Crore Jobs Created In 6-7 Years: PM Modi To NDTV On Unemployment https://t.co/GvPgrymiIt pic.twitter.com/QcvjDejWJf
— NDTV News feed (@ndtvfeed) May 20, 2024
“ಪಿಎಲ್‌ಎಫ್‌ಎಸ್ ಅಂಕಿಅಂಶಗಳು ಆರರಿಂದ ಏಳು ವರ್ಷಗಳಲ್ಲಿ 6 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸಿವೆ ಎಂದು ಹೇಳುತ್ತದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ ಕೂಡ ಇದನ್ನೇ ಹೇಳಿದೆ. ನಾನು ಸರ್ಕಾರಿ ಉದ್ಯೋಗಗಳಿಗಾಗಿ ದೊಡ್ಡ ಅಭಿಯಾನವನ್ನು ನಡೆಸಿದ್ದೇನೆ ಮತ್ತು ಈ ಜನರು (ಪ್ರತಿಪಕ್ಷಗಳು ) ಉದ್ಯೋಗದ ಬಗ್ಗೆ ಕೂಗಾಡುತ್ತಾರೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ʼಈ ದಿನʼ ಸಮೀಕ್ಷೆ | ನಿರುದ್ಯೋಗವೇ ಮೂಲ ಸಮಸ್ಯೆ ಎಂದ ಉತ್ತರ ಕರ್ನಾಟಕದ ಮಂದಿ
ಎಸ್‌ಕೆಒಸಿಎಚ್ ಗ್ರೂಪ್ ಬಿಡುಗಡೆ ಮಾಡಿದ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ, “ಕಳೆದ 10 ವರ್ಷಗಳಿಂದ ಪ್ರತಿ ವರ್ಷ 5 ಕೋಟಿ ವ್ಯಕ್ತಿ-ವರ್ಷಗಳ ಉದ್ಯೋಗವನ್ನು ಸೃಷ್ಟಿಸಲಾಗಿದೆ ಎಂದು ಅದು ಹೇಳಿದೆ. ಇದು ಸಂಶೋಧನೆಯಿಂದ ಬೆಂಬಲಿತವಾಗಿದೆ. ಇದು ಕೇವಲ ಡೇಟಾ ಅಲ್ಲ ನೈಜತೆ” ಎಂದು ಸಮರ್ಥಿಸಿಕೊಂಡರು.
ನಿರುದ್ಯೋಗ ದರ ಏನು ಹೇಳುತ್ತೆ?
ಪೋರ್ಬ್ಸ್ ವರದಿ ಪ್ರಕಾರ ಜನವರಿ 2024ರಲ್ಲಿ ನಿರುದ್ಯೋಗ ದರವು ಕಳೆದ 16 ತಿಂಗಳುಗಳಲ್ಲಿ ಅತ್ಯಂತ ಕಡಿಮೆಯಾಗಿ ಶೇಕಡ 6.57ಕ್ಕೆ ತಲುಪಿದೆ. ಆದರೆ 20ರಿಂದ 30ರ ನಡುವಿನ ವಯಸ್ಸಿನ ಯುವಕರಲ್ಲಿ ನಿರುದ್ಯೋಗವು 2023ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಹೆಚ್ಚಳವಾಗಿದೆ.
20 ಮತ್ತು 24 ವರ್ಷದ ನಡುವಿನ ಯುವಕರಲ್ಲಿ ನಿರುದ್ಯೋಗವು 44.49 ಶೇಕಡಕ್ಕೆ ಏರಿದೆ. 25 ಮತ್ತು 29ರ ನಡುವಿನ ವಯಸ್ಸಿನ ಯುವಕರಲ್ಲಿ ನಿರುದ್ಯೋಗವು 2023ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 14.33ಕ್ಕೆ ಏರಿಕೆಯಾಗಿದೆ.
ಯಾವುದೇ ದೇಶವಾದರೂ ಯುವಕರು ಆರ್ಥಿಕ ಬೆಳವಣಿಗೆಗೆ ಅಧಿಕ ಕೊಡುಗೆಯನ್ನು ನೀಡುವವರು. ಆದರೆ ಭಾರತದಲ್ಲಿ ಒಟ್ಟು ನಿರುದ್ಯೋಗಿಗಳಲ್ಲಿ ಶೇಕಡ 83ರಷ್ಟು ನಿರುದ್ಯೋಗಿಗಳು ಯುವಕರಾಗಿರುವುದು ಆಘಾತಕಾರಿ.
ಇದನ್ನು ಓದಿದ್ದೀರಾ? ಮೋದಿ ಮೋಸ 2 | ಯುವಜನರಿಗೆ ಉದ್ಯೋಗ ಕೊಡುವಲ್ಲಿ ಮೋದಿ ವಿಫಲ; ಹೆಚ್ಚಿದ ನಿರುದ್ಯೋಗ!
ನಾವು ಕಳೆದ 15 ವರ್ಷಗಳ ನಿರುದ್ಯೋಗ ದರವನ್ನು ಗಮನಿಸಿದಾಗ ದೇಶದಲ್ಲಿ ನಿರುದ್ಯೋಗ ಪ್ರಮಾಣವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವುದನ್ನು ಕಾಣಬಹುದು. 2008ರಿಂದ 2019ರವರೆಗೂ ಶೇಕಡ 5.40 ಆಸುಪಾಸಿನಲ್ಲಿದ್ದ ನಿರುದ್ಯೋಗ ದರವು 2020ರ ವೇಳೆಗೆ ದಿಡೀರ್ ಆಗಿ ಶೇಕಡ 8ಕ್ಕೆ ಏರಿಕೆಯಾಗಿದೆ.
2021ರಲ್ಲಿ ಶೇಕಡ 5.98ಕ್ಕೆ ಇಳಿದಿದೆಯಾದರೂ ಅದಾದ ಬಳಿಕ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಶೇಕಡ 5ರ ಆಸುಪಾಸಿಗೆ ತಲುಪಿಲ್ಲ. 2023ರಲ್ಲಿ ಶೇಕಡ 8ರಷ್ಟಿದ್ದ ನಿರುದ್ಯೋಗ ದರ 2024ರ ಜನವರಿ ವೇಳೆಗೆ ಶೇಕಡ 6.57 ಇದ್ದು, ಮೊದಲ ತ್ರೈಮಾಸಿಕದಲ್ಲಿ ಶೇಕಡ 6.7ರಷ್ಟಿದೆ.