40-50 ಲಕ್ಷ ಕೊಟ್ಟರೆ ಚೀನಾದಿಂದ ಫೋನ್ ಟ್ಯಾಪಿಂಗ್ ಯಂತ್ರ ಅಕ್ರಮವಾಗಿ ಸಿಗುತ್ತದೆ. ಫೋನ್ ಟ್ಯಾಪಿಂಗ್ ಎಂಬುದೇ ಅಕ್ರಮ. ಚೀನಾದಿಂದ ಖರೀದಿಸಿದ ಫೋನ್ ಟ್ಯಾಪಿಂಗ್ ಯಂತ್ರಗಳು ಕರ್ನಾಟಕಕ್ಕೆ ಎಷ್ಟು ಬಂದಿವೆ? ಯಾರ ಮನೆಯಲ್ಲಿ ಇವೆ? ಎಂಬುದನ್ನು ಪತ್ತೆ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, “ವಿರೋಧ ಪಕ್ಷದವರ ಫೋನ್ ಟ್ಯಾಪಿಂಗ್ ಮಾಡುತ್ತಾರೆ ಎಂದು ಪೊಲೀಸ್ ಅಧಿಕಾರಿಗಳು ನನಗೂ ಹೇಳಿದ್ದಾರೆ. ಸರಕಾರ ಫೋನ್ ಟ್ಯಾಪಿಂಗ್ ಮಾಡುತ್ತಿಲ್ಲ ಎಂದಾದರೆ ಇಂಥ ಯಂತ್ರಗಳು ಎಲ್ಲೆಲ್ಲಿ ಇವೆ ಎಂದು ತನಿಖೆ ಮಾಡಲಿ” ಎಂದು ಆಗ್ರಹಿಸಿದರು.
“ಕುಮಾರಸ್ವಾಮಿಯವರು ಅವರಿಗೆ ಇರುವ ಮಾಹಿತಿಯಲ್ಲಿ ಇದನ್ನು ಹೇಳಿದ್ದಾರೆ. ಯಾರೇ ಆಗಲಿ; ಈ ತರ ಫೋನ್ ಟ್ಯಾಪಿಂಗ್ ಮಾಡುವುದು ಅಪರಾಧ. ಅಂಥವರನ್ನೆಲ್ಲ ಜೈಲಿಗೆ ಕಳುಹಿಸಬೇಕು. ಫೋನ್ ಟ್ಯಾಪಿಂಗ್ ಅಕ್ರಮಕ್ಕೆ ಕಡಿವಾಣ ಹಾಕಬೇಕು” ಎಂದರು.
“ಈ ವಿಷಯವನ್ನು ಸರಕಾರವು ಸಿಬಿಐ ತನಿಖೆಗೆ ಒಪ್ಪಿಸಲಿ. ಸರಕಾರ ಇಂಥ ಅಕ್ರಮ ಮಾಡಿಲ್ಲ ಎಂದು ಧೈರ್ಯದಿಂದ ಹೇಳುವುದಾದರೆ ಸಿಬಿಐ ತನಿಖೆ ಮಾಡಿಸಲಿ. ಫೋನ್ ಟ್ಯಾಪಿಂಗ್ ಯಂತ್ರಗಳನ್ನು ಬೇರೆ ದೇಶದಿಂದ ಖರೀದಿಸಿರುವ ಸಾಧ್ಯತೆ ಇದ್ದು, ಇಲ್ಲಿನ ಪೊಲೀಸರು ಏನೂ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದರು.
ವಿಧಾನ ಪರಿಷತ್, 6 ಸ್ಥಾನ ಗೆಲ್ಲುತ್ತೇವೆ
“ಚುನಾವಣೆ ನಡೆಯುತ್ತಿರುವ ವಿಧಾನ ಪರಿಷತ್ತಿನ ಎಲ್ಲ 6 ಸ್ಥಾನಗಳಲ್ಲಿ ಗೆಲ್ಲಲು ಮಾಡಬೇಕಾದ ಪ್ರಯತ್ನದ ಕುರಿತು ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಇಂದು ಬೆಂಗಳೂರು ಪದವೀಧರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರದ ಪ್ರಮುಖರ ಸಭೆಯು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆಯಿತು” ಎಂದರು.
“ಬೂತ್‍ನಲ್ಲಿ ಮತದಾರರನ್ನು ಹುಡುಕಿ ಅವರಿಗೆ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಲು ವಿನಂತಿಸಬೇಕು. ವಿಧಾನಸಭಾ ಮಟ್ಟದಲ್ಲಿ ಸಭೆ ನಡೆಸಬೇಕೆಂದು ನಿರ್ಧರಿಸಲಾಗಿದೆ. ವಿಧಾನಸಭೆಯಿಂದ ಪರಿಷತ್ತಿಗೆ ಆಯ್ಕೆ ಸಂಬಂಧ ಯಾರು ಅಭ್ಯರ್ಥಿಗಳು ಎಂದು ಕೇಂದ್ರದ ನಾಯಕರು ತೀರ್ಮಾನ ಮಾಡಲಿದ್ದಾರೆ” ಎಂದರು.
