ಎಂಡಿಎಚ್ ಮತ್ತು ಎವರೆಸ್ಟ್‌ನ ಸಾಂಬಾರ್ ಪದಾರ್ಥಗಳ ಮಾದರಿಗಳಲ್ಲಿ ಹಾನಿಕಾರಕ ಎಥಿಲೀನ್ ಆಕ್ಸೈಡ್‌ನ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು 28 ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ತಿಳಿಸಿದೆ.
ಎಫ್‌ಎಸ್‌ಎಸ್‌ಎಐ ವರದಿಯ ಪ್ರಕಾರ, ಆರು ಇತರ ಪ್ರಯೋಗಾಲಯಗಳ ವರದಿಗಳು ಇನ್ನೂ ಬಾಕಿ ಉಳಿದಿವೆ.
ಎಂಡಿಎಚ್ ಮತ್ತು ಎವರೆಸ್ಟ್ ಮಸಾಲಾ ಪದಾರ್ಥಗಳನ್ನು ನಿಷೇಧಿಸಿದ ನಂತರ ಗುಣಮಟ್ಟದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ದೇಶದಾದ್ಯಂತ ಎಂಡಿಎಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲ ಬ್ರಾಂಡ್‌ಗಳ ಪುಡಿ ರೂಪದಲ್ಲಿ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳಲು ಎಫ್‌ಎಸ್‌ಎಸ್‌ಎಐ ಪ್ರಾರಂಭಿಸಿತು.
ಎಂಡಿಹೆಚ್‌ನ ಮದ್ರಾಸ್ ಕರಿ ಪೌಡರ್, ಎವರೆಸ್ಟ್ ಫಿಶ್ ಕರಿ ಮಸಾಲಾ, ಎಂಡಿಹೆಚ್ ಸಾಂಬಾರ್ ಮಸಾಲಾ ಮಿಶ್ರಿತ ಮಸಾಲಾ ಪುಡಿಯನ್ನು ಮಾದರಿಗೆ ತೆಗೆದುಕೊಳ್ಳಲಾಗಿತ್ತು.
ಮೂಲಗಳ ಪ್ರಕಾರ, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರು ಮತ್ತು ಎಫ್‌ಎಸ್‌ಎಸ್‌ಎಐ ಪ್ರಾದೇಶಿಕ ನಿರ್ದೇಶಕರ ಮೂಲಕ ಏಪ್ರಿಲ್ 22 ರಂದು ಪರೀಕ್ಷಿಸಲು ಆದೇಶಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ
ಎವರೆಸ್ಟ್ ಮಸಾಲೆಗಳ ಮಾದರಿಗಳನ್ನು ಸಂಸ್ಥೆಯ ಎರಡು ಉತ್ಪಾದನಾ ಘಟಕಗಳಿಂದ ತೆಗೆದುಕೊಳ್ಳಲಾಗಿದೆ.ಎಂಡಿಹೆಚ್‌ನಿಂದ 25 ಮಾದರಿಗಳನ್ನು ಎಫ್ಎಸ್ಎಸ್ಎಐ ತಮ್ಮ 11 ಉತ್ಪಾದನಾ ಘಟಕಗಳಿಂದ ತೆಗೆದುಕೊಳ್ಳಲಾಗಿದೆ.
ಕೀಟನಾಶಕಗಳ ಅಂಶಗಳು ಸೇರಿದಂತೆ ವಿವಿಧ ಗುಣಮಟ್ಟ ಮತ್ತು ಸುರಕ್ಷತಾ ನಿಯತಾಂಕಗಳ ಅನುಸರಣೆಗಾಗಿ ಮಾದರಿಯ ಪ್ರತಿಯೊಂದು ಉತ್ಪನ್ನಗಳನ್ನು ವಿಶ್ಲೇಷಿಸಲಾಗಿದೆ. ಈ ಮಾದರಿಗಳನ್ನು ಎಫ್ಎಸ್ಎಸ್ಎಐ ಸೂಚಿಸಿದ ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಎಥಿಲೀನ್ ಆಕ್ಸೈಡ್ ಕುರುವಿಗಾಗಿ ವಿಶ್ಲೇಷಿಸಲಾಗಿದೆ.
ಇದುವರೆಗೆ ಬಂದಿರುವ ಪ್ರಯೋಗಾಲಯ ವರದಿಗಳನ್ನು ಎಫ್ಎಸ್ಎಸ್ಎಐ ವೈಜ್ಞಾನಿಕ ಸಮಿತಿಯು ಪರಿಶೀಲಿಸಿದ್ದು , ಮಾದರಿಗಳಲ್ಲಿ ಎಥಿಲೀನ್ ಆಕ್ಸೈಡ್‌ನ ಯಾವುದೇ ಕುರುಹುಗಳು ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಅಂತೆಯೇ, ಇತರ ಬ್ರಾಂಡ್‌ಗಳ ಮಸಾಲೆಗಳ 300 ಮಾದರಿಗಳ ಪರೀಕ್ಷಾ ವರದಿಗಳನ್ನು ಸಹ ವೈಜ್ಞಾನಿಕ ಸಮಿತಿಯು ಪರಿಶೀಲಿಸಿದೆ ಮತ್ತು ಅವುಗಳಲ್ಲೂ ಎಥಿಲೀನ್ ಆಕ್ಸೈಡ್ ಕಂಡು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ವೈಜ್ಞಾನಿಕ ಸಮಿತಿಗಳು ಕೇರಳದ ಭಾರತೀಯ ಮಸಾಲೆ ಸಂಶೋಧನಾ ಸಂಸ್ಥೆ, ಹರಿಯಾಣದ ಎನ್‌ಐಎಫ್‌ಟಿಇಎಂ, ಮುಂಬೈನ ಬಿಎಆರ್‌ಸಿ, ಲಖನೌದ ಸಿಎಂಪಿಎಪಿ, ಅಸ್ಸಾಂನ ಡಿಆರ್‌ಡಿಒ ಒಳಗೊಂಡಿದೆ.
