ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್‌ಬಿಐ ಕ್ರಮದ ಪರಿಣಾಮವಾಗಿ ಭಾರತದ ಡಿಜಿಟಲ್ ಪೇಮೆಂಟ್ಸ್ ಸಂಸ್ಥೆ ಪೇಟಿಎಂ ಭಾರೀ ನಷ್ಟವನ್ನು ಕಂಡಿದೆ. ಸಂಸ್ಥೆ ಬುಧವಾರ ತನ್ನ ನಾಲ್ಕನೇ ತ್ರೈಮಾಸಿಕದ ವರದಿಯನ್ನು ಪ್ರಕಟಿಸಿದ್ದು ಜನವರಿಯಿಂದ ಮಾರ್ಚ್ 31ರವರೆಗಿನ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 549.6 ಕೋಟಿ ರೂಪಾಯಿ ನಷ್ಟವಾಗಿರುವುದಾಗಿ ತಿಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಪೇಟಿಎಂ ಸಂಸ್ಥೆಯು 219.8 ಕೋಟಿ ರೂಪಾಯಿ ನಷ್ಟವನ್ನು ದಾಖಲಿಸಿತ್ತು. ಹಾಗೆಯೇ ಕಳೆದ ತ್ರೈಮಾಸಿಕದಲ್ಲಿ ಪೇಟಿಎಂ ಸುಮಾರು 168.4 ಕೋಟಿ ರೂಪಾಯಿ ನಷ್ಟವನ್ನು ಕಂಡಿರುವುದಾಗಿ ತನ್ನ ಹಣಕಾಸು ವರದಿಯಲ್ಲಿ ಮಾಹಿತಿ ನೀಡಿತ್ತು.
ಇದನ್ನು ಓದಿದ್ದೀರಾ? ಪೇಟಿಎಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಭವೇಶ್ ಗುಪ್ತಾ ದಿಢೀರ್ ರಾಜೀನಾಮೆ
ಇನ್ನು ವರ್ಷದಿಂದ ವರ್ಷಕ್ಕೆ ‘ಒಟ್ಟು ಆದಾಯ’ವೂ ಕೂಡಾ ಶೇ. 2.9ರಷ್ಟು ಅಂದರೆ 2,334.5 ಕೋಟಿ ರೂ ಇದ್ದ ಆದಾಯವು 2,267.1 ಕೋಟಿ ರೂಪಾಯಿಗೆ ಇಳಿದಿದೆ. ಇನ್ನು ‘ಆದಾಯ’ವು ಶೇಕಡ 20.5ರಷ್ಟು ಇಳಿದು 2,850.5 ಕೋಟಿ ರೂಪಾಯಿ ಆಗಿದೆ.
Paytm registers 25% growth in revenue at Rs 9,978 crore in 2023-24
Read @ANI Story | https://t.co/xmliP01CU5#Paytm #fintech #PaytmResults pic.twitter.com/II2xZpDskX
— ANI Digital (@ani_digital) May 22, 2024
ಪೇಟಿಎಂನ ಆರ್ಥಿಕ ವರದಿ ಮೇಲೆ ಪ್ರಮುಖವಾಗಿ ಪೇಟಿಎಂ ಬ್ಯಾಂಕ್ ವಿರುದ್ಧ ಆರ್‌ಬಿಐ ಕೈಗೊಂಡ ಕ್ರಮವು ಪ್ರಭಾವ ಬೀರಿದೆ. “ಕೆಲವು ಅಡೆತಡೆಗಳಿಂದಾಗಿ ಸಂಸ್ಥೆಯು ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಹಿನ್ನೆಡೆ ಕಂಡಿದೆ. ಹಣಕಾಸು ವರ್ಷ 2025ರ ಮೊದಲ ತ್ರೈಮಾಸಿಕದಲ್ಲಿ ಈ ಅಡೆತಡೆಗಳ ಪ್ರಭಾವ ಅಧಿಕವಾಗಿ ಕಾಣಿಸಿಕೊಳ್ಳಬಹುದು” ಎಂದು ಪೇಟಿಎಂ ತಿಳಿಸಿದೆ.
ಇದನ್ನು ಓದಿದ್ದೀರಾ? ಮಾರ್ಚ್ 15ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸ್ಥಗಿತ
2023-24ರ ಹಣಕಾಸು ವರ್ಷದಲ್ಲಿ ಒಟ್ಟಾಗಿ ಸಂಸ್ಥೆಯು 1,422.4 ಕೋಟಿ ರೂಪಾಯಿ ನಷ್ಟವನ್ನು ದಾಖಲಿಸಿದೆ. ಹಣಕಾಸು ವರ್ಷ 2022-23ರಲ್ಲಿ ದಾಖಲಾದ 1,776.5 ಕೋಟಿ ರೂ ನಷ್ಟಕ್ಕೆ ಹೋಲಿಸಿದಾಗ ಕಳೆದ ಹಣಕಾಸು ವರ್ಷದಲ್ಲಿ ಹಲವಾರು ಅಡತಡೆಗಳ ಹೊರತಾಗಿಯೂ ಪೇಟಿಎಂ ನಷ್ಟವು ಕೊಂಚ ಕಡಿಮೆಯಾಗಿದೆ. ಇನ್ನು 2023-24ರಲ್ಲಿ ಪೇಟಿಎಂ ಆದಾಯ ಶೇ 25ರಷ್ಟು ಜಿಗಿದು 9,978 ರೂಗೆ ತಲುಪಿದೆ.
ಪದೇ ಪದೇ ಎಚ್ಚರಿಕೆ ನೀಡಿದರೂ ಪೇಮೆಂಟ್ಸ್ ಬ್ಯಾಂಕ್ ತಮ್ಮ ನಿಯಮಾವಳಿಗಳನ್ನು ಅನುಸರಿಸಲು ವಿಫಲವಾದ ಪರಿಣಾಮವಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಆರ್‌ಬಿಐ ನಿರ್ಬಂಧಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಲಕ್ಷಾಂತರ ಖಾತೆಗಳು ಸರಿಯಾದ ಗುರುತೆ ಇಲ್ಲದೆ ಅನಧಿಕೃತವಾಗಿ ರಚಿಸಲಾಗಿದೆ ಎಂದು ವರದಿಯಾಗಿದೆ.