ಭಾರತಕ್ಕೆ ಆಗಮಿಸಿ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಂಗ್ಲಾದೇಶ ದ ಜೆನಾಯ್‌ದೇಹ್-4 ಕ್ಷೇತ್ರದ ಸಂಸದ ಅನ್ವುರುಲ್ ಅಜೀಮ್ ಅನಾರ್ ಅವರ ಛಿದ್ರಗೊಂಡ ದೇಹವನ್ನು ಕೋಲ್ಕತ್ತಾ ಪೊಲೀಸರು ಹೊರತೆಗೆದಿದ್ದಾರೆ.
ಸಂಸದರನ್ನು ಮೊದಲೇ ಕೊಲೆ ಮಾಡಿರಬಹುದು ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಅನ್ವರ್ ಅವರ ದೇಹ ಛಿದ್ರಗೊಂಡಿದ್ದು,ಸಂಜೀವಾ ಗಾರ್ಡನ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಹೊರತೆಗೆಯಲಾಗಿದೆ. ಕಟ್ಟಡವು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರಿಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಗೃಹ ಸಚಿವರಾದ ಅಸ್ಸಾದುಜ್ಜಾಮಾನ್ ಖಾನ್, “ಭಾರತದ ಡಿಐಜಿ ಒಬ್ಬರನ್ನು ಉಲ್ಲೇಖಿಸಿ, ನಮ್ಮ ಪೊಲೀಸರು ಕೋಲ್ಕತ್ತಾದಲ್ಲಿ ಅಜೀಮ್ ಅವರ ದೇಹವನ್ನು ಹೊರತೆಗೆದಿದ್ದಾರೆ. ನಾವು ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇನ್ನಷ್ಟೆ ದೃಢೀಕರಿಸಬೇಕಿದೆ. ನಮ್ಮ ಐಜಿ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಎಲ್ಲವೂ ದೃಢೀಕರಿಸಿದ ಬಳಿಕ ನಾನು ಮಾಧ್ಯಮಕ್ಕೆ ಮಾಹಿತಿ ನೀಡುತ್ತೇನೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಕ್ಕೆ ಒಂದು ವರ್ಷ, ಸಮರ್ಥನೀಯವಲ್ಲದ ನಡೆ
ಮೃತ ಸಂಸದರ ಆಪ್ತ ಕಾರ್ಯದರ್ಶಿ ಅಬ್ದುರ್ ರಾಫ್, ಭಾರತ ಸರ್ಕಾರದಿಂದ ಸಂಸದರ ಮರಣದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಸ್ವೀಕರಿಸಿಲ್ಲ. ಆದರೆ ಸಂಸದರ ಕುಟುಂಬ ವೀಸಾ ಅನುಮತಿಗಾಗಿ ಢಾಕಾದಲ್ಲಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದ ಐಜಿ ಮಾತನಾಡಿ, ನಾವು ಕೋಲ್ಕತ್ತಾದ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು, ಮಾಧ್ಯಮಗಳ ವರದಿಯಂತೆ ಸಂಸದರ ಕೊಲೆಯ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ಸ್ವೀಕರಿಸಿಲ್ಲ ಎಂದು ಹೇಳಿದರು.
ಕೋಲ್ಕತ್ತಾದಲ್ಲಿರುವ ಬಾಂಗ್ಲಾದೇಶದ ಉಪ ರಾಯಭಾರಿಯ ಪ್ರಕಾರ ಸಂಸದ ಅನ್ವರ್ ಅವರು ವೈದ್ಯಕೀಯ ಚಿಕಿತ್ಸೆಗೆಂದು ಮೇ 13ರಂದು ಕೋಲ್ಕತ್ತಾಗೆ ಆಗಮಿಸಿದ ನಂತರ ನಾಪತ್ತೆಯಾಗಿದ್ದಾರೆ. ಪರಿಚಿತರನ್ನು ಭೇಟಿ ಮಾಡಲು ತೆರಳಿದ್ದವರು ವಾಪಸಾಗಿರಲಿಲ್ಲ. ನಂತರ ಅವರ ನಾಪತ್ತೆಯ ಬಗ್ಗೆ ಸಂಸದರ ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು.
