ತಾಪಮಾನ ಹೆಚ್ಚಳದಿಂದ ನಿರ್ಜಲೀಕರಣಕ್ಕೆ ತುತ್ತಾಗುತ್ತಿದ್ದ ಜನರಲ್ಲಿ ಅಕಾಲಿಕ ಮಳೆ ಮಂದಹಾಸ ಮೂಡಿಸಿತ್ತು. ಆದರೆ, ಮಳೆಯಾಯಿತೆಂದು ಖುಷಿಪಡುವ ವೇಳೆಗೆ, ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಾಗುತ್ತಿದೆ. ಡೆಂಘೀ ಜತೆಗೆ ವೆಸ್ಟ್ ನೈಲ್ ಜ್ವರದ ಆತಂಕ ಹೆಚ್ಚಳವಾಗಿದೆ.
ಬೇಸಿಗೆ ಮಳೆಯ ಬೆನ್ನಲ್ಲೇ, ಡೆಂಘೀ ಕಾಟ ಹೆಚ್ಚಾಗಿತ್ತು. ಅದರ ಜತೆಗೆ ಈಗ ಕ್ಯೂಲೆಕ್ಸ್ ಸೊಳ್ಳೆಗಳಿಂದ ವೆಸ್ಟ್ ನೈಲ್ ಜ್ವರದ ಆತಂಕ ಶುರುವಾಗಿದೆ.
ಈಗಾಗಲೇ ಪಕ್ಕದ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಕ್ಯೂಲೆಕ್ಸ್ ಸೊಳ್ಳೆಗಳಿಂದ ವೆಸ್ಟ್ ನೈಲ್ ಜ್ವರದ ಆತಂಕ ಶುರುವಾಗಿದೆ. ಈ ನಡುವೆ ಈಗ ಬೆಂಗಳೂರಿನಲ್ಲಿಯೂ ವೆಸ್ಟ್ ನೈಲ್ ಜ್ವರದ ಆತಂಕ ಶುರುವಾಗಿದೆ. ಕೇರಳ ಸೇರಿದಂತೆ ಪಕ್ಕದ ರಾಜ್ಯಗಳಲ್ಲಿ ವೆಸ್ಟ್ ನೈಲ್ ಜ್ವರದ ಪ್ರಕರಣಗಳು ಹೆಚ್ಚಳವಾಗಿವೆ ಎಂದು ವರದಿಯಾಗಿದೆ.
ಸಾಮಾನ್ಯ ಜ್ವರಕ್ಕೂ ವೆಸ್ಟ್ ನೈಲ್ ಜ್ವರಕ್ಕೂ ಕೊಂಚ ವ್ಯತ್ಯಾಸವಿದೆ. ಈ ಜ್ವರ ತೀವ್ರವಾಗಿ ಕಾಡುತ್ತದೆ ಮತ್ತು ವೈರಸ್ ಪೀಡಿತ ವ್ಯಕ್ತಿ ತೀವ್ರ ಅನಾರೋಗ್ಯಕ್ಕೊಳಗಾಗುತ್ತಾರೆ. ಆರಂಭದಲ್ಲಿ ಯಾವುದೇ ಲಕ್ಷಣ ಕಾಣುವುದಿಲ್ಲ. ಕ್ರಮೇಣ ತೀವ್ರ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ಮೂರ್ಛೆ ಹೋದಂತಾಗುವುದು ಸೇರಿದಂತೆ ಇನ್ನಿತರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಜ್ವರದ ತೀವ್ರತೆ ಹೆಚ್ಚಾದಂತೆ ಪಾರ್ಶ್ಚವಾಯು, ಕೋಮಾಗೆ ಹೋಗುವ ಸಾಧ್ಯತೆಯೂ ಇದೆ.
ವೆಸ್ಟ್ ನೈಲ್ ವೈರಸ್ ಎಂದರೇನು?
ವೆಸ್ಟ್ ನೈಲ್ ವೈರಸ್ (WNV) ಸೊಳ್ಳೆಯಿಂದ ಹರಡುವ, ಏಕ-ತಂತು ಆರ್‌ಎನ್‌ಎ ವೈರಸ್ ಆಗಿದೆ. ಇದು ಫ್ಲೇವಿವೈರಸ್ ಮತ್ತು ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಹಳದಿ ಜ್ವರವನ್ನು ಉಂಟುಮಾಡುವ ವೈರಸ್‌ಗಳಿಗೆ ಸಂಬಂಧಿಸಿದೆ. ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳಂತಹ ರೋಗ ಲಕ್ಷಣಗಳು ಕಂಡುಬರುತ್ತಿವೆ.
ವೆಸ್ಟ್ ನೈಲ್ ಜ್ವರದ ಲಕ್ಷಣ
80% ಸೋಂಕಿತ ಜನರಲ್ಲಿ ರೋಗವು ಲಕ್ಷಣರಹಿತವಾಗಿರುತ್ತದೆ. ಅಂದರೆ, ಆರಂಭದಲ್ಲಿ ವೆಸ್ಟ್ ನೈಲ್ ಜ್ವರದಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸುವುದಿಲ್ಲ. ಇದೇ ದೊಡ್ಡ ಸಮಸ್ಯೆಯಾಗಿದೆ. ಇನ್ನು ಕೆಲವರಲ್ಲಿ ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳಂತಹ ರೋಗ ಲಕ್ಷಣಗಳು ಕಂಡುಬರುತ್ತದೆ.
ಅಂಗಾಂಗ ಕಸಿ, ರಕ್ತ ವರ್ಗಾವಣೆ ಅಥವಾ ಗರ್ಭಾವಸ್ಥೆಯಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ತಾಯಿಯಿಂದ ಮಗುವಿಗೆ ಈ ವೈರಸ್ ಹರಡುವ ಸಾಧ್ಯತೆ ಇದ್ದು ಸೂಕ್ತ ಮುನ್ನೆಚ್ಚರಿಕೆ ಅಗತ್ಯ ಎಂದು ವೈದ್ಯರು ಹೇಳಿದ್ದಾರೆ.
ಹೀಗಾಗಿ, ಆದಷ್ಟು ಮನೆಯ ಸುತ್ತ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಿ. ಆದಷ್ಟು ಸೊಳ್ಳೆ ಬತ್ತಿ ಅಥವಾ ಸೊಳ್ಳೆ ಮನೆಯೊಳಗೆ ಪ್ರವೇಶಿಸಿದಂತೆ ನೋಡಿಕೊಳ್ಳಿ. ಇನ್ನು, ಆದಷ್ಟು ಬಿಸಿ ನೀರನ್ನೇ ಕುಡಿಯಿರಿ. ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ ಜ್ವರ ಬಾರದಂತೆ ಆರೋಗ್ಯ ರಕ್ಷಿಸಿಕೊಳ್ಳಿ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಕೆಲವು ಖಾಸಗಿ ಶಾಲೆಗಳು ಕಾರ್ಯಾರಂಭ
ವೆಸ್ಟ್ ನೈಲ್ ಜ್ವರ ಹೇಗೆ ಹರಡುತ್ತದೆ?
ಈ ಜ್ವರವು ಮೊದಲ ಬಾರಿಗೆ 1937ರಲ್ಲಿ ಆಫ್ರಿಕಾ ಖಂಡದ ಉಗಾಂಡಾ ದೇಶದ ಪಶ್ಚಿಮ (ವೆಸ್ಟ್) ನೈಲ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದರಿಂದ ಇದಕ್ಕೆ ವೆಸ್ಟ್ ನೈಲ್ ಜ್ವರ ಎಂಬ ಹೆಸರು ಬಂದಿದೆ. ಸೋಂಕಿತ ಸೊಳ್ಳೆಗಳ ಕಡಿತದ ಮೂಲಕ ಮನುಷ್ಯರಿಗೆ ಹರಡುತ್ತದೆ. ಪಕ್ಷಿಗಳು ಮತ್ತು ಪ್ರಾಣಿಗಳಿಗೂ ಸಹ ಈ ಸಾಂಕ್ರಾಮಿಕ ಸೋಂಕು ತಗುಲಬಹುದು.