ಉತ್ತರ ಪ್ರದೇಶದ ಬಸ್ತಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಮತ್ತೆ ತಮ್ಮ ದ್ವೇಷ ಭಾಷಣವನ್ನು ಮುಂದುವರೆಸಿದ್ದಾರೆ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವನ್ನು ‘ಪಾಕಿಸ್ತಾನದ ಹಿತೈಷಿಗಳು’ ಎಂದು ಕರೆದಿದ್ದಾರೆ. “ಈ ಪಕ್ಷಗಳು ಪಾಕಿಸ್ತಾನದ ಪರಮಾಣು ಶಕ್ತಿಯ ಬಗ್ಗೆ ಮಾತನಾಡುತ್ತಾ ಭಾರತದವನ್ನು ಹೆದರಿಸುತ್ತಿವೆ” ಎಂದು ಮೋದಿ ಆರೋಪಿಸಿದ್ದಾರೆ.
“ಒಂದು ಕಾಲದಲ್ಲಿ ನಮ್ಮತ್ತ ಕಣ್ಣು ಹಾಯಿಸುತ್ತಿದ್ದ ಪಾಕಿಸ್ತಾನ ಮುಗಿದಿದೆ. ಆದರೆ, ಅದರ ಬಗ್ಗೆ ಸಹಾನುಭೂತಿ ಹೊಂದಿರುವ ಎಸ್‌ಪಿ ಮತ್ತು ಕಾಂಗ್ರೆಸ್ ದೇಶವನ್ನು ಹೆದರಿಸುವಲ್ಲಿ ನಿರತವಾಗಿವೆ” ಎಂದು ಹೇಳಿದ್ದಾರೆ.
“ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎಂಬ ಕಾರಣಕ್ಕೆ ಭಯಪಡಬೇಕು ಎಂದು ಅವರು ಹೇಳುತ್ತಾರೆ. 56 ಇಂಚಿನ (ಎದೆ) ಏನೆಂದು ಅವರಿಗೆ ತಿಳಿದಿಲ್ಲವೇ? ಇದು ದುರ್ಬಲ ಕಾಂಗ್ರೆಸ್ ಸರ್ಕಾರವಲ್ಲ. ಮೋದಿಯ ಪ್ರಬಲ ಸರ್ಕಾರ” ಎಂದು ಮೋದಿ ಹೇಳಿದ್ದಾರೆ.
ಅದೇ ಇರಲಿ, 1965 ಮತ್ತು 1971ರಲ್ಲಿ ನಡೆದ ಭಾರತ-ಪಾಕಿಸ್ತಾನ ಯುದ್ಧ ನಡೆದಾಗ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಆ ಯುದ್ಧಗಳನ್ನು ಭಾರತ ಗೆದ್ದಿತ್ತು ಎಂಬುದು ಇಲ್ಲಿ ಸ್ಮರಣೀಯ.