ಪೊಲೀಸರಿಗೆ ಧಮ್ಕಿ ಹಾಕಿದ ಆರೋಪ ಪ್ರಕರಣದಲ್ಲಿ ಬಂಧಿಸಲೆಂದು ಹೋಗಿದ್ದಾಗ ಇಂದು ದಿನವಿಡೀ ನಡೆದ ಹೈಡ್ರಾಮಾದ ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರಾತ್ರಿ 9.30ರ ಸುಮಾರಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಅವರನ್ನು ಬಂಧನ ಮಾಡದೇ ಇರಲು ಪೊಲೀಸರು ನಿರ್ಧರಿಸಿದ್ದಾರೆ. ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ತಿಳಿಸಿ ತೆರಳಿದ್ದರಿಂದ, ರಾತ್ರಿ ಠಾಣೆಗೆ ಹಾಜರಾಗಿರುವುದಾಗಿ ತಿಳಿದುಬಂದಿದೆ.
ಶಾಸಕರ ಮನೆ ಮುಂದೆ ದಿನವಿಡೀ ಪೊಲೀಸರು ಕಾದರೂ ಕೂಡ ಬಿಜೆಪಿ ಕಾರ್ಯಕರ್ತರು, ಶಾಸಕರನ್ನು ವಶಕ್ಕೆ ಪಡೆಯಲು ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಠಾಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು.
ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ: ಶಾಸಕ ಹರೀಶ್ ಪೂಂಜಾ
ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಹರೀಶ್ ಪೂಂಜಾ, “ಅಕ್ರಮ ಕಲ್ಲಿನ ಕೋರೆ ಪ್ರಕರಣದಲ್ಲಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿಧರ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೂ ಶಶಿಧರ್ ಶೆಟ್ಟಿಗೂ ಯಾವುದೇ ಸಂಬಂಧವಿಲ್ಲ. ಉದ್ದೇಶಪೂರ್ವಕವಾಗಿ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಈ ಕಾರಣಕ್ಕೆ ನಾನು ಪ್ರತಿಭಟಿಸಿದ್ದೆ” ಎಂದು ತಿಳಿಸಿದರು.
“ಅಂದು ಅಧಿಕಾರಕ್ಕಾಗಿ ಸಿದ್ದರಾಮಯ್ಯನವರು ಬಿದರಿ ಅವರ ಕಾಲರ್ ಪಟ್ಟಿ ಹಿಡಿದಿದ್ದರು. ನಾನು ಅಧಿಕಾರಕ್ಕೆ ಪೊಲೀಸರ ವಿರುದ್ಧ ಮಾತನಾಡಿಲ್ಲ. ಕಾರ್ಯಕರ್ತನ ಪರವಾಗಿ ನಾನು ಮಾತನಾಡಿದ್ದೇನೆ. ಅಮಾಯಕನನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾನೆ ಎಂಬ ಕಾರಣಕ್ಕೆ ಕೇಸ್ ಹಾಕಲಾಗಿದೆ. ಕಾಂಗ್ರೆಸ್ನ ದ್ವೇಷದ ರಾಜಕಾರಣವನ್ನು ನಾವು ಸಹಿಸುವುದಿಲ್ಲ” ಎಂದು ಹೇಳಿದರು.
