ರಾಜ್ಯದ ವಿವಿಧ ಭಾಗಗಳಲ್ಲಿ ಭಾನುವಾರ ಸಂಜೆ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಕಲಬುರಗಿ, ಯಾದಗಿರಿ ಜಿಲ್ಲೆಯ ಪ್ರತ್ಯೇಕ ಕಡೆಗಳಲ್ಲಿ ಮಳೆಯ ಅವಾಂತರಕ್ಕೆ ಮೂರು ಜೀವ ಬಲಿಯಾದ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.
ವಾಡಿ ಪಟ್ಟಣದ ರೈಲ್ವೆ ಕಾಲೋನಿಯ ಏಕನಾಥ್ ವಾಘಮೂಡೆ (55), ಸತೀಶ್ ಶಳಕೆ (40) ಮೃತರು. ಗುಡುಗು ಸಹಿತ ಮಳೆ ಆರಂಭವಾದ ವೇಳೆ ರಕ್ಷಣೆಗಾಗಿ ಮರದಡಿ ನಿಂತಿದ್ದಾಗ ಸಿಡಿಲು ಬಡಿದು ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮೊಬೈಲ್ ಟವರ್ ರಾಡ್ ಕಳಚಿ ಬಿದ್ದು ವಿದ್ಯಾರ್ಥಿನಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದಲ್ಲಿ ನಡೆದಿದೆ. ಸುಮಾ ಗಾಯಗೊಂಡ ಯುವತಿ. ಈಕೆಯನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳೆ ಅವಾಂತರಕ್ಕೆ ನಾಲ್ಕು ವರ್ಷದ ಬಾಲಕಿ ಬಲಿ:
ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನಾದ್ಯಂತ ಭಾನುವಾರ ಸಂಜೆ ಗಾಳಿ, ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಯಿಂದಾಗಿ ನಾಲ್ಕು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ.
ಗುರುಮಠಕಲ್ ಪಟ್ಟಣದ ಉಪ್ಪಾರಗಡ್ಡಾ ಬಡಾವಣೆ ನಿವಾಸಿ ತಿಮ್ಮಪ್ಪಾ ಯಾದವ ಎಂಬುವರ ಪುತ್ರಿ ಮಾನಸಿ (4) ಗಾಳಿಯ ರಭಸಕ್ಕೆ ಮನೆಯ ತಗಡಿನ ಶೀಟ್ ಮೇಲೆಟ್ಟಿದ್ದ ಕಲ್ಲು ತಲೆ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನಪ್ಪಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಮೋದಿ ಆತ್ಮಸ್ಥೈರ್ಯ ಕಳೆದುಕೊಂಡು ಭಾಷಣ ಮಾಡುವಾಗ ತೊದಲುತ್ತಿದ್ದಾರೆ: ಅಖಿಲೇಶ್ ಯಾದವ್
ಮೃತ ಬಾಲಕಿ ಮನೆಗೆ ತಹಸೀಲ್ದಾರ್ ಶ್ರೀನಿವಾಸ ಚಾಪೆಲ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.