ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು ವಾತಾವರಣ ತಂಪಾಗಿದೆ. ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ, ಈ ಮೇ ತಿಂಗಳ ಕೊನೆಯ ವಾರದಲ್ಲಿ ಮುಂಗಾರು ಮಳೆ ರಾಜ್ಯಕ್ಕೆ ಆಗಮನವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸದ್ಯ ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ನೈರುತ್ಯ ಮುಂಗಾರು ಮಳೆ ಕೇರಳದ ಮೂಲಕ ರಾಜ್ಯ ಪ್ರವೇಶಿಸಲಿದೆ. ಮೇ 31ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆಗಳಿವೆ. ಈ ಬಾರಿ ಉತ್ತಮವಾದ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಮಳೆ ಪ್ರವೇಶಿಸುವ ಹಿನ್ನೆಲೆ, ರೈತರಲ್ಲಿ ಸಂತಸ ಮನೆ ಮಾಡಿದೆ. ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದ್ದು, ಮೇ ತಿಂಗಳ ಕೊನೆ ವಾರದಲ್ಲಿ ಕೇರಳ ಕರಾವಳಿಗೆ ಆಗಮಿಸಲಿದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಪ್ರವೇಶಿಸಲಿದೆ. ಅಲ್ಲದೆ, ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಚಂಡಮಾರುತಕ್ಕೆ ಕಾರಣವಾಗುವ ವಾಯುಭಾರ ಕುಸಿತ ಉಂಟಾದರೆ, ಅದು ಮಾನ್ಸೂನ್ ಸಮಯದ ಮೇಲೆ ಪರಿಣಾಮ ಬೀರಬಹುದು. ಮುಂಗಾರು ಆಗಮನವು ಮುಂದಕ್ಕೆ ಹೋಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ನೈರುತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ವ್ಯಾಪಿಸಿದೆ. ಮೇ 31ಕ್ಕೆ ನೈರುತ್ಯ ಮುಂಗಾರು ಕೇರಳ ಕರಾವಳಿಗೆ ಆಗಮಿಸುವ ನಿರೀಕ್ಷೆ ಇದೆ. ಅಲ್ಲಿಂದ ಕರ್ನಾಟಕ ಕರಾವಳಿಗೆ ಜೂನ್ 1 ಅಥವಾ 2ರಂದು ಪ್ರವೇಶಿಸಬಹುದು. ಕರಾವಳಿಯಿಂದ ಕ್ರಮೇಣ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಪ್ರದೇಶಗಳಿಗೆ ವ್ಯಾಪಿಸಲಿದೆ ಎಂದು ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಮುಂದಿನ ಒಂದು ವಾರ ಮಳೆ ಸಾಧ್ಯತೆ; ಹವಾಮಾನ ಇಲಾಖೆ
ಆದರೆ, ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ರೆಮಲ್’ ಚಂಡಮಾರುತವು ಮಾನ್ಸೂನ್ ಆಗಮನದ ಮೇಲೆ ಕೊಂಚ ಪರಿಣಾಮ ಬೀರುವ ಸಾಧ್ಯತೆಯಿದೆ. ನೈಋುತ್ಯ ಮುಂಗಾರು ಮಾರುತ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರಗತಿ ಸಾಧಿಸಿದ್ದು, ಕೇರಳದತ್ತ ಸಾಗಿದೆ.
ಮೇ 31ರವರೆಗೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ, ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆಯನ್ನು ನೀಡಿದೆ.
2023ರಲ್ಲಿ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಸಾಮಾನ್ಯವಾಗಿ 831.8 ಮಿಮೀ ಮಳೆಯಾಗಬೇಕಿತ್ತು. ಆದರೆ, 678.4 ಮಿಮೀ ಮಳೆಯಾಗಿದೆ. ಇದರೊಂದಿಗೆ 18%ರಷ್ಟು ಮಳೆ ಕೊರತೆಯಾಗಿತ್ತು.
ಈಗಾಗಲೇ ಈ ವರ್ಷ ಮಾರ್ಚ್ 1ರಿಂದ ಮೇ 24ರವರೆಗೆ ರಾಜ್ಯದಲ್ಲಿ 120.7ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ (94 ಮಿ.ಮೀ) ಹೆಚ್ಚಾಗಿದೆ. ಪೂರ್ವ ಮುಂಗಾರು ಚುರುಕುಗೊಂಡಿದ್ದರಿಂದ ಈ ಬಾರಿ ಉತ್ತಮ ಮುಂಗಾರು ಮಳೆಯಾಗುವ ಸಾಧ್ಯತೆಗಳಿವೆ. ಏಪ್ರಿಲ್ ತಿಂಗಳೂ ಶೂನ್ಯ ಮಳೆಯನ್ನು ದಾಖಲಿಸಿದೆ. ಆದರೆ, ಮೇ ತಿಂಗಳು ಇದಕ್ಕೆ ವಿರುದ್ಧವಾಗಿ ವಾಡಿಕೆಗಿಂತ ಹೆಚ್ಚಾಗಿ ಮಳೆಯಾಗಿದೆ.