ಪಾಯಲ್ ಮುಖ್ಯವಾಹಿನಿಯ ನಟ, ನಟಿ, ನಿರ್ದೇಶಕರಂತೆ ಪ್ರಭುತ್ವದ ಪಾದಕ್ಕೆ ತನ್ನ ಪ್ರತಿಷ್ಠೆಯನ್ನು ಒಪ್ಪಿಸಲಿಲ್ಲ. ಹಲ್ಲು ಕಿರಿಯುತ್ತಾ ನಾಯಕನ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲಿಲ್ಲ. ದಮನಿತರ ಕುರಿತಾದ ಚಿತ್ರಗಳನ್ನು ನಿರ್ದೇಶಿಸುತ್ತಲೇ ಸಾಗಿದಳು.
ಈ ಬಾರಿಯ ಪ್ರತಿಷ್ಠಿತ ಕಾನ್ಸ್ ಚಲನಚಿತ್ರೋತ್ಸವ ನಮ್ಮೆಲ್ಲರ ನೆನಪಿನಲ್ಲಿ ಉಳಿಯಲಿದೆ. ಪಾಯಲ್ ಕಪಾಡಿಯಾರವರ “ಅಲ್ ವಿ ಇಮ್ಯಾಜಿನ್ ಆಸ್ ಲೈಟ್” ದ ಗ್ರ್ಯಾಂಡ್ ಪ್ರಿ ಪ್ರಶಸ್ತಿ ಗೆದ್ದರೆ, ಮೈಸೂರಿನ ಚಿದಾನಂದ ನಾಯ್ಕರವರ “ಸೂರ್ಯಕಾಂತಿ ಹೂಗೆ ಮೊದಲು ಗೊತ್ತಾಗಿದ್ದು” ಚಿತ್ರ “ಅತ್ಯುತ್ತಮ ಕಿರುಚಿತ್ರ” ಪ್ರಶಸ್ತಿ ತನ್ನದಾಗಿಸಿಕೊಂಡಿತು. ಜಗತ್ತಿನ ಸಾವಿರಾರು ಚಲನಚಿತ್ರಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುವಾಗ ಮೊದಲ ಸ್ಥಾನ ದಕ್ಕಿಸಿಕೊಳ್ಳುವುದು ಸುಲಭದ ಮಾತಲ್ಲ.
ಇದು ಭಾರತದ ಸಾಧನೆಯೆಂದು ಬೆನ್ನುತಟ್ಟಿಕೊಳ್ಳುವುದು ಬೇಡ. ಯಾಕೆ ಅಂತೀರಾ? ಒಂದು ಸಣ್ಣ ಕಥೆ ಹೇಳ್ತೀನಿ ಕೇಳಿ. ಗಿರೀಶ್ ಕಾಸರವಳ್ಳಿ, ನಾಸಿರುದ್ದೀನ್ ಷಾ, ಓಂ ಪುರಿ, ಸಂತೋಷ್ ಶಿವನ್, ಷಾಜಿ ಕರುಣ್, ಜಯಾ ಬಚ್ಚನ್, ವಿಧು ವಿನೋದ್ ಚೋಪ್ರಾರಂತಹ ಪ್ರತಿಭೆಯನ್ನು ಬೆಳೆಸಿದ್ದು ಪುಣೆಯ ಪ್ರಸಿದ್ಧ ಕಲಾ ಶಾಲೆಯಾದ ಎಫ್‌ಟಿಐಐ- ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ. ಪಾಯಲ್ ಕಪಾಡಿಯಾ ಮತ್ತು ಚಿದಾನಂದರವರು ಕೂಡ ಈ ಕಲಾ ಶಾಲೆಗೆ ಸೇರಿದವರೇ! ಈ ಕಲಾ ಶಾಲೆ ತನ್ನದೇ ಆದ ಘನತೆ ಮತ್ತು ಖ್ಯಾತಿಯನ್ನು ಉಳಿಸಿಕೊಂಡಿದೆ. ಕಲಾ ಶಾಲೆಗೆ ಅಗತ್ಯವಾಗಿ ಬೇಕಾದ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆ ಈ ಶಾಲೆಗಿತ್ತು. ಆದರೆ ಎಲ್ಲವೂ ಬದಲಾಗುವುದರಲಿತ್ತು.
2015ರಲ್ಲಿ ಕೇಂದ್ರ ಸರ್ಕಾರ ಗಜೇಂದ್ರ ಚೌಹಾಣ್ (ರಾಜಕಾರಣಿ, ಮಹಾಭಾರತ ಧಾರಾವಾಹಿಯ ಅರ್ಜುನನ ಪಾತ್ರಧಾರಿ- ಅತ್ಯಂತ ಕಳಪೆ ನಟ ಅನ್ನುವುದು ನನ್ನ ಅನಿಸಿಕೆ) ಅವರನ್ನು ಪುಣೆ ಕಲಾ ಶಾಲೆಯ ಚೇರ್ ಪರ್ಸನ್ ಆಗಿ ನೇಮಿಸಿತು. ಒಂದು ವಿಶ್ವಖ್ಯಾತಿಯ ಕಲಾ ಶಾಲೆಯನ್ನು ಮುನ್ನಡೆಸಲು ಬೇಕಾದ ಅನುಭವವಾಗಲಿ, ವ್ಯಕ್ತಿತ್ವವಾಗಲಿ, ದೂರದೃಷ್ಟಿಯಾಗಲಿ ಗಜೇಂದ್ರರವರಿಗೆ ಇರಲಿಲ್ಲ. FTII ಅನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವುದೊಂದೇ ಆತನ ಗುರಿಯಾಗಿತ್ತು. ದೆಹಲಿಯ ದೊರೆಯ ಆಜ್ಞೆಯನ್ನಷ್ಟೇ ಆತ ಪಾಲಿಸುತ್ತಿದ್ದ.
ಆ ದಿನಗಳಲ್ಲಿ ಪಾಯಲ್ ಕಪಾಡಿಯಾ ಐತಿಹಾಸಿಕ 139 ದಿನಗಳ ಹೋರಾಟ ನಡೆಸಿದ್ದರು. ಅವರ ಮೇಲೆ FIR ದಾಖಲಿಸಲಾಯಿತು, ಆಕೆಯ ವಿದ್ಯಾರ್ಥಿವೇತನ ನಿಲ್ಲಿಸಲಾಯಿತು. ಪ್ರತಿರೋಧ, ಅಸಮ್ಮತಿ, ಭಿನ್ನಾಭಿಪ್ರಾಯ ಮತ್ತು ಕಲೆ ಅತ್ಯಂತ ಕಠಿಣ ಹಾದಿಗಳು. ಆದರೆ ಪಾಯಲ್ ಆ ಹಾದಿಯನ್ನೇ ಆಯ್ದುಕೊಂಡರು. ಮುಖ್ಯವಾಹಿನಿಯ ನಟ, ನಟಿ, ನಿರ್ದೇಶಕರಂತೆ ಪ್ರಭುತ್ವದ ಪಾದಕ್ಕೆ ತನ್ನ ಪ್ರತಿಷ್ಠೆಯನ್ನು ಒಪ್ಪಿಸಲಿಲ್ಲ. ಹಲ್ಲು ಕಿರಿಯುತ್ತಾ ನಾಯಕನ ಜೊತೆಗೆ ಸೆಲ್ಫಿ ತೆಗೆಸಿಕೊಳ್ಳಲಿಲ್ಲ. ದಮನಿತರ ಕುರಿತಾದ ಚಿತ್ರಗಳನ್ನು ನಿರ್ದೇಶಿಸುತ್ತಲೇ ಸಾಗಿದಳು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?
2017ರಲ್ಲಿ ಆಕೆ ನಿರ್ದೇಶಿಸಿದ ಚಲನಚಿತ್ರ ಕಾನ್ಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಾಗ, ಅಲ್ಲಿಗೆ ಆಕೆ ತೆರಳಲು ಸಹಾಯ ಮಾಡಿದ್ದು FTII ನಿರ್ದೇಶಕ ಭೂಪೇಂದ್ರ. ನೀಡಿದ ಈ ಬೆಂಬಲಕ್ಕಾಗಿ ಭೂಪೇಂದ್ರ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು! 2021ರಲ್ಲಿ ಪಾಯಲ್ ಕಪಾಡಿಯಾರವರ ಸಾಕ್ಷ್ಯಚಿತ್ರ “ಅ ನೈಟ್ ಆಫ್ ನೋಯಿಂಗ್ ನಥಿಂಗ್” ಗೋಲ್ಡನ್ ಐ ಪ್ರಶಸ್ತಿ ಗೆದ್ದಿತು. ಸರ್ಕಾರ ನೀಡಿದ ಕಿರುಕುಳಕ್ಕೆ ಕಪಾಡಿಯಾ ಕುಗ್ಗಲಿಲ್ಲ. ಸಾಧನೆಯೊಂದೇ ಅವಳ ಉತ್ತರವಾಗಿತ್ತು. ಈ ವರುಷದ ದ ಗ್ರ್ಯಾಂಡ್ ಪ್ರಿ ಸಾಧನೆ ಹಿಂದಿನ ಎಲ್ಲಾ ಸಾಧನೆಗಳನ್ನು ಮೀರಿಸುವಂಥದ್ದು ಎಂದರೆ ತಪ್ಪಾಗಲಾರದು.
ಕಾನ್ಸ್ ಪ್ರಶಸ್ತಿ ಕೈಯಲ್ಲಿಡಿದು ಭಾರತಕ್ಕೆ ಹಿಂದಿರುಗಿದ ಮೇಲೆ ಬಹುಶಃ ಪಾಯಲ್ ಕೋರ್ಟ್ ಕಚೇರಿ ಮೊಕದ್ದಮೆ ಅಂತ ಮತ್ತೆ ಓಡಾಡಬೇಕಾಗಬಹುದು. ಮುಖ್ಯವಾಹಿನಿಯ ನಟರು ನಿರ್ದೇಶಕರು ಎಂದಿಗೂ ಪ್ರಭುತ್ವವನ್ನು ಬೆಂಬಲಿಸುವವರೆ ಆಗಿರುವುದರಿಂದ ಕಪಿಲ್ ಶರ್ಮ ಶೋನಲ್ಲಿ ಜೋಕರ್ ಕೆಲ್ಸ ಮಾಡುತ್ತಿದ್ದಾರೆ. ಅವರಿಗೆ ಈ ಅಪೂರ್ವ ಸಾಧನೆಯನ್ನು ಹೊಗಳಲು ಬಾಯಿಲ್ಲ. ನೈತಿಕ ಬೆಂಬಲ ಸೂಚಿಸುವ ಎದೆಗಾರಿಕೆ ಅವರಿಗಿಲ್ಲ. ಕಾಶ್ಮೀರಿ ಫೈಲ್ಸ್, ಕೇರಳ ಸ್ಟೋರಿ, ಊರಿಯಂತಹ ಚಿತ್ರಗಳ ಕುರಿತು ದಿನಗಟ್ಟಲೆ ಕಾರ್ಯಕ್ರಮ ಪ್ರಸಾರ ಮಾಡಿದ ಭಾರತೀಯ ವಾರ್ತಾ ಚಾನೆಲ್‌ಗಳಿಗೆ ಕಪಾಡಿಯಾ ಸಾಧನೆ ಕಾಣುವುದಿಲ್ಲ.
ಅಚ್ಚರಿ ಎಂಬಂತೆ “ಪಾಯಲ್‌ರವರ ಈ ಐತಿಹಾಸಿಕ ಸಾಧನೆಯ ಬಗ್ಗೆ ಭಾರತಕ್ಕೆ ಹೆಮ್ಮೆಯಿದೆ. FTII ಹಳೆಯ ವಿದ್ಯಾರ್ಥಿಯಾದ ಇವರ ಸೃಜನಶೀಲತೆ ಮುಂದಿನ ಪೀಳಿಗೆಯ ಕತೆಗಾರರಿಗೆ ಮಾದರಿಯಾಗಲಿದೆ” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ!

ಹರೀಶ್ ಗಂಗಾಧರ್
ಲೇಖಕ, ಪ್ರಾಧ್ಯಾಪಕ