12ನೇ ಶತಮಾನದಿಂದ ಬಂದ ಬಸವ ದರ್ಶನ ಮುಂದಿನ ಸಾವಿರ ವರ್ಷಗಳ ನಂತರವೂ ಹೊಸದಾಗಿ ಕಾಣುತ್ತದೆ. ಬಸವ ಚಿಂತನೆಯನ್ನು ಜಾಗತಿಕ ನೆಲೆಗೆ ತಲುಪಿಸುವುದು ಇಂದಿನ ತುರ್ತು ಕಾರ್ಯವಾಗಿದೆ ಎಂದು ಚಿಂತಕ ಆರ್.ಕೆ.ಹುಡುಗಿ ಹೇಳಿದರು.
ಹುಲಸೂರ ಪಟ್ಟಣದ ಅಲ್ಲಮಪ್ರಭು ಮಠದ ಆವರಣದಲ್ಲಿ ಬಸವ ಜಯಂತಿ ಸಮಿತಿಯಿಂದ ಆಯೋಜಿಸಿದ್ದ ʼಬಸವ ಜಯಂತಿʼ ಸಮಾರಂಭದಲ್ಲಿ ಮಾತನಾಡಿ, “ಸರ್ವಸಮಾನತೆ, ಸ್ವಾಭಿಮಾನ, ಸ್ತ್ರೀ-ಸಮಾನತೆ, ಆರ್ಥಿಕ ಮತ್ತು ಸಾಂಸ್ಕೃತಿಕ ಸಮಾನತೆಯೇ ಬಸವ ದರ್ಶನವಾಗಿದೆ” ಎಂದರು.
“ಶ್ರಮಿಕ ವರ್ಗಕ್ಕೆ ಅಕ್ಷರ ಕಲಿಸಿ, ಸ್ಥಾಪಿತ ತಾತ್ವಿಕ ಬುನಾದಿಗೆ ಪ್ರಶ್ನಿಸುವ ಮನೋಭಾವ ಹುಟ್ಟು ಹಾಕಿದ್ದಕ್ಕೆ ಕ್ರಾಂತಿ ನಡೆಯಿತು. ಒಂದು ಭುಜದ ಮೇಲೆ ಬುದ್ಧ, ಮತ್ತೊಂದು ಭುಜದ ಮೇಲೆ ಬಸವಣ್ಣ, ಎದೆಯೊಳಗೆ ಅಂಬೇಡ್ಕರ್ ಅವರನ್ನು ಇರಿಸಿಕೊಂಡು ಕಣ್ಣೊಳಗೆ ವೈಜ್ಞಾನಿಕ, ಸಮಾಜವಾದದ ಬೆಳಕಿನಲ್ಲಿ ನಾವೆಲ್ಲರೂ ಮುನ್ನಡೆಯಬೇಕು” ಎಂದು ಹೇಳಿದರು.
“ಬಸವಣ್ಣ ಕ್ರಾಂತಿಕಾರಿ ಚಿಂತಕ ಮತ್ತು ಸಾಂಸ್ಕೃತಿಕ ನಾಯಕರಾಗಿದ್ದಾರೆ. ಜಗತ್ತಿನ ಎಲ್ಲ ಕ್ರಾಂತಿಗಳಿಗಿಂತ ಇದು ಏಕೆ ಭಿನ್ನವಾಗಿದೆ ಎಂದರೆ ದುಡಿಯುವ ಜನರಿಗೆ ಅಕ್ಷರ ಮತ್ತು ಅರಿವು ನೀಡಿದ ಚಳುವಳಿಯಾಗಿತ್ತು. ಬದುಕಿನ ಎಲ್ಲ ಕ್ಷೇತ್ರಗಳ ಬದಲಾವಣೆಗೆ ನಾಂದಿ ಹಾಡಿದ ಕ್ರಾಂತಿಯಾಗಿತ್ತು” ಎಂದು ವಿಶ್ಲೇಷಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಬಸವರಾಜ ಧನ್ನೂರ ಮಾತನಾಡಿ, “ಬಸವಾದಿ ಶರಣರು ಮೌಢ್ಯ, ಕಂದಾಚಾರ ವಿರೋಧಿಸಿದರು. ದೇವರ ಹೆಸರಿನಲ್ಲಿ ನಡೆಯುವ ಅನಿಷ್ಥ ಪದ್ಧತಿ ಹಾಗೂ ಶೋಷಣೆಯನ್ನು ಕಠೋರವಾಗಿ ಖಂಡಿಸಿದರು. ದೇವಾಲಯವನ್ನು ದೇಹಕ್ಕೆ ಸ್ಥಳಾಂತರಿಸಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ಬಸವಾದಿ ಶರಣರು ಸಮ-ಸಮಾಜದ ಕನಸು ಹೊತ್ತು ಬದುಕಿನುದ್ದಕ್ಕೂ ಹೋರಾಡಿ ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸಿದರು” ಎಂದು ನುಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರು ಮಾತನಾಡಿ, “ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಜಾತಿ, ವರ್ಗ, ವರ್ಣ ರಹಿತ ಸಮಾಜ ನಿರ್ಮಿಸುವುದು ಬಸವಣ್ಣ ಹಾಗೂ ಸಮಕಾಲೀನ ಶರಣರ ಘನವಾದ ಆಶಯವಾಗಿತ್ತು. ಬಸವಾದಿ ಶರಣರ ಚಿಂತನೆಗಳು ಸರ್ವಕಾಲೀಕ ಸತ್ಯವಾಗಿವೆ” ಎಂದರು.
ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮಾತನಾಡಿ, “ಬಸವಣ್ಣನವರಿಂದ ನಮ್ಮ ನಾಡು ಜಗತ್ತಿಗೆ ಪರಿಚಿತವಾಗಿದೆ. ಶರಣರ ಚಿಂತನೆ ಮೈಗೂಡಿಸಿಕೊಂಡರೆ ಪ್ರತಿಯೊಬ್ಬರ ಬದುಕಿನಲ್ಲಿ ಅಗಾಧವಾದ ಬದಲಾವಣೆಯಾಗುತ್ತದೆ. ಲಿಂಗಾಯತ ಚಳವಳಿಗೆ ನಾನು ಸದಾ ಬೆಂಬಲಿಸುವೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಧರ್ಮಾಧಿಕಾರಿ’ಗೆ ಅಡ್ಡಬಿದ್ದ ಸರ್ಕಾರ ಸಾರುತ್ತಿರುವ ಸಂದೇಶವೇನು?
ಸಮಾರಂಭದಲ್ಲಿ ಹುಲಸೂರಿನ ಡಾ. ಶಿವಾನಂದ ಮಹಾಸ್ವಾಮಿಗಳು ನೇತ್ರತ್ವ ವಹಿಸಿ ಮಾತನಾಡಿದರು. ಶರಣ ಶಿವಾನಂದ ಹೈಬತ್‌ಪುರೆ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಜಿಪಂ ಸದಸ್ಯ ಮಲ್ಲಿಕಾರ್ಜುನ ಧಬಾಲೆ, ಸುಧೀರ ಕಾಡಾದಿ, ಶಾಲುಬಾಯಿ ಬನಸೂಡೆ, ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಕಲಬುರ್ಗಿಯ ಧನರಾಜ ತಾಂಬೊಳೆ, ರೇಣುಕಾ ಸಿಂಗೆ ಗ್ರಾಪಂ ಉಪಾಧ್ಯಕ್ಷ ಸರಸ್ವತಿ ಬಾಬುರಾವ ಬಾಲಕುಂದೆ ಸೇರಿದಂತೆ ಪ್ರಮುಖರಾದ ಬಸವರಾಜ ಮುಕ್ತಾ, ಪ್ರವೀಣ ಕಾಡಾದಿ, ಶಿವರಾಜ ಖಪಲೆ, ಆಕಾಶ ಖಂಡಾಳೆ, ಸಚೀನ ಕವಟೆ, ಲೊಕೇಶ ಧಬಾಲೆ, ಶಿವರಾಜ ಚಾಕೋತೆ, ಸಚೀನ ವಗ್ಗೆ, ಲವೀತ ಧರಮಾಣೆ ಹಾಗೂ ಅನೇಕರಿದ್ದರು.