ಕಳೆದ ಎರಡು ವರ್ಷಗಳಲ್ಲಿ ಕೇರಳದಲ್ಲಿ 519 ಜನರು ಮಾನವ ಕಳ್ಳಸಾಗಾಣಿಕೆಗೆ ಬಲಿಯಾಗಿದ್ದಾರೆ. ಅವರಲ್ಲಿ 236 ಮಕ್ಕಳು, 234 ಮಹಿಳೆಯರು ಹಾಗೂ 49 ಪುರುಷರು ಎಂದು ಪೊಲೀಸ್ ಅಂಕಿಅಂಶಗಳು ವಿವರಿಸಿವೆ.
2022 ಮತ್ತು 2023ರ ಪೊಲೀಸ್ ಮಾನವ ಕಳ್ಳಸಾಗಣೆ ವಿರೋಧಿ ಘಟಕದ ಅಧಿಕೃತ ಅಂಕಿಅಂಶಗಳ ಪ್ರಕಾರ, ಕೇರಳದಲ್ಲಿ ಎರಡು ವರ್ಷಗಳಲ್ಲಿ 257 ಮಾನವ ಕಳ್ಳಸಾಗಣೆ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಕಾಸರಗೋಡಿನಲ್ಲಿ ಅತಿ ಹೆಚ್ಚು 75 ಪ್ರಕರಣಗಳು ದಾಖಲಾಗಿವೆ.
2022ರಲ್ಲಿ 152 ಪ್ರಕರಣಗಳು ದಾಖಲಾಗಿದ್ದರೆ, 2023ರಲ್ಲಿ 105 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 149 ಮಹಿಳೆಯರು ಮತ್ತು 143 ಮಕ್ಕಳು ಹಾಗೂ 2023ರಲ್ಲಿ 85 ಮಹಿಳೆಯರು ಮತ್ತು 93 ಮಕ್ಕಳು ಮಾನವ ಕಳ್ಳಸಾಗಾಣಿಕೆಗೆ ಬಲಿಯಾಗಿದ್ದಾರೆ.
ಅದರಲ್ಲೂ, ಕಾಸರಗೋಡು ಜಿಲ್ಲೆಯಲ್ಲೇ ಅತೀ ಹೆಚ್ಚು 137 ಜನರು (22 ಪುರುಷರು, 53 ಮಹಿಳೆಯರು ಮತ್ತು 62 ಮಕ್ಕಳು) ಎರಡು ವರ್ಷಗಳಲ್ಲಿ ಕಳ್ಳಸಾಗಣೆಗೆ ಬಲಿಯಾಗಿದ್ದಾರೆ. ಎರಡು ವರ್ಷಗಳ ಅಂಕಿಅಂಶಗಳ ಪ್ರಕಾರ, 49 ಪ್ರಕರಣಗಳೊಂದಿಗೆ ಇಡುಕ್ಕಿ ಎರಡನೇ ಸ್ಥಾನದಲ್ಲಿದ್ದರೆ, 45 ಪ್ರಕರಣಗಳೊಂದಿಗೆ ಎರ್ನಾಕುಲಂ ಮೂರನೇ ಸ್ಥಾನದಲ್ಲಿದೆ.
“ಈ ಪ್ರಕರಣಗಳು ಇತರ ದೇಶಗಳಿಗೆ ಜನರನ್ನು ಕಳ್ಳಸಾಗಣೆ ಮಾಡುವುದಕ್ಕೆ ಸಂಬಂಧಿಸಿಲ್ಲ. ಪೋಷಕರ ಒಪ್ಪಿಗೆಯಿಲ್ಲದೆ ಅಪ್ರಾಪ್ತರನ್ನು ಕರೆದೊಯ್ಯುವ ಅಪಹರಣ ಪ್ರಕರಣಗಳು ಮತ್ತು ಅತ್ಯಾಚಾರ ಪ್ರಕರಣಗಳನ್ನು ಮಾನವ ಕಳ್ಳಸಾಗಣೆ ವಿಭಾಗದ ಅಡಿಯಲ್ಲಿ ಪೊಲೀಸರು ದಾಖಲಿಸಿದ್ದಾರೆ” ಎಂದು ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಸ್ಥ ಪಿ ಬಿಜೋಯ್ ಹೇಳಿದರು.
“ಇನ್ನು ಪತ್ತೆ ಆಗದಿರುವ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯನ್ನು ಪಟ್ಟಿಗೆ ಸೇರಿಸಿದರೆ, ಕಳ್ಳಸಾಗಾಣಿಕೆ ಪ್ರಕರಣಗಳ ಸಂಖ್ಯೆ ಹೆಚ್ಚಲಿದೆ”ಎಂದು ನಿವೃತ್ತ ಡಿಜಿಪಿ ಹಾಗೂ ವಿಶ್ವಸಂಸ್ಥೆಯ ಡ್ರಗ್ಸ್ ಆ್ಯಂಡ್ ಕ್ರೈಂ (ಯುಎನ್‌ಒಡಿಸಿ) ಕಚೇರಿಯ ಮಾಜಿ ಮಾನವ ಕಳ್ಳಸಾಗಣೆ ತಡೆ ಯೋಜನೆಯ ಸಂಯೋಜಕ ಪಿ ಎಂ ನಾಯರ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ 46 ಮಹಿಳೆಯರು ಸೇರಿದಂತೆ 415 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. 2022ರಲ್ಲಿ 295 ಮಂದಿಯನ್ನು ಬಂಧಿಸಿದ್ದರೆ, 2023ರಲ್ಲಿ 116 ಮಂದಿಯನ್ನು ಬಂಧಿಸಲಾಗಿದೆ. ಕಾಸರಗೋಡಿನಲ್ಲಿ ಎರಡು ವರ್ಷಗಳಲ್ಲಿ 106 ಮಂದಿಯನ್ನು ಬಂಧಿಸಲಾಗಿದ್ದು, ಇವರಲ್ಲಿ ಐವರು ಮಹಿಳೆಯರಿದ್ದಾರೆ.