ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ದಲಿತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಬಲ ಜಾತಿಯ ಯುವಕರ ಗುಂಪು ಸಂತ್ರಸ್ತ ಯುವತಿಯ ಸಹೋದರನನ್ನು ಥಳಿಸಿ ಹತ್ಯೆಗೈದಿತ್ತು. ಇದೀಗ, ಅದೇ ಗುಂಪು ಆಕೆಯ ಚಿಕ್ಕಪ್ಪನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಿದೆ ಎಂದು ಆರೋಪಿಸಲಾಗಿದೆ. ತನ್ನ ಚಿಕ್ಕಪ್ಪನ ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್‌ನಿಂದ ಬಿದ್ದು ಸಂತ್ರಸ್ತ ಯುವತಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.
ಆಕೆಯ ಸಾವನ್ನು ಖಂಡಿಸಿ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಬಿಜೆಪಿ ಸರ್ಕಾರವು ‘ದಲಿತ ವಿರೋಧಿ’ ಧೋರಣೆ ಹೊಂದಿದೆ ಎಂದು ಆರೋಪಿಸಿದೆ. ಸಾಗರ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ವಜಾಗೊಳಿಸುವಂತೆ ಆಗ್ರಹಿಸಿದೆ.
2019ರಲ್ಲಿ ಯುವತಿಯ ಮೇಲೆ ಪ್ರಬಲ ಜಾತಿಯ ಯುವಕರ ಗುಂಪು ದೌರ್ಜನ್ಯ ಎಸಗಿತ್ತು. ಆಗ, ಪ್ರಕರಣವೂ ದಾಖಲಾಗಿತ್ತು. ಆರೋಪಿಗಳು ಪ್ರಕರಣವನ್ನು ಹಿಂಪಡೆಯಲು ಯುವತಿಯ ಮನವೊಲಿಸುವಂತೆ ಆಕೆಯ ಸಹೋದರನಿಗೆ ಒತ್ತಡ ಹಾಕುತ್ತಿದ್ದರು. ಇದೇ ಕಾರಣಕ್ಕೆ, ಕಳೆದ ವರ್ಷ ಆಗಸ್ಟ್‌ನಲ್ಲಿ ಯುವತಿಯ ಸಹೋದರನನ್ನು ಆರೋಪಿಗಳ ಗುಂಪು ಹತ್ಯೆಗೈದು, ಆಕೆಯ ಮನೆಯ ಕೆಲವು ಭಾಗಗಳನ್ನು ಹಾನಿಗೊಳಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
“ಖುರೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಯುವತಿಯ ಚಿಕ್ಕಪ್ಪ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಶನಿವಾರ ಅವರನ್ನು ಹೊಡೆದು ಕೊಂದಿರುವ ಸಾದ್ಯತೆಗಳಿವೆ” ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆಯ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳುವ ಒತ್ತಡದಿಂದ ಚಿಕ್ಕಪ್ಪನನ್ನು ಕೊಲ್ಲಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಸಿನ್ಹಾ, “ತನಿಖೆಯ ಸಮಯದಲ್ಲಿ ಎಲ್ಲ ಸತ್ಯಗಳು ಹೊರಬರುತ್ತವೆ” ಎಂದು ಹೇಳಿದ್ದಾರೆ.
“ಪ್ರಕರಣವನ್ನು ಹಿಂಪಡೆಯುವಂತೆ ಆರೋಪಿಗಳು ಯುವತಿಯ ಚಿಕ್ಕಪ್ಪನ ಮೇಲೆ ಒತ್ತಡ ಹೇರುತ್ತಿದ್ದರು ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ. “ನಮ್ಮ ಮೇಲೆ ನಿರಂತರ ಒತ್ತಡವಿತ್ತು. ಆದರೆ, ನಾವು ಪ್ರಕರಣವನ್ನು ಹಿಂಪಡೆದಿಲ್ಲ. ನಮ್ಮ ಸಹೋದರನನ್ನು ಕೊಲೆ ಮಾಡಿದರು. ಆದರೂ, ನಾವು ಪ್ರಕರಣ ಹಿಂಪಡೆಯಲಿಲ್ಲ. ಈಗ, ಶನಿವಾರ ಅವರು ನಮ್ಮ ಚಿಕ್ಕಪ್ಪನನ್ನು ಕೊಂದರು. ನನ್ನ ಸಹೋದರಿ ಮತ್ತು ಚಿಕ್ಕಪ್ಪನ ಪೋಷಕರು ಆಂಬ್ಯುಲೆನ್ಸ್‌ನಲ್ಲಿ ಮೃತದೇಹದೊಂದಿಗೆ ಸಾಗರ್‌ನಿಂದ ಹೊರಟಿದ್ದರು. ಆಗ ಆಕೆ ಆ್ಯಂಬುಲೆನ್ಸ್‌ನಿಂದ ಬಿದ್ದು ಸಾವನ್ನಪ್ಪಿದರು” ಎಂದು ಸಂತ್ರಸ್ತೆಯ ಜೊತೆಗಿದ್ದ ಮತ್ತೊಬ್ಬ ಸಹೋದರ ತಿಳಿಸಿದ್ದಾರೆ.
ಆ್ಯಂಬುಲೆನ್ಸ್‌ನ ಬಾಗಿಲು ತೆರೆದಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
“ಆ್ಯಂಬುಲೆನ್ಸ್‌ನಲ್ಲಿ ಕುಳಿತಿದ್ದ ಆಕೆ ರಸ್ತೆ ಅಪಘಾತದಲ್ಲಿ ಹೇಗೆ ಸತ್ತಳು? ಆಕೆಯೇ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲು ಯಾವುದೇ ಕಾರಣಗಳಿಲ್ಲ. ಉತ್ತಮ ರಸ್ತೆಯಿದ್ದರೂ, ಆ್ಯಂಬುಲೆನ್ಸ್ ಅಡ್ಡಾದಿಡ್ಡಿಯಾಗಿದ್ದ ರಸ್ತೆ ಮಾರ್ಗದಲ್ಲಿ ಯಾಕೆ ಹೋಯಿತು” ಎಂದು ಕುಟುಂಬಸ್ಥರು ಹೇಳಿದ್ದಾರೆ.
ಮಾಜಿ ಸಂಸದ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಮೃತ ಮಹಿಳೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ್ದಾರೆ. “ಸರ್ಕಾರವು ಸಂತ್ರಸ್ತೆಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಕೊಡಲಿಲ್ಲ. ಆರೋಪಿಗಳ ಮನೆಗಳನ್ನು ನೆಲಸಮ ಮಾಡುವುದಾಗಿ ಭರವಸೆ ನೀಡಿತ್ತು. ಅದನ್ನೂ ಮಾಡಲಿಲ್ಲ. ನಾನು ಯಾರೊಬ್ಬರ ಮನೆಯನ್ನು ಕೆಡವುವ ಪರವಾಗಿಲ್ಲ. ಆದರೆ, ಸರ್ಕಾರ ಕ್ರಮದ ಹೆಸರಿನಲ್ಲಿ ಅನೇಕ ಜನರ ಮನೆಗಳನ್ನು ಕೆಡವಿದೆ” ಎಂದು ಹೇಳಿದ್ದಾರೆ.
”ಪ್ರಕರಣದ ತನಿಖೆಗೆ ಸರ್ಕಾರ ನಿರ್ದೇಶನ ನೀಡಿದೆ. ಯಾರನ್ನೂ ಬಿಡುವುದಿಲ್ಲ. ನಾವು ಕಾನೂನು ಕಾರ್ಯವಿಧಾನದ ಪ್ರಕಾರ ಕೆಲಸ ಮಾಡುತ್ತೇವೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುತ್ತದೆ” ಎಂದು ಬಿಜೆಪಿ ವಕ್ತಾರ ನರೇಂದ್ರ ಸಲೂಜಾ ಹೇಳಿದ್ದಾರೆ.