ಲೋಕಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ, ಜೂನ್ 4ರಂದು ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಏ.26 ಮತ್ತು ಮೇ 7ರಂದು ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು. ಹೀಗಾಗಿ, ವಸಂತನಗರದ ಮೌಂಟ್ ಕಾರ್ಮೆಲ್ ಕಾಲೇಜು, ವಿಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಹಾಗೂ ಜಯನಗರದ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆ ಜೂ. 4ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ದೇಶದಾದ್ಯಂತ ಏಳು ಹಂತದಲ್ಲಿ ನಡೆಯುವ ಮತದಾನದ ಫಲಿತಾಂಶ ಜೂನ್ 4ರಂದು ಪ್ರಕಟವಾಲಿದೆ. ಈ ಹಿನ್ನಲೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಜೂನ್‌ನಲ್ಲಿ ದೇಶಾದ್ಯಂತ ಬ್ಯಾಂಕುಗಳಿಗೆ ಒಟ್ಟು 13 ದಿನ ರಜೆ
ಮತ ಎಣಿಕೆ ನಡೆಯುವ ಸಮಯದಲ್ಲಿ ಕೆಲ ಸಮಾಜಘಾತುಕ ವ್ಯಕ್ತಿಗಳು, ಕಿಡಿಗೇಡಿಗಳು, ಗೆದ್ದ ಹಾಗೂ ಸೋತ ಅಭ್ಯರ್ಥಿಗಳ ಪರ, ವಿರುದ್ಧ ಪ್ರತಿಭಟನೆ ನಡೆಸಿ, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಹಾಗೂ ಸಾರ್ವಜನಿಕ ಆಸ್ತಿ–ಪಾಸ್ತಿಗಳಿಗೆ ನಷ್ಟವುಂಟುಮಾಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ನಿಷೇಧಾಜ್ಞೆ ಹಿನ್ನೆಲೆ, ಯಾವುದೇ ಮಾರಕಾಸ್ತ್ರಗಳೊಂದಿಗೆ ತಿರುಗಾಡಬಾರದು, ಬ್ಯಾನರ್ ಹಾಕುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ. ಹಾಗೆಯೇ, ಐದು ಜನರಿಗಿಂತ ಹೆಚ್ಚು ಜನರು ಗುಂಪುಗೂಡುವಂತಿಲ್ಲ ಸೇರಿದಂತೆ ಒಟ್ಟು ಹನ್ನೆರಡು ಷರತ್ತುಗಳನ್ನು ಆದೇಶದಲ್ಲಿ ತಿಳಿಸಲಾಗಿದೆ.