ರಾಜಸ್ಥಾನದಲ್ಲಿ ಬಿಸಿಲಿನ ತಾಪಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಜೈಪುರದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇನ್ನು ಬಿಸಿಲಿನ ತಾಪದಿಂದ ಅನಾರೋಗ್ಯಕ್ಕೆ ಒಳಗಾದ ರೋಗಿಗಳ ಸಂಖ್ಯೆ 3965ಕ್ಕೆ ಏರಿದೆ.
ಮೃತಪಟ್ಟವರು ಆಗ್ರಾ ಮತ್ತು ದೆಹಲಿಯವರು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಝಲಾವರ್ ಜಿಲ್ಲೆಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದ ಎರಡು ನವಜಾತ ಶಿಶುಗಳು ಮಂಗಳವಾರ ಸಾವನ್ನಪ್ಪಿವೆ.
ಆಸ್ಪತ್ರೆಯಲ್ಲಿ ಕೂಲರ್ ಅಥವಾ ವೈದ್ಯರಿಲ್ಲದ ಕಾರಣ ಈ ಸಾವಾಗಿದ್ದು ಇದಕ್ಕೆ ಆಸ್ಪತ್ರೆ ಆಡಳಿತದ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ವಿಪರೀತ ಸುಡುವ ಬಿಸಿಲು; ಸಾಂಕ್ರಾಮಿಕ ರೋಗಗಳ ಬಗ್ಗೆ ವೈದ್ಯರ ಎಚ್ಚರಿಕೆ
ಬ್ಲಾಕ್ ಮೆಡಿಕಲ್ ಆಫೀಸರ್ ರಯೀಸ್ ಖಾನ್ ಆಸ್ಪತ್ರೆಗೆ ಆಗಮಿಸಿ ವಾರ್ಡ್‌ನಲ್ಲಿ ನಾಲ್ಕು ಕೂಲರ್‌ಗಳನ್ನು ಅಳವಡಿಸಲು ಮತ್ತು ಆಸ್ಪತ್ರೆಯಲ್ಲಿ 24 ಗಂಟೆಗಳ ಕರ್ತವ್ಯಕ್ಕೆ ವೈದ್ಯರನ್ನು ನೇಮಿಸಲು ಸೂಚನೆ ನೀಡಿದರು.
ಈ ನವಜಾತ ಶಿಶುಗಳು ತೀವ್ರವಾದ ಶಾಖದಿಂದ ಸಾವನ್ನಪ್ಪಿವೆಯೇ ಎಂದು ಪರೀಕ್ಷಿಸಲಾಗುವುದು ಎಂದು ಎಂದು ರಯೀಸ್ ಖಾನ್ ತಿಳಿಸಿದ್ದಾರೆ.
ಏರುತ್ತಿರುವ ತಾಪಮಾನದಿಂದಾಗಿ ಈ ಹಿಂದೆ ರಾಜಸ್ಥಾನದಲ್ಲಿ ಆರು ಸಾವುಗಳು ಸಂಭವಿಸಿವೆ ಎಂದು ರಾಜಸ್ಥಾನದ ಸಚಿವರು ಮಂಗಳವಾರ ಹೇಳಿದ್ದಾರೆ.
ರಾಜಸ್ಥಾನದ ಬಹುತೇಕ ಎಲ್ಲಾ ನಗರಗಳಲ್ಲಿ ಮಂಗಳವಾರ 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಾಗಿದೆ. ಬಾರ್ಮರ್‌ನಲ್ಲಿ ಅತೀ ಅಧಿಕ ತಾಪಮಾನ ದಾಖಲಾಗಿದೆ.
ಇದನ್ನು ಓದಿದ್ದೀರಾ? ಮುಂದಿನ ಎರಡು ವಾರಗಳ ಕಾಲ ಬಿಸಿಲು – ಒಣ ಹವೆ; ಹವಾಮಾನ ಇಲಾಖೆ ವರದಿ
ಅಜ್ಮೀರ್‌ನಲ್ಲಿ ಗರಿಷ್ಠ ತಾಪಮಾನ 46.3 ಡಿಗ್ರಿ ಸೆಲ್ಸಿಯಸ್, ಭಿಲ್ವಾರ (47.4), ಭರತ್‌ಪುರ (48.2), ಅಲ್ವಾರ್ (46.2), ಪಿಲಾನಿ (48.5), ಚಿತ್ತೋರ್‌ಗಢ (47), ಬಾರ್ಮರ್ (49.3), ಜೈಸಲ್ಮೇರ್ (48.7), ಜೋಧ್‌ಪುರ (47.4), ಬಿಕಾನೇರ್ (48.2), ಚುರು (48), ಶ್ರೀ ಗಂಗಾನಗರ (48.3), ಮತ್ತು ಧೋಲ್‌ಪುರದಲ್ಲಿ 48.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಈ ಬಿಸಿ ವಾತಾವರಣವು ಮುಂದಿನ 2-3 ದಿನಗಳವರೆಗೆ ಇರುವ ಸಾಧ್ಯತೆಯಿದೆ. ಮೇ 29ರಿಂದ ತಾಪಮಾನ ಕಡಿಮೆಯಾಗಲು ಆರಂಭವಾಗಲಿದ್ದು, ಜೂನ್ ಮೊದಲ ವಾರದಲ್ಲಿ ತಾಪಮಾನ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಜೈಪುರದ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಆರ್.ಎಸ್. ಶರ್ಮಾ ತಿಳಿಸಿದ್ದಾರೆ.