ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಂಗಳವಾರ ಬಿಜೆಪಿ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಮಾನನಷ್ಟ ನೋಟಿಸ್ ಕಳುಹಿಸಿದೆ. ಬಿಜೆಪಿ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಜಾಹೀರಾತನ್ನು ಪ್ರಕಟಿಸಿದ್ದು ಕೋಲ್ಕತ್ತಾ ಹೈಕೋರ್ಟಿನ ಆದೇಶವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
ಮೇ 20ರಂದು ಹೈಕೋರ್ಟ್, ಟಿಎಂಸಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಮತ್ತು ಜೂನ್ 4ರವರೆಗೆ ಮತ್ತು ಮುಂದಿನ ಆದೇಶದವರೆಗೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸದಂತೆ ಬಿಜೆಪಿಗೆ ತಡೆಯಾಜ್ಞೆ ನೀಡಿತ್ತು.
ಇದನ್ನು ಓದಿದ್ದೀರಾ? ಬಂಗಾಳದಲ್ಲಿ ಇವಿಎಂಗಳ ಮೇಲೆ ಬಿಜೆಪಿ ಟ್ಯಾಗ್; ಟಿಎಂಸಿ ಆರೋಪ; ಚುನಾವಣಾ ಆಯೋಗದ ಉತ್ತರವೇನು?
ತಡೆಯಾಜ್ಞೆ ಇದ್ದರೂ ಕೂಡಾ ಬಿಜೆಪಿಯು ಮಂಗಳವಾರ ತನ್ನ ಎಕ್ಸ್ ಖಾತೆಯಲ್ಲಿ ಮಾನನಷ್ಟ ಜಾಹೀರಾತು ಪ್ರಕಟಿಸಿದೆ ಎಂದು ಟಿಎಂಸಿ ಪರ ವಕೀಲ ಸೋಹಂ ದತ್ತಾ ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿಯ ಅಧಿಕೃತ ಎಕ್ಸ್ ಖಾತೆಯಿಂದ ಈ ಉದ್ಧೇಶಪೂರ್ವಕ, ಅವಹೇಳನಕಾರಿ ಜಾಹೀರಾತನ್ನು ಹಿಂತೆಗೆದುಕೊಳ್ಳುವಂತೆ ದತ್ತಾ ಬಿಜೆಪಿಗೆ ತಿಳಿಸಿದ್ದಾರೆ. ಹಾಗೆಯೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೂಡಲೇ ಸ್ಪಷ್ಟೀಕರಣವನ್ನು ನೀಡುವಂತೆ ಕೋರಿದ್ದಾರೆ.
ಇದನ್ನು ಓದಿದ್ದೀರಾ? ಲೋಕಸಭಾ ಚುನಾವಣೆ | ಮಮತಾ ಕೋಟೆಯಲ್ಲಿ ಕೇಸರಿ ತಂತ್ರ-ಕುತಂತ್ರ; ಟಿಎಂಸಿ, ಬಿಜೆಪಿ, ‘ಇಂಡಿಯಾ’ ಹೋರಾಟ
ಮಂಗಳವಾರ ಬಿಜೆಪಿ ಪೋಸ್ಟ್ ಮಾಡಿದ ಜಾಹೀರಾತನ್ನು ‘ಸುಳ್ಳು, ಪರಿಶೀಲಿಸದ ಮತ್ತು ಮಾನಹಾನಿಕರ’ ಎಂದು ಟಿಎಂಸಿ ಹೇಳಿದೆ.
ಇನ್ನು ಟಿಎಂಸಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಜಾಹೀರಾತುಗಳನ್ನು ಪ್ರಕಟಿಸದಂತೆ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳದ ಬಿಜೆಪಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.