ವ್ಯಕ್ತಿಯೋರ್ವ ಒಂದೇ ಕುಟುಂಬದ 7 ಸದಸ್ಯರನ್ನು ಕೊಂದು ತಾನೂ ಕೂಡಾ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಬುಧವಾರ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯ ಬೋದಲ್ ಕಚರ್ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಎಂಟು ಮಂದಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾನಸಿಕ ಅಸ್ವಸ್ಥತೆ ಹೊಂದಿರುವ ಈ ವ್ಯಕ್ತಿಯು ತನ್ನ ಕುಟುಂಬ ಸದಸ್ಯರನ್ನು ಕೊಲೆ ಮಾಡಿದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಚಿಂದ್ವಾರಾದ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಖತ್ರಿ ದೃಢಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ಒಂದೇ ಕುಟುಂಬದ ಮೂವರ ನಿಗೂಢ ಸಾವು
ಮಂಗಳವಾರ ರಾತ್ರಿ ವ್ಯಕ್ತಿ ತನ್ನ ಕುಟುಂಬಸ್ಥರ ಮೇಲೆ ದಾಳಿ ಮಾಡಿದ್ದಾನೆ. ತನ್ನ ಸಹೋದರ, ಅತ್ತಿಗೆ, ಪತ್ನಿ ಮತ್ತು ಚಿಕ್ಕ ಮಗುವನ್ನು ಕೊಂದಿದ್ದಾನೆ. ನಂತರ ಮನೆಯಿಂದ ಸುಮಾರು 100 ಮೀಟರ್ ದೂರದಲ್ಲಿರುವ ಚರಂಡಿ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೀಶ್ ಖತ್ರಿ ತಿಳಿಸಿದ್ದಾರೆ.
ಈ ಕುಟುಂಬದ ಒಂದು ಮಗು ಬದುಕುಳಿದಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದೆ. ದಾಳಿಯ ಹಿಂದಿನ ಉದ್ದೇಶ ಅಸ್ಪಷ್ಟವಾಗಿದ್ದು ಪೊಲೀಸರು ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣದಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ 7 ಜನರ ಸಾವು, 25 ಮಂದಿಗೆ ಗಾಯ
ಈ ತಿಂಗಳ ಆರಂಭದಲ್ಲಿ, ಉತ್ತರ ಪ್ರದೇಶದ ಪಾಲಪುರದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ವ್ಯಕ್ತಿಯೋರ್ವ ತನ್ನ ಕುಟುಂಬದ ಐವರನ್ನು ಬರ್ಬರವಾಗಿ ಹತ್ಯೆಗೈದಿದ್ದ.
ಈ ಮಾನಸಿಕ ಅಸ್ವಸ್ಥ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದು, ಆತನ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ತನ್ನ ಮೂವರು ಮಕ್ಕಳನ್ನು ಮನೆಯ ಮೇಲ್ಛಾವಣಿಯಿಂದ ಕೆಳಕ್ಕೆ ಎಸೆದಿದ್ದಾನೆ. ಅದಾದ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.