‘ನನಗೆ ನೀವು ಓಟು ಕೊಡದಿದ್ದರೂ ಪರವಾಗಿಲ್ಲ. ನಾನು ಓಟಿಗಾಗಿ ಹಣ, ವಾಚು, ಬ್ಯಾಗುಗಳನ್ನು ಕೊಟ್ಟು, ಬಾಡೂಟ ಮಾಡಿಸಿ, ಹೆಂಡ ಕುಡಿಸಿ ಅನೈತಿಕ ಚುನಾವಣೆ ನಡೆಸುವುದಿಲ್ಲ’ ಎನ್ನುವ ಆಯನೂರು ಮಂಜುನಾಥ್, ಸದ್ಯದ ರಾಜಕಾರಣದಲ್ಲಿ ಭಿನ್ನವಾಗಿ ನಿಲ್ಲುವ ರಾಜಕಾರಣಿ..
ನಾನು ಸದ್ಯ ಮೈಸೂರಿನಲ್ಲಿರುವೆ. ಇಲ್ಲಿ ಕೆಲವು ಉಪನ್ಯಾಸಕರು ಮೌಲ್ಯಮಾಪನಕ್ಕೋ, ಇನ್ನಿತರ ತಮ್ಮ ಕಾಲೇಜುಗಳ ಕೆಲಸಕ್ಕೋ ಒಟ್ಟು ಸೇರಿದಾಗ ಸಾಮಾನ್ಯವಾಗಿ ಕುತೂಹಲಕಾರಿ ಮಾತುಕತೆಗಳು ನಡೆಯುತ್ತವೆ.
“ಏನೋ, ನಿನಗೆ ಟೈಟಾನ್ ವಾಚು ಬಂತಾ?”
“ಕವರು ಸಿಕ್ತಾ?”
“ಅವನಿಗೆ ಸಿಕ್ತಂತೆ, ನನಗೆ ಸಿಗಲೇ ಇಲ್ಲ”
“ನಾನು ತಗೊಳ್ಳಲ್ಲಪ್ಪ”
“ತಗಳ್ದೇ ಇದ್ರೆ ಬಿಡು, ಅವನೇನು ಅವನ ಅಪ್ಪನ ಮನೆಯಿಂದ ಕೊಡ್ತಾನ? ಎಲ್ಲಾ ತಲೆ ಒಡೆದ ದುಡ್ಡೇ, ನಾನಂತೂ ತಗಳ್ತೀನಿ”
ಹೀಗೆ ಚರ್ಚೆಗಳು ನಡೆಯುತ್ತವೆ. ಇದರ ನಡುವೆ ಬಾಡೂಟ, ಎಣ್ಣೆ ಪಾರ್ಟಿ ವಿಷಯ ಎಲ್ಲಾ ಬಂದು ಹೋಗುತ್ತವೆ.
ಇದು ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣೆಯ ಸಂದರ್ಭದಲ್ಲಿ ಶಿಕ್ಷಕರ, ಅಧ್ಯಾಪಕರ ಒಂದು ವಲಯದಲ್ಲಿ ಸಾಮಾನ್ಯವಾಗಿ ನಡೆಯುವ ಮಾತುಕತೆಗಳು. ನಮ್ಮ ಚುನಾವಣೆಗಳು ಎಷ್ಟು ಹದಗೆಟ್ಟು ಹೋಗಿವೆ ಎನ್ನುವುದಕ್ಕೆ ಇದೊಂದು ಉದಾಹರಣೆ.
ಮೇಲ್ಮನೆಗೆ ವಿಶೇಷ ಗೌರವವಿದೆ. ಇಲ್ಲಿ ವಿವಿಧ ಕ್ಷೇತ್ರದ ಪ್ರತಿಭಾವಂತರು ಬರಬೇಕು ಎನ್ನುವುದು ಸಂವಿಧಾನತಜ್ಞರ ಉದ್ದೇಶವಾಗಿತ್ತು. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳು ನಡೆಯುವ ರೀತಿಯಲ್ಲಿಯೇ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗಳೂ ನಡೆಯುತ್ತಿವೆ. ಕೆಲವೇ ಸಾವಿರ ಮತದಾರರನ್ನು ಹೊಂದಿರುವ ವಿಧಾನ ಪರಿಷತ್ ಚುನಾವಣೆಗಳಲ್ಲಿ ಹರಿಯುವ ಹಣದ ಹೊಳೆ 20 ರಿಂದ 50 ಕೋಟಿಯಷ್ಟಾಗುತ್ತದೆ ಎಂದು ಅಂದಾಜು ಮಾಡಲಾಗುತ್ತದೆ. ಈ ರೀತಿ ಬಂಡವಾಳ ಹೂಡಿ ಇವರೆಲ್ಲ ಎಲ್ಲಿಂದ ಲಾಭ ತೆಗೆಯುತ್ತಾರೆ? ಎಂದಿನಂತೆ ಸರ್ಕಾರದ ಸಾರ್ವಜನಿಕ ಕಾಮಗಾರಿಗಳಿಂದಲೇ ಮತ್ತು ವರ್ಗಾವಣೆ ದಂಧೆಗಳಿಂದಲೇ ಅವರು ಇದನ್ನು ಪಡೆಯುತ್ತಾರೆ. ಇದರೊಂದಿಗೆ ಶಾಸಕತನದ ಅಧಿಕಾರದ ಬಲದಲ್ಲಿ ದೊಡ್ಡ ಪ್ರಮಾಣದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರೂ ಇದ್ದಾರೆ.
ರಾಜ್ಯಸಭೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತು ಹೀಗೆ ನಾಲ್ಕೂ ಸದನಗಳಿಗೆ ಆಯ್ಕೆಯಾಗಿ ಹೋಗಿ ದೀರ್ಘಕಾಲ ಸೇವೆ ಸಲ್ಲಿಸಿದ, ಆದರೆ ಮೇಲ್ಕಂಡ ಯಾವುದೇ ವ್ಯವಹಾರಗಳಲ್ಲಿಯೂ ತೊಡಗದ, ತನ್ನ ಅಧಿಕಾರ ಬಳಸಿ ಯಾವ ಉದ್ದಿಮೆಯನ್ನೂ ನಡೆಸದ ಒಬ್ಬ ವ್ಯಕ್ತಿ ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಆಯನೂರು ಮಂಜುನಾಥ್!
ನಾಲ್ಕೂ ಸದನಗಳಿಗೆ ಹೋಗಿ ಬಂದ ಹೆಗ್ಗಳಿಕೆಯೊಂದಿಗೆ ನಾಲ್ಕೂ ಪಕ್ಷಗಳಿಗೆ ಹೋಗಿ ಬಂದ ಅಷ್ಟು ಹಿತಕರವಲ್ಲದ ಹಿನ್ನೆಲೆಯೂ ಆಯನೂರು ಅವರಿಗಿದೆ. ಇಂತಹ ಪಕ್ಷಾಂತರಕ್ಕೆ ಕಾರಣವೇನು? ಅಧಿಕಾರದಾಹವೋ ಅಥವಾ ತನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದ ಸಂದರ್ಭಗಳಲ್ಲೆಲ್ಲ ತೆಗೆದುಕೊಂಡ ನಿರ್ಧಾರಗಳೇ?
ಅಧಿಕಾರದಾಹವಾದರೆ ಅದು ಯಾವ ಕಾರಣಕ್ಕಾಗಿ? ಅಧಿಕಾರ ಪಡೆಯುವುದು ಅಕ್ರಮವಾಗಿ ಹಣ-ಸಂಪತ್ತು ಗಳಿಸುವುದಕ್ಕಾಗಿ ಎಂಬ ರಾಜಕೀಯ ತಿಳಿವಳಿಕೆ ಸಾಮಾನ್ಯವಾದದ್ದಾಗಿದೆ. ಆದರೆ ಆಯನೂರು ಅವರ ವ್ಯಕ್ತಿವಿವರದಲ್ಲಿ ತನಗೊದಗಿದ ಲೋಕಸಭಾ/ರಾಜ್ಯಸಭಾ ಅಥವಾ ಶಾಸಕತನದ ಅಧಿಕಾರದ ಬಲದಿಂದ ಅಕ್ರಮವಾಗಿ ಹಣಗಳಿಸಿದ ಆಪಾದನೆಯನ್ನು ಅವರ ಕಡುವಿರೋಧಿಗಳೂ ಮಾಡಲು ಸಾಧ್ಯವಿಲ್ಲ.
ಆಯನೂರು ಅವರು ಕೋಮುವಾದಿ ಎನಿಸಿಕೊಂಡಿರುವ, ಪಕ್ಷದ ಪರಮೋಚ್ಛ ಸ್ಥಾನದಲ್ಲಿರುವವರೇ ಮುಸ್ಲಿಮರನ್ನು ಅವಹೇಳನ ಮಾಡುವಂತಹ ಬಿಜೆಪಿಯಲ್ಲಿದ್ದದ್ದು ಹೌದು. ಆದರೆ, ಈ ಪಕ್ಷದಲ್ಲಿದ್ದಾಗಲೇ ಶಿವಮೊಗ್ಗ ನಗರದಲ್ಲಿ ಕೆಲವರು ಧರ್ಮಗಳ ನಡುವೆ ಅಪನಂಬಿಕೆಯನ್ನು ಮೂಡಿಸಲು ಯತ್ನಿಸುತ್ತಿದ್ದಾಗ, “ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮುರಿದ ಮನಸ್ಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ” ಎನ್ನುವ ಹಾಗೂ “ಹಿಂದು ಬಾಂಧವರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು” ಎಂದು ಶುಭಾಶಯ ಕೋರುವ ಸೌಹಾರ್ದ ಸಾರುವ ಫ್ಲೆಕ್ಸುಗಳನ್ನು ನಗರದ ಅಲ್ಲಲ್ಲಿ ಹಾಕಿ ತನ್ನ ಜಾತ್ಯತೀತತೆ ಕುರಿತ ಬದ್ಧತೆಯನ್ನು ತೋರ್ಪಡಿಸಿದವರು.
ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವ ಬಿಜೆಪಿಯ ಶಾಸಕನಾಗಿಯೇ ವಿಧಾನ ಪರಿಷತ್ತಿನಲ್ಲಿ ತನ್ನದೇ ಸರ್ಕಾರದ ಒಂದು ನಿರ್ಧಾರದ ವಿರುದ್ಧ ಅವರು ಕಟುವಾದ ದನಿಯಲ್ಲಿಯೇ ಹೇಳಿದರು, “ರಾಮನಗರದಲ್ಲಿ ರಾಮಮಂದಿರ ಕಟ್ಟುತ್ತೇವೆ ಎಂದು ಸರ್ಕಾರ ಹೇಳಿದ್ದು ನನಗೆ ಅಷ್ಟು ಸಮಾಧಾನ ಕೊಟ್ಟಿಲ್ಲ. ಸರ್ಕಾರದ ಕೆಲಸ ದೇವಸ್ಥಾನ ಮತ್ತು ಮಸೀದಿಗಳನ್ನು ಕಟ್ಟುವ ಕೆಲಸ ಅಲ್ಲ. ದೇವರ ಕೆಲಸಕ್ಕಿಂತ ಬಹಳ ದೊಡ್ಡದಾದ ಮತ್ತು ಮುಖ್ಯವಾದ ಬಡವರ ಕೆಲಸಗಳಿವೆ. (ಇಲ್ಲಿ) ನಿಮಗೆ (ಯಾರಿಗೂ) ಹೇಳಲು ಧೈರ್ಯವಿಲ್ಲದ್ದನ್ನು ನಾನು ಹೇಳುತ್ತೇನೆ ಕೇಳಿ” ಎಂದಿದ್ದರು.
ರಾಜಕಾರಣದಲ್ಲಿ ದೇವರು, ಧರ್ಮ, ಜಾತಿಗಳೇ ಮುನ್ನೆಲೆಗೆ ಬಂದು ಜನರ ಮೂಲಭೂತ ಸಮಸ್ಯೆಗಳು ಮರೆಗೆ ಸರಿದ ಸಮಕಾಲೀನ ಕಾಲಘಟ್ಟದಲ್ಲಿ ಸದನದಲ್ಲಿ ವಿಧಾನಪರಿಷತ್ ಸದಸ್ಯರೊಬ್ಬರ ಈ ಮಾತುಗಳನ್ನು ಕೇಳಿ ಕರ್ನಾಟಕದ ಪ್ರಜ್ಞಾವಂತ ಜನ ರೋಮಾಂಚಿತರಾದರು. ಕುತೂಹಲದ ಸಂಗತಿಯೆಂದರೆ ಇವರು ಸಮಾಜವಾದಿ ಚಿಂತನೆ ತಮ್ಮ ಸೈದ್ಧಾಂತಿಕ ನೆಲೆ ಎಂದು ಭಾಷಣ ಬಿಗಿಯುವರಾಗಿರಲಿಲ್ಲ. ಆಯನೂರು ಅವರು ಭಾವನಾತ್ಮಕ ವಿಚಾರಗಳನ್ನು ಬದಿಗಿಟ್ಟು ವಿಧಾನಮಂಡಲಗಳಲ್ಲಿ ನಿರಂತರ ಜನರ ಸಮಸ್ಯೆಗಳ ಕುರಿತೇ ತಮ್ಮ ಗಟ್ಟಿಧ್ವನಿ ಮೊಳಗಿಸಿದವರು. ಪಕ್ಷದಲ್ಲಿನ ಮತ್ತು ಸರ್ಕಾರದಲ್ಲಿನ ತಮ್ಮ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ಅರಿವಿದ್ದರೂ ಅದನ್ನು ಕ್ಯಾರೇ ಎನ್ನದೆ ತಮ್ಮ ಸರ್ಕಾರದ ವಿರುದ್ಧವೇ ಸದನದ ಬಾವಿಗಿಳಿದವರು.
ಬಿಜೆಪಿ ಸರ್ಕಾರವು ತನ್ನ ಕೊನೆಯ ಅವಧಿಯಲ್ಲಿ ಮಂಡಿಸಿದ ಕಾರ್ಮಿಕ ಕಾನೂನಿಗೆ ತಿದ್ದುಪಡಿಯನ್ನು ಅದೇ ಪಕ್ಷದಲ್ಲಿದ್ದ ಆಯನೂರು ತೀವ್ರವಾಗಿ ವಿರೋಧಿಸಿದರು. ಕಾರ್ಖಾನೆ, ಗಾರ್ಮೆಂಟ್ಸು ಇತ್ಯಾದಿ ಕಡೆಗಳಲ್ಲಿ ಪುರುಷ, ಮಹಿಳಾ ಕಾರ್ಮಿಕರು ಈವರೆಗೆ ಇದ್ದ ದಿನಕ್ಕೆ 8 ಗಂಟೆಯ ಬದಲಿಗೆ 12 ಗಂಟೆಗಳ ಕಾಲ ದುಡಿಯಬೇಕು ಎಂಬುದು ಅಮಾನವೀಯವಾದುದು ಎಂದು ಖಂಡಿಸಿ ಸಭಾತ್ಯಾಗ ಮಾಡಿದರು. ಆಯನೂರು ವಿರೋಧ ವ್ಯಕ್ತಪಡಿಸಿದ ನಂತರ ಕೆಲವು ವಿರೋಧಪಕ್ಷದ ಸದಸ್ಯರು ದನಿಗೂಡಿಸಿದರು. ಗುತ್ತಿಗೆ ಮತ್ತು ಹೊರಗುತ್ತಿಗೆ ಆರೋಗ್ಯ ಕಾರ್ಯಕರ್ತರ ಪರವಾಗಿ ನಿರಂತರವಾಗಿ ಸದನದಲ್ಲಿ ದನಿ ಎತ್ತಿ ಅವರ ಸಂಬಳ, ಸೌಲಭ್ಯ ಹೆಚ್ಚಳವಾಗುವಂತೆ ನೋಡಿಕೊಂಡರು. ಕಟ್ಟಡ ಕಾರ್ಮಿಕರ, ಪೌರಕಾರ್ಮಿಕರ ಪರವಾಗಿ, ಅತಿಥಿ ಉಪನ್ಯಾಸಕರ ಪರವಾಗಿ ಸದಸದಲ್ಲಿ ದನಿ ಎತ್ತುತ್ತ ಅವರಿಗೆ ಸಾಧ್ಯವಾದ ಸೌಲಭ್ಯ ಒದಗಿಸಿಕೊಟ್ಟರು. ಸದಾ ನಿಷ್ಠುರವಾಗಿ ಮಾತನಾಡುತ್ತ ತಮ್ಮ ಸರ್ಕಾರಕ್ಕೆ ವಿರೋಧದ ಬಿಸಿ ಮುಟ್ಟಿಸುತ್ತಿದ್ದ ಆಯನೂರು ಮಂಜುನಾಥರನ್ನು ಉದ್ದೇಶಿಸಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯನವರು ಸದನದಲ್ಲಿಯೇ “ಲೇ ಮಂಜಣ್ಣ ನೀನು ನಮ್ಮ ಕಡೆ ಬಾರೋ” ಎಂದು ತಮಾಷೆಗೆ ಹೇಳಿದ್ದರು. ಈ ತಮಾಷೆಯನ್ನು ಗಂಭೀರವಾಗಿ ತೆಗೆದುಕೊಂಡ ಆಯನೂರರು ಇಂದು ಕಾಂಗ್ರೆಸ್ಸಿನಲ್ಲಿದ್ದಾರೆ! ಕಾಂಗ್ರೆಸ್‌ನಿಂದಲೇ ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಆಯನೂರು ಅವರು ಕಾರ್ಮಿಕ ಸಂಘಟನೆಯ ಮುಖಂಡನಾಗಿ ಬೆಳೆದು ಬಂದವರು. ಈಗಲೂ ಅವರು ಹತ್ತು ಹಲವು ಸಂಘಟನೆಗಳನ್ನು ಮುನ್ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಆರೋಗ್ಯ ಕಾರ್ಯಕರ್ತರ (ಎನ್.ಎಚ್.ಎಮ್) ಸಂಘಟನೆ, ಕಟ್ಟಡ ಕಾರ್ಮಿಕರ ಸಂಘಟನೆ, ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಇತ್ಯಾದಿ. ಇಲ್ಲೆಲ್ಲ ಕೇವಲ ಹೆಸರಿಗೆ ಮಾತ್ರ ಇರದೆ ಈ ಸಂಘಟನೆಗಳ ಪ್ರತಿಭಟನೆಗಳಲ್ಲಿ, ಸಭೆಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸುತ್ತಿದ್ದಾರೆ. ಸದನದಲ್ಲಿಯೂ ಗಟ್ಟಿದನಿ ಮೊಳಗಿಸಿದ್ದಾರೆ. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ದೊಡ್ಡಮಟ್ಟದಲ್ಲಿ ಹೋರಾಡುತ್ತಿದ್ದಾರೆ. ಈ ಎಲ್ಲಾ ಸಂಘಟನೆಗಳೂ, ಪ್ರಮುಖವಾಗಿ ಖಾಯಂ ಅಧ್ಯಾಪಕರ ಮತ್ತು ಅತಿಥಿ ಉಪನ್ಯಾಸಕರ ದೊಡ್ಡ ಪಡೆಗಳು ಆಯನೂರು ಪರ ಪ್ರಚಾರದಲ್ಲಿ ತೊಡಗಿವೆ.
ಮೊದಲಿಗೆ ಪ್ರಸ್ತಾಪಿಸಿದಂತೆ ಇವತ್ತು ಚುನಾವಣೆಗಳು ದಂಧೆಯಾಗಿ ಪರಿವರ್ತನೆಯಾಗುತ್ತಿವೆ. ಇದಕ್ಕೆ ಅಪವಾದವೆಂಬಂತೆ ಆಯನೂರು ಮಂಜುನಾಥ್ ಅವರಿದ್ದಾರೆ. “ನನಗೆ ನೀವು ಓಟು ಕೊಡದಿದ್ದರೂ ಪರವಾಗಿಲ್ಲ. ನಾನು ಓಟಿಗಾಗಿ ಹಣ, ವಾಚು, ಬ್ಯಾಗುಗಳನ್ನು ಕೊಟ್ಟು, ಬಾಡೂಟ ಮಾಡಿಸಿ, ಹೆಂಡ ಕುಡಿಸಿ ಅನೈತಿಕ ಚುನಾವಣೆ ನಡೆಸುವುದಿಲ್ಲ” ಎಂದು ನೇರವಾಗಿಯೇ ಹೇಳುತ್ತಿದ್ದಾರೆ. ಆಯನೂರು ಅವರ ಈವರೆಗಿನ ರಾಜಕೀಯ ಬದುಕು ಮತದಾರರಲ್ಲಿ ಅವರ ಬಗ್ಗೆ ವಿಶ್ವಾಸ ಹುಟ್ಟಿಸುವಂತಿವೆ. ಆಯನೂರು ಆಡಳಿತ ಪಕ್ಷ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವುದರಿಂದ ಈ ಸರ್ಕಾರ ಇನ್ನೂ ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿರುವುದರಿಂದ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅವರು ಈಡೇರಿಸುತ್ತಾರೆ ಎಂಬ ಅಧ್ಯಾಪಕರ, ಅತಿಥಿ ಉಪನ್ಯಾಸಕರ, ಪದವೀಧರರ ವಿಶ್ವಾಸವೂ ಆಯನೂರು ಅವರಿಗೆ ಸಹಕಾರಿಯಾದಂತಿದೆ.