ಈ ದಿನ ಸಂಪಾದಕೀಯ | ಜೈಲಿಗೆ ಕಳಿಸುವ ಮೋದಿ ಗ್ಯಾರಂಟಿಯು ‘ಜನತಂತ್ರದ ಜನನಿ’ಯ ಅಣಕ ಅಲ್ಲವೇ?

Date:

Advertisements
2014ರಿಂದ 2023ರವರೆಗೆ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಹೊತ್ತಿದ್ದ ಪ್ರತಿಪಕ್ಷಗಳ 25 ನಾಯಕರನ್ನು ಸೇರಿಸಿಕೊಂಡು ಬಿಜೆಪಿಯ ‘ವಾಷಿಂಗ್ ಮಷಿನ್‌’ ನಲ್ಲಿ ಸ್ವಚ್ಛ ಮಾಡಲಾಯಿತು. ಅವರ ವಿರುದ್ಧದ ಕೇಸುಗಳನ್ನು ಮುಚ್ಚಿ ಹಾಕಲಾಯಿತು ಎಂಬುದಾಗಿ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಇತ್ತೀಚೆಗೆ ಪ್ರಕಟಿಸಿದ್ದ ತನಿಖಾ ವರದಿ ಜನಜನಿತ.

 

ಬಿಹಾರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣೆಸುತ್ತಿರುವ ಏಕೈಕ ನಾಯಕ ರಾಷ್ಟ್ರೀಯ ಜನತಾದಳದ ತೇಜಸ್ವಿ ಯಾದವ್. ಲಾಲೂ ಪ್ರಸಾದ್ ಯಾದವ್ ಅವರ ಮಗ. ಸಣ್ಣ ವಯಸ್ಸಿನಲ್ಲೇ ಪ್ರಬುದ್ಧವಾಗಿ ಮಾತಾಡಬಲ್ಲ ತರುಣ ರಾಜಕಾರಣಿ. ನಿತೀಶ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಾಕಷ್ಟು ಸರ್ಕಾರಿ ಉದ್ಯೋಗಗಳನ್ನು ನೀಡಿದ್ದ ದಾಖಲೆ ಹೊಂದಿದವರು. ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆಗೆ ದನಿಯಾಗಿರುವವರು. ಬಿಹಾರದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾದಳದ ನಾಯಕತ್ವ ವಹಿಸಿ 80 ಸೀಟುಗಳಲ್ಲಿ ಸ್ಪರ್ಧಿಸಿ 75 ಸೀಟುಗಳನ್ನು ಗೆಲ್ಲಿಸಿಕೊಂಡವರು. ಬಿಜೆಪಿಗಿಂತ ಒಂದು ಸೀಟು ಹೆಚ್ಚು ಗೆದ್ದು ಗಮನ ಸೆಳೆದವರು. ಬಿಹಾರದ ಯುವಜನರನ್ನು ತಮ್ಮತ್ತ ಸೆಳೆದುಕೊಂಡಿದ್ದವರು. ಈಗಲೂ ರಾಷ್ಟ್ರೀಯ ಜನತಾದಳದ ತಾರಾ ಪ್ರಚಾರಕ.

ಹಾಲಿ ಲೋಕಸಭಾ ಚುನಾವಣೆಯಲ್ಲಿ ದಿನಕ್ಕೆ ನಾಲ್ಕೈದು ಸಾರ್ವಜನಿಕ ಸಭೆಗಳನ್ನು ನಡೆಸಿಯೇ ಸಿದ್ಧ. ಈಗಲೂ ನಿರುದ್ಯೋಗದ ಸಮಸ್ಯೆ ಕುರಿತು ಮಾತಾಡಲು ಹಿಂಜರಿದಿಲ್ಲ. ಅನಾರೋಗ್ಯದಲ್ಲೂ ಇಂತಹ 200ಕ್ಕೂ ಹೆಚ್ಚು ಪ್ರಚಾರ ಸಭೆಗಳನ್ನು ಅವರು ನಡೆಸಿದ್ದಾರೆ. ಈ ಕೆಲಸಕ್ಕಾಗಿ ಇತರೆ ರಾಜಕೀಯ ಪಕ್ಷಗಳ ನಾಯಕರಂತೆ ತೇಜಸ್ವಿ ಯಾದವ್ ಕೂಡ ಹೆಲಿಕಾಪ್ಟರ್ ಬಳಸಿದ್ದಾರೆ. ಮೋದಿಯವರು ರಾಜಕೀಯ ಮೈದಾನದಲ್ಲಿ ತೇಜಸ್ವಿಯವರಿಗೆ ಮಣ್ಣು ಮುಕ್ಕಿಸುವ ಸವಾಲು ಎಸೆದಿದ್ದರೆ ಒಪ್ಪಬಹುದಿತ್ತು. ಆದರೆ ಜೈಲಿಗೆ ಕಳಿಸುವ ಗ್ಯಾರಂಟಿ ನೀಡಿದ್ದಾರೆ! ಜನತಂತ್ರ ವ್ಯವಸ್ಥೆಯ ಅಣಕವಾಡಿದ್ದಾರೆ. ಚುನಾವಣೆ ಸಂಹಿತೆಯನ್ನು ಗಾಳಿಗೆ ತೂರಿದ್ದಾರೆ.

‘ನೌಕರಿಯ ಬದಲು ಜಮೀನು ಬರೆಯಿಸಿಕೊಂಡಿರುವವರು ಜೈಲಿಗೆ ಹೋಗುವ ಇಳಿಎಣಿಕೆ ಶುರುವಾಗಿದೆ. ಅವರ ಹೆಲಿಕಾಪ್ಟರ್ ಸವಾರಿಗಳು ಅಂತ್ಯಗೊಳ್ಳುತ್ತಿದ್ದಂತೆಯೇ ಜೈಲಿನ ದಾರಿ ತೆರೆದುಕೊಳ್ಳುತ್ತದೆ. ಬಿಹಾರವನ್ನು ಲೂಟಿ ಹೊಡೆದವರನ್ನು ನಾವು ಬಿಡುವುದಿಲ್ಲ, ಇದು ಎನ್.ಡಿ.ಎ. ಮತ್ತು ಮೋದಿ ಗ್ಯಾರಂಟಿ’ ಎಂದು ಘರ್ಜಿಸಿದ್ದಾರೆ.

‘ಭಗವಾನ್ ಶ್ರೀಕೃಷ್ಣ ಜನಿಸಿದ್ದೇ ಜೈಲಿನಲ್ಲಿ. ಯಾರನ್ನು ಹೆದರಿಸ್ತಿದ್ದೀರಿ ಮೋದೀಜೀ? ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸ್ತಿದ್ದೇನೆಂದ ಮಾತ್ರಕ್ಕೆ ನನ್ನನ್ನು ಜೈಲಿಗೆ ಕಳಿಸಿಬಿಡ್ತೀರೇನು? ಕೈ ಹಾಕಿ ನೋಡಿ, ಬಿಹಾರಿಗಳು ಭಯ ಬೀಳುವವರಲ್ಲ. ಇದು ಬಿಹಾರ ಮೋದೀಜಿ… ಹಾರುವ ಹಕ್ಕಿಯ ಹಿಡಿಯಲು ಕೈ ಚಾಚಬೇಡಿ… ಅದು ಸಿಗುವುದಿಲ್ಲ…’ ಎಂಬುದು ತೇಜಸ್ವಿ ಎಸೆದಿರುವ ಸವಾಲು.

‘ಎಲ್ರನ್ನೂ ತಿಹಾರ್ ಜೈಲಿಗೆ ಹಾಕ್ಬಿಡಿ ಮೋದೀಜಿ. ಮಹಾರಾಷ್ಟ್ರದ ಉದ್ಧವ್ ಠಾಕರೆ, ಶರದ್ ಪವಾರ್, ಬಂಗಾಳದ ಮಮತಾ ಬ್ಯಾನರ್ಜಿ, ದೆಹಲಿಯ ಕೇಜ್ರೀವಾಲ್, ತಮಿಳುನಾಡಿನ ಸ್ಟಾಲಿನ್. ಆದರೆ ಜನತೆ ನಮ್ಮ ಮಾಲೀಕರು. ಅವರು ಲೆಕ್ಕ ಕೇಳಿಯೇ ಕೇಳ್ತಾರೆ….’ ಎಂದು ಗುಡುಗಿದ್ದಾರೆ. ಈ ಮುನ್ನ ಪ್ರತಿಪಕ್ಷದ ನಾಯಕರ ಬಂಧನಗಳು ಜರುಗಿದಾಗ ಕಾನೂನು ತನ್ನ ಕೆಲಸ ಮಾಡುತ್ತಿದೆಯೆಂದು ಪ್ರತಿಕ್ರಿಯೆ ನೀಡುತ್ತಿದ್ದರು ಮೋದಿ. ಕಾನೂನು ಏಜೆನ್ಸಿಗಳ ತೀರ್ಮಾನ ಎಂದು ಕೈತೊಳೆದುಕೊಳ್ಳುತ್ತಿದ್ದರು.

ಪ್ರತಿಪಕ್ಷದ ನಾಯಕರನ್ನು ಜೈಲಿಗೆ ಕಳಿಸುತ್ತಿದ್ದ ತೀರ್ಮಾನಗಳನ್ನು ಇಲ್ಲಿಯವರೆಗೆ ತೆಗೆದುಕೊಳ್ಳುತ್ತಿದ್ದವರು ತಾವೇ ಎಂಬುದನ್ನು ಮೋದಿ ಖುದ್ದು ಬಹಿರಂಗವಾಗಿ ಒಪ್ಪಿಕೊಂಡಂತಾಗಿದೆ ಎಂದು ಕೇಜ್ರೀವಾಲ್ ಕಟಕಿದ್ದಾರೆ. ದೇಶದ ರಾಜಧಾನಿ ದೆಹಲಿಯನ್ನೇ ಚುನಾವಣೆಗಳಲ್ಲಿ ಗೆದ್ದು ಬಿಜೆಪಿಗೆ ಸವಾಲೆಸೆದ ಆಮ್ ಆದ್ಮಿ ಪಾರ್ಟಿಯ ವಿರುದ್ಧ ಬಿಜೆಪಿ ನಡೆಸಿದ ಅನ್ಯಾಯದ ರಾಜಕೀಯ ಸಮರಗಳು ಹಲವಾರು. ಗುಬ್ಬಿ ಗಾತ್ರದ ಈ ಪಕ್ಷದ ಮೇಲೆ ಬ್ರಹ್ಮಾಸ್ತ್ರಗಳನ್ನೇ ಬಿಡಲಾಯಿತು.

ಪಕ್ಷದ ನಾಯಕರಾದ ಮನೀಶ್ ಸಿಸೋಡಿಯಾ, ಸತ್ಯೇಂದ್ರಜೈನ್, ಸಂಜಯ ಸಿಂಗ್, ಅರವಿಂದ್ ಕೇಜ್ರೀವಾಲ್ ಅವರನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ‘ಕೇಜ್ರೀವಾಲ್ ಅವ್ರಿಗೂ ಇಷ್ಟರಲ್ಲೇ ಕಾಳು ಹಾಕಲಿದ್ದೇವೆ’ ಎಂದು ಗೃಹಮಂತ್ರಿ ಅಮಿತ್ ಶಾ ಅವರು ಸಾರಿ ಹೇಳಿದ ಕೆಲವೇ ದಿನಗಳಲ್ಲಿ ದೆಹಲಿಯ ಮುಖ್ಯಮಂತ್ರಿ ಕೇಜ್ರೀವಾಲ್ ದಸ್ತಗಿರಿಯಾಗುತ್ತದೆ. ಜಾರ್ಖಂಡದಲ್ಲಿ ಬಿಜೆಪಿಯ ಮುಂದೆ ಮಂಡಿಯೂರಲು ನಿರಾಕರಿಸಿತು ಝಾರ್ಖಂಡ್ ಮುಕ್ತಿ ಮೋರ್ಚಾ. ಈ ಆದಿವಾಸಿ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಕೂಡ ಜೈಲಿಗೆ ಅಟ್ಟಲಾಗಿದೆ.

‘ಒಂದಾನೊಂದು ಕಾಲವಿತ್ತು…ಭ್ರಷ್ಟಾಚಾರಿಗಳಿಂದ ನಾವು ದೂರ ಓಡುತ್ತಿದ್ದೆವು. ಇಂದು ಭ್ರಷ್ಟಾಚಾರಿಗಳನ್ನು ಹೆಗಲ ಮೇಲೆಕೂರಿಸಿಕೊಂಡು ಕುಣಿಯಲಾಗುತ್ತಿದೆ’ ಎಂಬುದು ಪ್ರಧಾನಿಯವರ ತಾಜಾ ಅಮೃತವಾಣಿ. ಅದಾನಿ, ಅಂಬಾನಿಗಳು ಟೆಂಪೋದಲ್ಲಿ ತುಂಬಿಸಿ ತುಂಬಿಸಿ ಕಪ್ಪು ಹಣವನ್ನು ಕಾಂಗ್ರೆಸ್ಸಿಗೆ ಕಳಿಸಿದ ಆರೋಪವನ್ನೂ ಮೋದಿಯವರು ಇತ್ತೀಚೆಗೆ ಒಮ್ಮೆ ಮಾಡಿದ್ದುಂಟು. ಆದರೆ ತಾವೇ ಹೇಳಿದಂತೆ ಕಪ್ಪು ಹಣವನ್ನು ಟೆಂಪೋದಲ್ಲಿ ತುಂಬಿಸುವ ಅದಾನಿ-ಅಂಬಾನಿಗಳನ್ನು ಯಾಕೆ ಬಂಧಿಸುವ ಮಾತಾಡಿಲ್ಲ ಎಂಬ ಪ್ರಶ್ನೆಗೆ ಮೋದಿಯವರು ಉತ್ತರ ನೀಡಿಲ್ಲ.

2014ರಿಂದ 2023ರವರೆಗೆ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಹೊತ್ತಿದ್ದ ಪ್ರತಿಪಕ್ಷಗಳ 25 ನಾಯಕರನ್ನು ಸೇರಿಸಿಕೊಂಡು ಬಿಜೆಪಿಯ ‘ವಾಷಿಂಗ್ ಮಷೀನ್‌’ ನಲ್ಲಿ ಸ್ವಚ್ಛ ಮಾಡಲಾಯಿತು. ಅವರ ವಿರುದ್ಧದ ಕೇಸುಗಳನ್ನು ಮುಚ್ಚಿ ಹಾಕಲಾಯಿತು ಎಂಬುದಾಗಿ ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಇತ್ತೀಚೆಗೆ ಪ್ರಕಟಿಸಿದ್ದ ತನಿಖಾ ವರದಿ ಜನಜನಿತ.

ಭ್ರಷ್ಟಾಚಾರಿಗಳನ್ನು ಹೆಗಲ ಮೇಲೆ ಹೊತ್ತು ಕುಣೀತಿದ್ದಾರೆ ಎಂದಿದ್ದಾರೆ ಮೋದಿ. ಭ್ರಷ್ಟಾಚಾರದ ವಿರುದ್ಧದ ಮಾತಾಡುವ ಹಕ್ಕನ್ನು ಮೋದಿಯವರು ಉಳಿಸಿಕೊಂಡಿಲ್ಲ. ನಾನು ಬಿಜೆಪಿ ಸೇರದೆ ಹೋದರೆ ನನ್ನನ್ನು ಜೈಲಿಗೆ ಕಳಿಸಲಿದ್ದಾರೆ ಎಂದು ಏಕನಾಥ ಶಿಂಧೆ ತಮ್ಮ ಬಳಿ ಗೋಳಾಡಿದ್ದಾಗಿ ಶಿವಸೇನೆಯ (ಉದ್ಧವ ಠಾಕರೆ) ನಾಯಕ ಆದಿತ್ಯ ಠಾಕರೆ ಈ ಹಿಂದೆ ಹೇಳಿದ್ದುಂಟು. ಹೀಗೆ ಅತ್ತು ಕರೆದು ಪ್ರಯೋಜನ ಆಗದೆ ಹೋದಾಗ ಉದ್ಧವ ಠಾಕರೆ ಸರ್ಕಾರ ಬೀಳುತ್ತದೆ. ಶಿವಸೇನೆಯ ಬೆನ್ನಿಗೆ ಇರಿದ ಏಕನಾಥ ಶಿಂಧೆ ಬಿಜೆಪಿ ಜೊತೆ ಕೈ ಜೋಡಿಸಿ ಮುಖ್ಯಮಂತ್ರಿ ಆಗುತ್ತಾರೆ.

ಎನ್.ಸಿ.ಪಿ.ಯ ಅಜಿತ್ ಪವಾರ್ ಮೇಲೆ 70 ಸಾವಿರ ಕೋಟಿ ಹಗರಣದ ಆರೋಪಿ ಎಂದು ಮೋದಿಯವರೂ, ಅಜಿತ್ ಅವರು ಜೈಲುಪಾಲಾಗಿ ಹಿಟ್ಟು ಬೀಸುವುದು ತಪ್ಪದೆಂದು ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಭಾಷಣ ಮಾಡಿರುವ ವಿಡಿಯೋಗಳು ಯೂಟ್ಯೂಬ್ ನಲ್ಲಿ ಈಗಲೂ ಸಲೀಸಾಗಿ ಸಿಗುತ್ತವೆ. ಶರದ್ ಪವಾರ್ ಸ್ಥಾಪಿಸಿದ ಎನ್.ಸಿ.ಪಿ.ಯನ್ನೂ, ಬಾಳಾಸಾಹೇಬ್ ಠಾಕರೆ ಹುಟ್ಟಿ ಹಾಕಿ ಬೆಳೆಸಿದ ಶಿವಸೇನೆಯನ್ನೂ ಬಿಜೆಪಿ ಒಡೆದು ಹೋಳು ಮಾಡಿ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಕೆಡವಿ ಶಿಂಧೆ-ಪವಾರ್-ಫಡಣವೀಸ್ ಸರ್ಕಾರವನ್ನು ರಚಿಸಿದರು ಮೋದಿ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಅಶೋಕ ಚವ್ಹಾಣ್ ಅವರನ್ನು ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದ ಮುಖ್ಯ ಆರೋಪಿಯೆಂದು ಭರ್ಜರಿ ಭಾಷಣ ಮಾಡಿದ್ದವರು ಖುದ್ದು ಮೋದಿಯವರೇ. ನಮ್ಮ ಯೋಧರ ಹುತಾತ್ಮರ ಕುಟುಂಬಗಳಿಗೆ ಮೋಸ ಮಾಡಿದ್ದರೆಂದು 2019ರ ಚುನಾವಣಾ ಭಾಷಣದಲ್ಲೇ ದಾಳಿ ನಡೆಸಿದ್ದರು. ಅಂತಹವರು ಈಗ ಬಿಜೆಪಿಯಲ್ಲಿದ್ದಾರೆ. ನಾನು ಬಿಜೆಪಿ ಸೇರದೆ ಹೋದರೆ ಆದರ್ಶ್ ಹಗರಣದಲ್ಲಿ ನನ್ನ ಮಗಳನ್ನು ಬಂಧಿಸುವ ಬೆದರಿಕೆ ಹಾಕಿದ್ದಾರೆಂದು ಚವ್ಹಾಣ್ ತಮ್ಮ ತಾಯಿಯ (ಸೋನಿಯಾಗಾಂಧಿ) ಮುಂದೆ ಕಣ್ಣೀರುಗರೆದರೆಂದು ರಾಹುಲ್ ಗಾಂಧಿ ಬಹಿರಂಗ ಭಾಷಣದಲ್ಲಿ ಹೇಳಿದರು. ರಾಹುಲ್ ಹೇಳಿಕೆಯನ್ನು ಚವ್ಹಾಣ್ ಮತ್ತು ಬಿಜೆಪಿ ಈವರೆಗೆ ಅಲ್ಲಗಳೆದಿಲ್ಲ. ದೇಶದ ತುಂಬ ಇಂತಹ ಅನೇಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ.

ಬಿಜೆಪಿ ವಾಶಿಂಗ್ ಮಷೀನ್ ನಲ್ಲಿ ಭ್ರಷ್ಟಾತಿ‌ ಭ್ರಷ್ಟರೂ ಸ್ವಚ್ಛವಾಗಿ ಹೊರಬೀಳುತ್ತಾರೆ ಎಂಬ ವ್ಯಂಗ್ಯವನ್ನು ಮೋದಿಯವರು ನೋಡಿಯೂ ನೋಡದಂತಿದ್ದಾರೆ. ಭಾರೀ ವಂತಿಗೆ ನೀಡುವ ಲಾಟರಿ ದೊರೆಯೊಬ್ಬನಿಗೆ ಜೈಲುಗಳೇ ಹೆದರುತ್ತವೆ. ಆತನ ಮಗನಿಗೆ ಬಿಜೆಪಿಯ ಬಾಗಿಲುಗಳು ತೆರೆಯುತ್ತವೆ. ಕಂಪ್ಟ್ರೋಲರ್ ಮತ್ತು ಅಕೌಂಟೆಂಟ್ ಜನರಲ್ (ಸಿಎಜಿ) ಕಟು ಟೀಕೆಗೆ ಗುರಿ ಮಾಡಿದ್ದ ಎಂಜಿನಿಯರಿಂಗ್ ಕಂಪನಿಯೊಂದಕ್ಕೆ 14,400 ಕೋಟಿ ರುಪಾಯಿಗಳ ಸರ್ಕಾರಿ ಗುತ್ತಿಗೆ ದೊರೆತ ಪವಾಡ ಮೋದಿಯವರ ಮೂಗಿನ ಕೆಳಗೇ ನಡೆಯುತ್ತದೆ. ಒಂದು ಕೈಯಿಂದ ಭಾರತೀಯ ಜನತಾ ಪಕ್ಷಕ್ಕೆ ಕೋಟ್ಯಂತರ ರುಪಾಯಿ ವಂತಿಗೆ ಪಡೆದು ಮತ್ತೊಂದು ಕೈಯಿಂದ ಭಾರೀ ಸರ್ಕಾರಿ ಗುತ್ತಿಗೆಗಳನ್ನು ನೀಡಿದ ಎಲೆಕ್ಟೋರಲ್ ಬಾಂಡ್ ಗಳನ್ನು ಸಂವಿಧಾನಬಾಹಿರ ವ್ಯವಹಾರ ಎಂದು ಸುಪ್ರೀಮ್ ಕೋರ್ಟ್ ತೀರ್ಪು ನೀಡಿದೆ. ತಮ್ಮ ಬೆನ್ನು ತಮಗೆ ಕಾಣುವುದಿಲ್ಲ ಎಂಬ ಗಾದೆ ಮಾತೊಂದಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಸಿನೆಮಾ ಟಿಕೆಟ್ ದರಗಳಿಗೆ ಸರ್ಕಾರಿ ಕಡಿವಾಣದ ಸಂಗತಿಯೇನು?

ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಲ್ಟಿಪ್ಲೆಕ್ಸ್ ಟಿಕೆಟ್ ದರಗಳನ್ನು...

ಈ ದಿನ ಸಂಪಾದಕೀಯ | ದೇವರು-ಧರ್ಮದ ದುರುಪಯೋಗ ಸಮಾಜಕ್ಕೆ ಒಳಿತು ಮಾಡುವುದಿಲ್ಲ

ಬಿಜೆಪಿ ಮತ್ತು ಸಂಘಪರಿವಾರದವರು ದೇವರು-ಧರ್ಮದಲ್ಲಿ ಸಂಘರ್ಷ ಹುಡುಕಿದ, ಕೆದಕಿದ, ಗುಲ್ಲೆಬ್ಬಿಸಿದ ಧರ್ಮಸ್ಥಳ-ದಸರಾದಲ್ಲಿ...

ಈ ದಿನ ಸಂಪಾದಕೀಯ | ‘ಆಳಂದ’ ಕ್ಷೇತ್ರದ ಆಕ್ಷೇಪಕ್ಕೆ ಅರೆಬರೆ ಉತ್ತರಕೊಟ್ಟ ಚುನಾವಣಾ ಆಯೋಗ

ಆಳಂದ ಕ್ಷೇತ್ರದ ಹಲವು ಮತದಾರರ ಹೆಸರನ್ನು ಅಳಿಸಿಹಾಕಲು ಯಾರು ಯತ್ನಿಸಿದ್ದರೋ ಅವರ...

ಈ ದಿನ ಸಂಪಾದಕೀಯ | ಜಿಎಸ್‌ಟಿ ದರ ಇಳಿಕೆ ಲಾಭ ಗ್ರಾಹಕರಿಗೆ ದೊರೆಯಲಿ!

ಬಹುತೇಕ ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ತೋರಿಕೆಗಾಗಿ ಕೊಂಚ ಕಡಿಮೆ ಮಾಡಿದರೂ,...

Download Eedina App Android / iOS

X