- ಭಾರತದಿಂದ ಗಡೀಪಾರಾಗುವ ಭೀತಿಯಲ್ಲಿದ್ದ ನಟ ಚೇತನ್
- ನ್ಯಾ. ಎಂ ನಾಗಪ್ರಸನ್ನ ಏಕಸದಸ್ಯ ಪೀಠದಿಂದ ವಿಚಾರಣೆ
ಕೇಂದ್ರ ಸರ್ಕಾರದಿಂದ ವೀಸಾ ರದ್ದುಗೊಳಿಸಿಕೊಂಡು ಭಾರತದಿಂದ ಗಡೀಪಾರಾಗುವ ಭೀತಿಯಲ್ಲಿದ್ದ ಕನ್ನಡದ ನಟ ಚೇತನ್‌ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಹೈಕೋರ್ಟ್ ಹಲವು ಷರತ್ತು ವಿಧಿಸಿ, ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರವು 2018ರಲ್ಲಿ ನಟ ಚೇತನ್‌ಗೆ ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನೀಡಿತ್ತು. ಆದರೆ, ನಟ ಚೇತನ್ ಇತ್ತೀಚಿನ ದಿನಗಳಲ್ಲಿ ಸಮುದಾಯಗಳ ಮಧ್ಯೆ ದ್ವೇಷ ಮೂಡಿಸುವ ಯತ್ನ ಹಾಗೂ ಭಾರತ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರವು ನೋಟಿಸ್ ನೀಡಿತ್ತು.
ನಟ ಚೇತನ್ ಇದಕ್ಕೆ ಉತ್ತರ ನೀಡಿದ್ದರು. ಆದರೆ, ಅವರ ಉತ್ತರಕ್ಕೆ ಸಮಾಧಾನವಾಗದ ಕೇಂದ್ರ ಸರ್ಕಾರವು ಒಸಿಐ ಕಾರ್ಡ್ ರದ್ದು ಮಾಡಿತ್ತು. ನಟ ಚೇತನ್ ಪರ ವಕೀಲರು “ಚೇತನ್ ಪರ ವಾದ ಆಲಿಸದೇ ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿರುವುದು ಸರಿಯಲ್ಲ” ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಸುದ್ದಿ ಓದಿದ್ದೀರಾ? ನಟಿ ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ : ಸಚಿವ ಆರ್ ಅಶೋಕ
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಎಎಜಿ ಅರುಣ್ ಶ್ಯಾಮ್, ಎಎಸ್ ಜಿ ಶಾಂತಿಭೂಷಣ್ “ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಲ್ಲದೇ, ಚೇತನ್ ನ್ಯಾಯಾಂಗದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಹಾಗಾಗಿ ಇವರ ವಿರುದ್ಧ ಕೈಗೊಂಡಿರುವ ಕ್ರಮಕ್ಕೆ ತಡೆ ನೀಡಬಾರದು” ಎಂದು ವಾದ ಮಂಡಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು “ನ್ಯಾಯಾಂಗದ ಬಗ್ಗೆ ನಟ ಚೇತನ್ ಟ್ವೀಟ್ ಮಾಡುವಂತಿಲ್ಲ. ವಿಚಾರಣೆಗೆ ಬಾಕಿಯಿರುವ ಕೇಸ್‌ಗಳ ಬಗ್ಗೆಯೂ ಟ್ವೀಟ್ ಮಾಡುವಂತಿಲ್ಲ. ಜೂ. 2ರವರೆಗೆ ನಟ ಚೇತನ್ ವಿರುದ್ಧ ಕ್ರಮ ಬೇಡ” ಎಂದು ಷರತ್ತು ವಿಧಿಸಿ, ಷರತ್ತುಬದ್ಧ ರಿಲೀಫ್ ನೀಡಿದೆ.