ಹೊಗೆರಹಿತ ಅಡುಗೆ ಕೋಣೆ: ಗ್ರಾಮೀಣ ಭಾರತ ಸಾಂಪ್ರದಾಯಿಕ ಉರುವಲಿಗೆ ಮರಳಲು ಇದು ಸಕಾಲವೆ?

Date:

Advertisements
ಅಡುಗೆ ಅನಿಲ ದರ ದುಬಾರಿಯಾಗಿರುವ ಈ ದಿನಗಳಲ್ಲಿ ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದ ಅಸ್ತ್ರ ಒಲೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ವೈವಿಧ್ಯಮಯ ಮಾದರಿಗಳಲ್ಲಿ ಲಭ್ಯವಿರುವ ಈ ಒಲೆಗಳಿಗೆ ತ್ಯಾಜ್ಯಗಳನ್ನೆ (ಬೆರಣಿ, ಒಣಗಿದ ಪುರುಳೆ) ಉರುವಲಾಗಿ ಬಳಸಬಹುದಾಗಿದೆ. ಅಲ್ಲದೆ ಸಣ್ಣ ಪ್ರಮಾಣದ ಕಟ್ಟಿಗೆಗಳನ್ನೂ ಉರುವಲಾಗಿ ಬಳಸುವ ಸುಧಾರಿತ ಒಲೆಯೂ ಈಗ ಲಭ್ಯವಿದೆ.

ಸೆಪ್ಟೆಂಬರ್ 7, 2019ರಂದು ‘ಹೊಗೆರಹಿತ ಅಡುಗೆ ಕೋಣೆ’ಗಳನ್ನು ಸೃಷ್ಟಿಸುವ ಶಪಥದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯನ್ನು ಘೋಷಿಸಿದರು. ಈ ಯೋಜನೆಯಡಿ, ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನಿಲ ಸಂಪರ್ಕ ದರವಾದ ರೂ. 1,600 ಅನ್ನು ಮನ್ನಾ ಮಾಡಿ, ಉಚಿತವಾಗಿ ಅನಿಲ ಸಂಪರ್ಕ ಒದಗಿಸುವ ಗುರಿಯನ್ನು ಹೊಂದಲಾಗಿತ್ತು. ಅಲ್ಲದೆ, ಯೋಜನೆ ಜಾರಿಯಾದ ಮೂರು ವರ್ಷಗಳೊಳಗೆ 5 ಕೋಟಿ ಹೆಚ್ಚುವರಿ ಸಂಪರ್ಕ ನೀಡುವ ಗುರಿಯನ್ನೂ ನಿಗದಿ ಪಡಿಸಿಕೊಳ್ಳಲಾಗಿತ್ತು.

ಈ ಯೋಜನೆ ಕೇವಲ ಮೂರು ವರ್ಷದ ಅವಧಿಯಲ್ಲೇ ಎಷ್ಟು ಕ್ರಾಂತಿಕಾರಕ ಯಶಸ್ಸು ಸಾಧಿಸಿತೆಂದರೆ, 2014ರವರೆಗೆ ಕೇವಲ 14 ಕೋಟಿಯಷ್ಟಿದ್ದ ಅಡುಗೆ ಅನಿಲ ಸಂಪರ್ಕವು ಮಾರ್ಚ್ 2023ರ ವೇಳೆಗೆ 31.36 ಕೋಟಿಗೆ ಏರಿಕೆಯಾಗಿತ್ತು. ಆದರೆ, ಇದೇ ವೇಳೆ 2014ರಲ್ಲಿ ರೂ. 414 ದರ ಹೊಂದಿದ್ದ 14.2 ಕೆಜಿಯ ಗೃಹ ಬಳಕೆಯ ಸಿಲಿಂಡರ್ ದರವು ಮಾರ್ಚ್ 1, 2023ರ ವೇಳೆಗೆ ರೂ. 1103ಕ್ಕೆ ಏರಿಕೆಯಾಗಿತ್ತು. ಹೀಗಾಗಿ ನಿಷ್ಕ್ರಿಯ ಅಡುಗೆ ಅನಿಲ ಸಂಪರ್ಕಗಳ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದ್ದು, ಈಗ ಗ್ರಾಮೀಣ ಭಾರತ ಮತ್ತೆ ಸಾಂಪ್ರದಾಯಿಕ ಸೌದೆ ಉರುವಲಿನತ್ತ ಮುಖ ಮಾಡಿದೆ.

ಸಾಂಪ್ರದಾಯಿಕ ಒಲೆಗಳಲ್ಲಿ ಬಳಸಲಾಗುವ ಉರುವಲು ಅರ್ಧದಷ್ಟು ಮಾತ್ರ ದಹನವಾಗುವುದರಿಂದ ಹೊಗೆ ಕೂಡಾ ದಟ್ಟವಾಗಿರುತ್ತದೆ. ಈ ಹೊಗೆಯ ಕಾರಣಕ್ಕೆ ಮಹಿಳೆಯರು ಶ್ವಾಸಕೋಶ ಸಂಬಂಧಿ ರೋಗಗಳು, ಉಬ್ಬಸ, ಅಸ್ತಮಾ ಇತ್ಯಾದಿಗಳಿಗೆ ತುತ್ತಾಗುತ್ತಿರುವುದು ಸರ್ವೇಸಾಮಾನ್ಯ ಸಂಗತಿಯಾಗಿದೆ. ಹೀಗಾಗಿ ಹೊಗೆರಹಿತ ಅಡುಗೆ ಮನೆಗಳನ್ನು ಸೃಷ್ಟಿಸುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಜ್ಞೆಯು ಗ್ರಾಮೀಣ ಭಾರತಕ್ಕೆ ಆಕರ್ಷಕವಾಗಿ ಕಂಡಿದ್ದರಲ್ಲಿ ಅಚ್ಚರಿಯೇನೂ ಇರಲಿಲ್ಲ. ಹೀಗಾಗಿಯೇ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅಡುಗೆ ಅನಿಲ ಪರಿಚಯವಾದಾಗಿನಿಂದ 2014ರವರೆಗೆ ಕೇವಲ 14 ಕೋಟಿ ಅಡುಗೆ ಅನಿಲ ಸಂಪರ್ಕಗಳಿದ್ದ ಜಾಗದಲ್ಲಿ 2023ರ ವೇಳೆಗೆ 31.36 ಕೋಟಿಗೆ ಏರಿಕೆಯಾಗಿದ್ದು. ಅರ್ಥಾತ್ ಸರಿಸುಮಾರು ಮೂರು ಪಟ್ಟು ಅಡುಗೆ ಅನಿಲ ಸಂಪರ್ಕಗಳನ್ನು ಕೇವಲ 9 ವರ್ಷದ ಅವಧಿಯಲ್ಲೇ ಒದಗಿಸಲಾಗಿತ್ತು. ಈ ಪೈಕಿ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಪಡೆದಿರುವ ಗ್ರಾಮೀಣ ಭಾಗದ ಜನರ ಸಂಖ್ಯೆಯೇ ಅತ್ಯಧಿಕವಾಗಿದೆ.

Advertisements

ಆದರೆ, ಇದೇ ವೇಳೆ ಅಡುಗೆ ಅನಿಲ ಸಿಲಿಂಡರ್ ದರವೂ ಸುಮಾರು ಮೂರು ಪಟ್ಟು ಏರಿಕೆಯಾಗಿದ್ದರಿಂದ ಗ್ರಾಮೀಣ ಭಾಗದ ಆರ್ಥಿಕ ಆರೋಗ್ಯವೇ ಏರುಪೇರಾಯಿತು. 14.2 ಕೆಜಿಯ ಒಂದು ಅಡುಗೆ ಅನಿಲ ಸಿಲಿಂಡರ್‍‌ಗೆ ಪ್ರತಿ ತಿಂಗಳು ರೂ. 1000ಕ್ಕಿಂತ ಹೆಚ್ಚು ಹಣ ಹೊಂದಿಸಿಕೊಳ್ಳಬೇಕಾದ ಸವಾಲು ಗ್ರಾಮೀಣ ವಾಸಿಗಳಿಗೆ ಎದುರಾಯಿತು. ಇದರಿಂದ ನಿಷ್ಕ್ರಿಯ ಅಡುಗೆ ಅನಿಲ ಸಂಪರ್ಕಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಗ್ರಾಮೀಣ ಭಾಗದ ಜನರು ಮತ್ತೆ ಸೌದೆ ಉರುವಲಿನತ್ತ ಮುಖ ಮಾಡಿರುವ ವರದಿಗಳು ಪ್ರತಿನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ.

ಹೊಗೆರಹಿತ ಒಲೆ
ಹೊಗೆರಹಿತ ಒಲೆ

ಹಾಗಾದರೆ, ಉಜ್ವಲ ಯೋಜನೆ ಗ್ರಾಮೀಣ ಭಾಗದ ಜನರ ಪಾಲಿಗೆ ಹೊರೆಯಾಗಿ ಪರಿಣಮಿಸಿತೆ ಎಂದು ಪ್ರಶ್ನಿಸಿದರೆ, ಸ್ಥಳೀಯ ವಾಸ್ತವಗಳ ಆಧಾರದಲ್ಲಿ ಹೌದು ಎಂಬ ಉತ್ತರವೇ ದೊರೆಯುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸೌದೆ, ಪುರುಳೆ, ತೆಂಗಿನ ಚಿಪ್ಪು, ತೆಂಗಿನ ಮಟ್ಟೆ ಇತ್ಯಾದಿ ಸಾಂಪ್ರದಾಯಿಕ ಉರುವಲುಗಳು ಹೇರಳವಾಗಿ ದೊರೆಯುತ್ತವೆ. ಗ್ರಾಮೀಣ ಭಾಗದ ಅಲ್ಲಲ್ಲಿ ಸಣ್ಣ ಪ್ರಮಾಣದ ಕಾಡುಗಳೂ ಇರುವುದರಿಂದ ಒಣಗಿದ ಸೌದೆಯನ್ನು ಸಂಗ್ರಹಿಸುವುದು ಗ್ರಾಮೀಣರ ಪಾಲಿಗೆ ಎಂದಿಗೂ ಹೊರೆಯಾಗಿರಲಿಲ್ಲ ಹಾಗೂ ಅಂತಹ ಸೌದೆಗಳಿಗೆ ದುಡ್ಡು ತೆರಬೇಕಾದ ಅಗತ್ಯವೂ ಬಿದ್ದಿರಲಿಲ್ಲ. ಆದರೆ, ಈ ಸಾಂಪ್ರದಾಯಿಕ ಉರುವಲಿನಿಂದ ಗ್ರಾಮೀಣ ಮಹಿಳೆಯರು ಎದುರಿಸುತ್ತಿದ್ದ ಬಹು ದೊಡ್ಡ ತೊಡಕು ದಟ್ಟ ಹೊಗೆ.

ಈ ದಟ್ಟ ಹೊಗೆಯಿಂದ ಅಡುಗೆ ಕೋಣೆಯ ಗೋಡೆಗಳು ಕಪ್ಪಿಡುವುದರೊಂದಿಗೆ, ಅದರಿಂದ ಹೊರಬೀಳುವ ದಟ್ಟ ಹೊಗೆಯಿಂದ ಗ್ರಾಮೀಣ ಮಹಿಳೆಯರು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಹೆಚ್ಚಾಗಿ ತುತ್ತಾಗುತ್ತಿದ್ದರು. ಹೀಗಾಗಿ ಉಜ್ವಲ ಯೋಜನೆ ಪ್ರಾಯೋಗಿಕವಾಗಿ ಉತ್ತಮ ಆಶಯದ ಯೋಜನೆಯೇ ಆಗಿತ್ತು. ಆದರೆ, ಅಡುಗೆ ಅನಿಲ ಸಿಲಿಂಡರ್ ಅನ್ನು ಖರೀದಿಸಲು ರೂ. 1,000ಕ್ಕಿಂತ ಹೆಚ್ಚು ಮೊತ್ತವನ್ನು ಭರಿಸಬೇಕಾದ ಸ್ಥಿತಿ ಸೃಷ್ಟಿಯಾಗಿದ್ದರಿಂದ ಗ್ರಾಮೀಣ ಭಾಗದ ಜನರಿಗೆ ಜೀವನ ನಿರ್ವಹಣೆ ದುಸ್ತರವಾಗಿ ಬದಲಾಯಿತು. ಹೀಗಾಗಿಯೇ ಮೊದಲಿಗೆ ಗ್ರಾಮೀಣ ಭಾರತಕ್ಕೆ ಆಕರ್ಷಕವಾಗಿ ಕಂಡಿದ್ದ ಉಜ್ವಲ ಯೋಜನೆ, ಕ್ರಮೇಣ ಹೊರೆಯಾಗಿ ಪರಿಣಮಿಸಿತು. ಇದರಿಂದಾಗಿ ಗ್ರಾಮೀಣ ಭಾರತ ಮತ್ತೆ ಸಾಂಪ್ರದಾಯಿಕ ಉರುವಲಿನತ್ತ ಮರಳುತ್ತಿದೆ. ಈ ಹಿಂಚಲನೆಯನ್ನು ನಕಾರಾತ್ಮಕವಾಗಿ ಪರಿಗಣಿಸುವ ಬದಲು, ಆರ್ಥಿಕ ದೃಷ್ಟಿಕೋನದಲ್ಲಿ ಪರಿಶೀಲಿಸಿ, ಈ ಹಿಂಚಲನೆಯನ್ನೂ ಗ್ರಾಮೀಣ ಭಾರತದ ಪಾಲಿಗೆ ಸಕಾರಾತ್ಮಕವಾಗಿಸುವ ದಿಕ್ಕಿನಲ್ಲಿ ಆಳುವವರು, ನವೋದ್ಯಮಗಳು ಮುಂದಾಗಬೇಕಿದೆ.

ಹಿಂದೆಲ್ಲ ಅಡುಗೆ ಅನಿಲ ಸಂಪರ್ಕಗಳಿಲ್ಲದಿದ್ದಾಗ ಗ್ರಾಮೀಣ ಭಾಗಗಳಲ್ಲಿ ಸೌದೆ, ಪುರುಳೆ, ತೆಂಗಿನ ಚಿಪ್ಪು, ತೆಂಗಿನ ಮಟ್ಟೆ, ನೀಲಗಿರಿ ತರಗೆಲೆಗಳು ಪ್ರಮುಖ ಉರುವಲಾಗಿದ್ದವು. ಇದಲ್ಲದೆ, ಸೌದೆ ವ್ಯಾಪಾರಿಗಳು ಸೌದೆ ಪೂರೈಸಲೆಂದೇ ಖಾಸಗಿ ಜಮೀನುಗಳಲ್ಲಿ ಸರ್ವೆ ಮರ, ತಂಗಡಿ ಮರ, ನೀಲಗಿರಿ ಮರ, ಕಾಡು ಮರ, ಗೊಂಬೆ ಮರ, ಬೆಂಕಿ ಕಡ್ಡಿ ಮರ ಇತ್ಯಾದಿಗಳನ್ನು ಬೆಳೆಯಲಾಗುತ್ತಿತ್ತು. ಸೌದೆ ವ್ಯಾಪಾರ ವಾಣಿಜ್ಯ ವ್ಯವಹಾರವಾಗಿದ್ದುದರಿಂದ, ಈ ಸೌದೆಗಾಗಿ ಉರುವಲು ಯೋಗ್ಯ ಮರಗಳನ್ನು ಬೆಳೆಯಲೇಬೇಕಿತ್ತು. ಇದರಿಂದ ಗ್ರಾಮೀಣ ಭಾಗದ ಹವಾಮಾನವೂ ಸಮತೋಲಿತವಾಗಿರುತ್ತಿತ್ತು.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಜೈಲಿಗೆ ಕಳಿಸುವ ಮೋದಿ ಗ್ಯಾರಂಟಿಯು ‘ಜನತಂತ್ರದ ಜನನಿ’ಯ ಅಣಕ ಅಲ್ಲವೇ?

ಆದರೆ, ಮನುಕುಲದ ಜನಸಂಖ್ಯೆ ಅಂಕೆ ಮೀರಿ ಸ್ಫೋಟಗೊಂಡಿದ್ದರಿಂದ, ನಗರೀಕರಣದ ನೆಪದಲ್ಲಿ ವೃಕ್ಷ ಸಂಪತ್ತಿನ ಹನನ ಪ್ರಾರಂಭಗೊಂಡಿತು. ಅದು ಈಗಲೂ ಎಗ್ಗಿಲ್ಲದೆ ಮುಂದುವರಿದಿದೆ. ಹೀಗಾಗಿ ವಾತಾವರಣಕ್ಕೆ ದೊಡ್ಡ ಪ್ರಮಾಣದಲ್ಲಿ ಆಮ್ಲಜನಕ ಬಿಡುಗಡೆ ಮಾಡುವ ವೃಕ್ಷ ಸಂಪತ್ತು ಕ್ರಮೇಣ ಕ್ಷೀಣಿಸತೊಡಗಿದೆ. ಇದರೊಂದಿಗೇ, ತಾನು ಬದುಕುಳಿಯಲು ಇಂಗಾಲದ ಡೈ ಆಕ್ಸೈಡ್ ಅನ್ನು ಆಶ್ರಯಿಸುವ ವೃಕ್ಷಗಳ ಸಂಖ್ಯೆ ಗಮನಾರ್ಹವಾಗಿ ಇಳಿಕೆಯಾಗಿರುವುದರಿಂದ ಪಳೆಯುಳಿಕೆ ಇಂಧನ ಚಾಲಿತ ವಾಹನಗಳು ಉಗುಳುವ ಇಂಗಾಲದ ಡೈ ಆಕ್ಸೈಡ್ ಅನಿಲವು ನೇರವಾಗಿ ವಾತಾವರಣ ಸೇರ್ಪಡೆಯಾಗತೊಡಗಿದೆ. ಈ ಮಾರಣಾಂತಿಕ (ಇದರೊಂದಿಗೆ ಇಂಗಾಲದ ಮಾನಾಕ್ಸೈಡ್, ಸಲ್ಫರ್, ಸೀಸ, ನೈಟ್ರೋಜನ್‌ನಂತಹ ಮಾರಣಾಂತಿಕ ರಾಸಾಯನಿಕಗಳೂ ವಾತಾವರಣಕ್ಕೆ ಸೇರ್ಪಡೆಯಾಗುತ್ತಿವೆ) ಅನಿಲದ ಕಾರಣಕ್ಕೆ ಭೂಮಿಯ ವಾತಾವರಣವು ಬಿಸಿಯೇರತೊಡಗಿದೆ. ಈ ಪ್ರಕ್ರಿಯೆಯಲ್ಲಿ ಪಳೆಯುಳಿಕೆ ಇಂಧನವಾದ ದ್ರವೀಕೃತ ಪೆಟ್ರೋಲಿಯಂ ಅನಿಲದಂತಹ ಪೆಟ್ರೋಲಿಯಂ ಉತ್ಪನ್ನಗಳದ್ದೇ ಗರಿಷ್ಠ ಕೊಡುಗೆಯಾಗಿದೆ.

ಇಂತಹ ಹೊತ್ತಿನಲ್ಲಿ ನೈಸರ್ಗಿಕ ಸಮತೋಲನ ಹಾಗೂ ಗ್ರಾಮೀಣ ಭಾಗದ ಆರ್ಥಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಸೌದೆ, ಪುರುಳೆ, ತೆಂಗಿನ ಚಿಪ್ಪು, ತೆಂಗಿನ ಮಟ್ಟೆ, ಬೆರಣಿ ಇತ್ಯಾದಿ ಸಾಂಪ್ರದಾಯಿಕ ಉರುವಲುಗಳತ್ತ ಮರಳಲು ಇದು ಸಕಾಲವಾಗಿದೆ.

ಅಸ್ತ್ರ ಒಲೆ

ಸಾಂಪ್ರದಾಯಿಕ ಒಲೆಗಳ ಬಳಕೆಯಲ್ಲಿರುವ ಪ್ರಮುಖ ತೊಡಕು ಅವು ಬಿಡುಗಡೆ ಮಾಡುವ ದಟ್ಟ ಹೊಗೆ. ಈ ಸಮಸ್ಯೆಯನ್ನು ಅರಿತಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಾಗಿದ್ದ ಎ.ಕೆ.ಎನ್.ರೆಡ್ಡಿ, ಮಾಧವ ಗಾಡ್ಗೀಳ್ ಹಾಗೂ ರೊದ್ದಂ ನರಸಿಂಹ ಅವರು ಸತೀಶ್ ಧವನ್ ಅವರು ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾಗಿದ್ದಾಗ ಅಸ್ತ್ರ (ಸೆಂಟರ್ ಫಾರ್ ಅಪ್ಲಿಕೇಶನ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಫಾರ್ ರೂರಲ್ ಏರಿಯಾ) ಎಂಬ ಉಪಕ್ರಮಕ್ಕೆ ಚಾಲನೆ ನೀಡಿದ್ದರು. ಆದರೆ, ಈ ಉಪಕ್ರಮಕ್ಕೆ ಆರಂಭದ ದಿನಗಳಲ್ಲಿ ಅಂತಹ ಉತ್ತಮ ಸ್ಪಂದನೆ ದೊರೆಯದಿದ್ದುದರಿಂದ ಸುಧಾರಿತ ಅಸ್ತ್ರ ಒಲೆಗಳು ಹಿನ್ನೆಲೆಗೆ ಸರಿದಿದ್ದವು. ಆದರೆ, ಅಡುಗೆ ಅನಿಲ ದರ ದುಬಾರಿಯಾಗಿರುವ ಈ ದಿನಗಳಲ್ಲಿ ಭಾರತೀಯ ವಿಜ್ಞಾನಿಗಳು ಸಂಶೋಧಿಸಿದ್ದ ಅಸ್ತ್ರ ಒಲೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ವೈವಿಧ್ಯಮಯ ಮಾದರಿಗಳಲ್ಲಿ ಲಭ್ಯವಿರುವ ಈ ಒಲೆಗಳಿಗೆ ತ್ಯಾಜ್ಯಗಳನ್ನೆ (ಬೆರಣಿ, ಒಣಗಿದ ಪುರುಳೆ) ಉರುವಲಾಗಿ ಬಳಸಬಹುದಾಗಿದೆ. ಅಲ್ಲದೆ ಸಣ್ಣ ಪ್ರಮಾಣದ ಕಟ್ಟಿಗೆಗಳನ್ನೂ ಉರುವಲಾಗಿ ಬಳಸುವ ಸುಧಾರಿತ ಒಲೆಯೂ ಈಗ ಲಭ್ಯವಿದೆ. ಸಾಂಪ್ರದಾಯಿಕ ಒಲೆಗಳು ಉಗುಳುವ ಹೊಗೆಯ ಪ್ರಮಾಣಕ್ಕಿಂತ ಶೇ. 40ರಷ್ಟು ಕಡಿಮೆ ಹೊಗೆ ಈ ಅಸ್ತ್ರ ಒಲೆಗಳಿಂದ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

ಹೊಗೆರಹಿತ ಒಲೆ
ಹೊಗೆರಹಿತ ಒಲೆ

ಇದರೊಂದಿಗೆ ಖಾಸಗಿ ನವೋದ್ಯಮಿಯೊಬ್ಬರು ‘ದೇಶಿ’ ಎಂಬ ಸುಧಾರಿತ ಸಾಂಪ್ರದಾಯಿಕ ಒಲೆಯನ್ನು ಅನ್ವೇಷಿಸಿದ್ದು, ಈ ಒಲೆ ಸಾಂಪ್ರದಾಯಿಕತೆ ಹಾಗೂ ತಂತ್ರಜ್ಞಾನದ ಸಮತೋಲಿತ ಮಿಶ್ರಣವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳು ಭೂಮಿಯ ತಾಪಮಾನ ಏರಿಕೆಯಲ್ಲಿ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತಿರುವುದರಿಂದ, ಆಳುವ ಸರಕಾರಗಳು ಸುಧಾರಿತ ಸಾಂಪ್ರದಾಯಿಕ ಒಲೆಗಳನ್ನು ಆವಿಷ್ಕರಿಸಲು ಮುಂದೆ ಬರುತ್ತಿರುವ ನವೋದ್ಯಮಿಗಳಿಗೆ ಸೂಕ್ತ ಅನುದಾನ, ವಿನಾಯಿತಿಗಳನ್ನು ಒದಗಿಸಿ, ಈ ಸುಧಾರಿತ ಸಾಂಪ್ರದಾಯಿಕ ಒಲೆಗಳ ಬಳಕೆ ಕ್ರಾಂತಿಯ ಸ್ವರೂಪ ಪಡೆದುಕೊಳ್ಳುವಂತೆ ನೋಡಿಕೊಳ್ಳಬೇಕಿದೆ. ಆಗ ಪೆಟ್ರೋಲಿಯಂ ಉತ್ಪನ್ನಗಳ ಆಮದಿಗೆ ಮಾಡಲಾಗುತ್ತಿರುವ ವಿದೇಶಿ ವಿನಿಮಯ ವೆಚ್ಚವು ತಗ್ಗಿ, ಗ್ರಾಮೀಣ ಭಾಗದ ಆರ್ಥಿಕ ಆರೋಗ್ಯವೂ ಸುಧಾರಿಸಲಿದೆ. ಸಾಂಪ್ರದಾಯಿಕ ಒಲೆಗಳಲ್ಲಿ ಕಟ್ಟಿಗೆಯೇ ಪ್ರಮುಖ ಉರುವಲಾಗಿರುವುದರಿಂದ ರೈತರು ಮತ್ತೆ ತಮ್ಮ ಹೊಲದ ಬದುಗಳಲ್ಲಿ ಉರುವಲಿಗೆ ಯೋಗ್ಯವಾದ ಮರಗಳನ್ನು ಬೆಳೆದು, ಸ್ವಂತ ಬಳಕೆಗೆ ಮುಂದಾಗುವ ಪ್ರವೃತ್ತಿಯೂ ದುಪ್ಪಟ್ಟಾಗಲಿದೆ. ಇದೆಲ್ಲದರಿಂದ ಭೂಮಿಯ ಮೇಲಿನ ಹಸಿರು ಹೊದಿಕೆ ಗಮನಾರ್ಹ ಪ್ರಮಾಣದಲ್ಲಿ ವೃದ್ಧಿಯಾಗಿ, ಏರುತ್ತಿರುವ ಭೂಮಿಯ ತಾಪಮಾನವೂ ನಿಯಂತ್ರಣಕ್ಕೆ ಬರಲಿದೆ.

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸದಾನಂದ ಗಂಗನಬೀಡು
ಸದಾನಂದ ಗಂಗನಬೀಡು
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X